ಜೈಪುರ: ಉದಯಪುರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಉದಯ್ ಪುರದ ಟೈಲರ್ ಕನ್ಹಯ್ಯಾಲಾಲ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆ ಮಾಡಿದ ಮತ್ತು ಸಂಚು ರೂಪಿಸಿದ ಆರೋಪದ ಮೇರೆಗೆ ಈವರೆಗೂ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಪ್ರಕರಣದ 8ನೇ ಆರೋಪಿ ಬಂಧಿಸಲಾಗಿದ್ದು, ಮೊಹಮ್ಮದ್ ಜಾವೇದ್ (19) ಎಂಬಾತನನ್ನು ನಿನ್ನೆ (ಜುಲೈ 21) ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
19 ವರ್ಷದ ಮೊಹಮ್ಮದ್ ಜಾವೇದ್ ಕನ್ಹಯ್ಯಾ ಲಾಲ್ ಹತ್ಯೆಯ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದ್ದು, ಅವರು ಕನ್ಹಯ್ಯಾ ಅಂಗಡಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕೊಲೆಗಾರ ರಿಯಾಜ್ ಅಟ್ಟಾರಿಗೆ ಈತನೇ ರವಾನಿಸಿದ್ದ ಎನ್ನಲಾಗಿದೆ.
ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಜುಲೈ 9 ರಂದು ಎನ್ಐಎ ಏಳನೇ ಬಂಧನವನ್ನು ಮಾಡಿತ್ತು. ಬಂಧಿತನನ್ನು ಫರ್ಹಾದ್ ಮೊಹಮ್ಮದ್ ಶೇಖ್ ಪ್ರಮುಖ ಆರೋಪಿ ರಿಯಾಜ್ ಅತ್ತಾರಿಯ ನಿಕಟ ಸಹಚರ ಎಂದು ಹೇಳಲಾಗಿದೆ ಮತ್ತು ಈತ ಟೈಲರ್ ಹತ್ಯೆ ಮಾಡುವ ಸಂಚಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು.
ಈತನೂ ಸೇರಿದಂತೆ ಹಂತಕರಾದ ರಿಯಾಜ್ ಅತ್ತಾರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ನ್ಯಾಯಾಲಯ ಆಗಸ್ಟ್ 1 ರವರೆಗೆ NIA ಕಸ್ಟಡಿಗೆ ಕಳುಹಿಸಿತ್ತು. ಇತರ ನಾಲ್ವರು ಆರೋಪಿಗಳಾದ ಮೊಹ್ಸಿನ್, ಆಸಿಫ್, ಮೊಹಮ್ಮದ್ ಮೊಹ್ಸಿನ್ ಮತ್ತು ವಾಸಿಂ ಅಲಿ ಈಗಾಗಲೇ ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
Advertisement