ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಕೇಸ್: ನಾಲ್ಕನೇ ಬಾರಿಗೆ ರಾಹುಲ್ ಇಡಿ ವಿಚಾರಣೆ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಬಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ವಿಚಾರಣೆಗೆ ಹಾಜರಾದರು.
ಝಡ್ ಪ್ಲಸ್ ಕ್ಯಾಟಗರಿಯ ಸಿಆರ್ ಪಿಎಫ್ ಸೆಕ್ಯೂರಿಟಿ ಎಸ್ಕಾರ್ಟ್ ನೊಂದಿಗೆ ಇಂದು ಬೆಳಗ್ಗೆ 11-05 ರಲ್ಲಿ ಸೆಂಟ್ರಲ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಡಿ ಕೇಂದ್ರ ಕಚೇರಿಗೆ 51 ವರ್ಷದ ರಾಹುಲ್ ಗಾಂಧಿ ಆಗಮಿಸಿದರು.
ಕಳೆದ ವಾರದಿಂದ ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ಇಡಿ ಕಚೇರಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಅರೆಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಳೆದ ವಾರ ಮೂರು ದಿನ ಇಡಿ ಕಚೇರಿಗಳಲ್ಲಿ ಸುಮಾರು 30 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರೊಂದಿಗೆ ಇರಬೇಕಾಗಿ ರಾಹುಲ್ ಮನವಿ ಮಾಡಿಕೊಂಡಿದ್ದರಿಂದ ನಾಲನೇ ದಿನದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಸೋನಿಯಾ ಗಾಂಧಿ ಅವರು ಜೂನ್ 23 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ