ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ: ಅಖಿಲೇಶ್ ಮಿತ್ರ ರಾಜ್ ಭರ್ ಗೆ 'ವೈ' ಕೆಟಗರಿ ಭದ್ರತೆ ನೀಡಿದ ಯೋಗಿ ಆದಿತ್ಯನಾಥ್
ಲಖನೌ: ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್ ಭರ್ ಗೆ ಉತ್ತರ ಪ್ರದೇಶ ಸರ್ಕಾರ 'ವೈ' ಕೆಟಗರಿಯ ಭದ್ರತೆ ನೀಡಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಈ ಕೆಟಗರಿಯ ಭದ್ರತೆಯಡಿ ಇಬ್ಬರು ಆಪ್ತ ಭದ್ರತಾ ಅಧಿಕಾರಿಗಳು ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ.
ಜುಲೈ 18 ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರಿಗೆ ಮತ ಚಲಾಯಿಸಿದ ಕಾರಣಕ್ಕೆ ರಾಜ್ ಭರ್ ಗೆ ವೈ ಕೆಟಗರಿಯ ಭದ್ರತೆ ಒದಗಿಸಲಾಗಿದೆ. ಎಸ್ ಬಿಎಸ್ ಪಿ ಅಧ್ಯಕ್ಷ ರಾಜ್ ಭರ್ ಗೆ ವೈ ಕೆಟಗರಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ವಿನಕ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸಿಂಗ್ ಎಡಿಜಿಪಿಗೆ ಸೂಚಿಸಿದ್ದಾರೆ.
ಇದೇ ವರ್ಷ ನಡೆದ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೈತ್ರಿಯೊಂದಿಗೆ ಎಸ್ ಬಿಎಸ್ ಪಿ ಸ್ಪರ್ಧಿಸಿತ್ತು.ಆದಾಗ್ಯೂ, ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ ಭರ್ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ