ಸಚಿವರ ಆಪ್ತೆ ಮನೆಲ್ಲಿ 20 ಕೋಟಿ ಜಪ್ತಿ: ಬಂಧಿತ ಸಚಿವ ಪಾರ್ಥ ಸಾರಥಿ ಪ್ರಕರಣದಲ್ಲಿ ಪಕ್ಷ ಮಧ್ಯೆ ಪ್ರವೇಶಿಸಲ್ಲ- ಟಿಎಂಸಿ
ಕೋಲ್ಕತ್ತಾ: ಬಂಧಿತ ಬಂಗಾಳದ ಸಚಿವ ಪಾರ್ಥ ಚಟರ್ಜಿ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಕಾಲಮಿತಿಯ ತನಿಖೆಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಒತ್ತಾಯಿಸಿದೆ. ಪಕ್ಷದ ಯಾವುದೇ ನಾಯಕರು ಯಾವುದೇ ತಪ್ಪು ಮಾಡಿದ್ದರೆ ಅದರಲ್ಲಿ ಪಕ್ಷವು ರಾಜಕೀಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಪಾದಿಸಿದೆ.
ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣದ ಜಾಡು ಹಿಡಿದಿರುವ ತನಿಖೆಯ ಭಾಗವಾಗಿ ಇಡಿ ಸಿಬ್ಬಂದಿ ಜುಲೈ 22 ರಂದು ಬಂಗಾಳದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ಹಿಂದೆ ಶಿಕ್ಷಣ ಖಾತೆಯನ್ನು ಹೊಂದಿದ್ದ ಕೈಗಾರಿಕಾ ಸಚಿವ ಚಟರ್ಜಿಯವರ ನಿಕಟವರ್ತಿಯಾಗಿರುವ ಮಹಿಳೆಯೊಬ್ಬರ ನಿವಾಸದಿಂದ ಕನಿಷ್ಠ 20 ಕೋಟಿ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿರುವ ಮಹಿಳೆಯೊಂದಿಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಕೆಲವು ಪ್ರಕರಣಗಳಲ್ಲಿ ಕೇಂದ್ರೀಯ ಸಂಸ್ಥೆಗಳ ತನಿಖೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡ ಅವರು, ಪ್ರಕರಣದಲ್ಲಿ ಕಾಲಮಿತಿಯ ತನಿಖೆಗೆ ಪಕ್ಷವು ಒತ್ತಾಯಿಸುತ್ತದೆ ಎಂದರು.
ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣವನ್ನು 2014 ರಿಂದ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ 2016 ರ ಚುನಾವಣೆಗೆ ಮುಂಚಿತವಾಗಿ ತೆರೆದುಕೊಂಡಿರುವ ನಾರದ ಟೇಪ್ ಪ್ರಕರಣವು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಎಷ್ಟೇ ದೊಡ್ಡ ನಾಯಕ ಹಗರಣದಲ್ಲಿ ತೊಡಗಿಸಿಕೊಂಡರೂ ತೃಣಮೂಲ ಕಾಂಗ್ರೆಸ್ ಮಧ್ಯಪ್ರವೇಶಿಸುವುದಿಲ್ಲ ಎಂದು ಘೋಷ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ