ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ರತಿಭಟನೆಯ ಬಿಸಿ: ಅಗ್ನಿಪಥ ಯೋಜನೆಯ ಮೊದಲ ಬ್ಯಾಚ್‌ನ ವಯೋಮಿತಿ 23 ವರ್ಷಕ್ಕೆ ಏರಿಕೆ!

ಸೇನಾ ನೇಮಕಾತಿ ಅಗ್ನಿಪಥ ಹೊಸ ಮಾದರಿ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ 2022ನೇ ಸಾಲಿನ ಅಗ್ನಿಪಥ ಯೋಜನೆಯಡಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ.

ನವದೆಹಲಿ: ಸೇನಾ ನೇಮಕಾತಿ ಅಗ್ನಿಪಥ ಹೊಸ ಮಾದರಿ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ 2022ನೇ ಸಾಲಿನ ಅಗ್ನಿಪಥ ಯೋಜನೆಯಡಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ.

ಕಳೆದ ಮಂಗಳವಾರ ಯೋಜನೆಯನ್ನು ಅನಾವರಣಗೊಳಿಸಿದ್ದ ಕೇಂದ್ರ ಸರ್ಕಾರ, ಎಲ್ಲಾ ಹೊಸ ನೇಮಕಾತಿಗಳಿಗೆ ಪ್ರವೇಶ ವಯಸ್ಸು 17ರಿಂದ  21 ವರ್ಷದೊಳಗೆ ಇರಬೇಕು ಎಂದು ಹೇಳಿತ್ತು. ಇನ್ನು ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯದೆ ಇದ್ದಿದ್ದರಿಂದ ಬಿಹಾರ, ಹರಿಯಾಣ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಯುವಕರು ಬೀದಿಗಿಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಇದೆಲ್ಲವನ್ನು ಮನಗಂಡಿರುವ ಕೇಂದ್ರ ಸರ್ಕಾರ, 2022ರ ಪ್ರಸ್ತಾವಿತ ನೇಮಕಾತಿಗೆ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

2022 ರ ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ದೇಶದ ಕೆಲ ರಾಜ್ಯಗಳಲ್ಲಿ 'ಅಗ್ನಿಪಥ' ಯೋಜನೆ ವಿರುದ್ದ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಉದ್ರಿಕ್ತ ಯುವಕರು ಕೆಲ ರೈಲುಗಳಿಗೆ ಬೆಂಕಿ ಹಚ್ಚಿದ್ದು ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಇದರಿಂದ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್‌ವರೆಗೆ, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಇಂದೋರ್‌ವರೆಗೆ ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ನೂರಾರು ಯುವ ಆಕಾಂಕ್ಷಿಗಳು ಬೀದಿಗಿಳಿದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯ ಮೇಲೆ ತಮ್ಮ ಕೋಪವನ್ನು ತೋರಿಸಿದ್ದರು. ನಾಲ್ಕು ವರ್ಷಗಳ ಕಡಿಮೆ ಅವಧಿಗೆ ಕಲ್ಪಿಸುವ ಯೋಜನೆಯ ವಿರುದ್ಧದ ಪ್ರತಿಭಟನೆಯ ಎರಡನೇ ದಿನವಾದ ಗುರುವಾರ, ಆಡಳಿತಾರೂಢ ಬಿಜೆಪಿ ಶಾಸಕ ಸೇರಿದಂತೆ, ರೈಲುಗಳಿಗೆ ಬೆಂಕಿ ಹಚ್ಚಿದ್ದರು. ಬಸ್‌ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದು ಬಿಹಾರದಲ್ಲಿ ದಾರಿಹೋಕರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ನಾವಡದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕಿ ಅರುಣಾದೇವಿ ಅವರ ವಾಹನದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದು, ಶಾಸಕರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಇನ್ನು ಪಲ್ವಾಲ್ ಜಿಲ್ಲಾಧಿಕಾರಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಐದು ಸರ್ಕಾರಿ ವಾಹನಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು.

Related Stories

No stories found.

Advertisement

X
Kannada Prabha
www.kannadaprabha.com