ಹಣ ಅಕ್ರಮ ವರ್ಗಾವಣೆ: ನವೆಂಬರ್ 9 ರಂದು ಸಂಜಯ್ ರಾವುತ್ ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪು ಪ್ರಕಟ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಬುಧವಾರ ಕಾಯ್ದಿರಿಸಿದೆ ಮತ್ತು ನವೆಂಬರ್ 9 ರಂದು ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಬುಧವಾರ ಕಾಯ್ದಿರಿಸಿದೆ ಮತ್ತು ನವೆಂಬರ್ 9 ರಂದು ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ.

ರಾವುತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು, ಪ್ರಕರಣದ ಸಹ-ಆರೋಪಿ ಪ್ರವೀಣ್ ರಾವುತ್ ಸಲ್ಲಿಸಿರುವ ಜಾಮೀನು ಅರ್ಜಿಯ ಬಗ್ಗೆ ನವೆಂಬರ್ 9 ರಂದು ಆದೇಶವನ್ನು ನೀಡುವುದಾಗಿ ಹೇಳಿದರು.

ಉಪನಗರ ಗೋರೆಗಾಂವ್ ಪ್ರದೇಶದಲ್ಲಿನ ಪತ್ರಾ ಚಾಲ್ (ಸಾಲು ವಠಾರ) ಮರುಅಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರದಲ್ಲಿನ ಅವರ ಪಾತ್ರಕ್ಕಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಈ ವರ್ಷದ ಜುಲೈನಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರನ್ನು ಬಂಧಿಸಿತ್ತು.

ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಸೆಂಟ್ರಲ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಕಳೆದ ತಿಂಗಳು ಅವರು ಈ ಪ್ರಕರಣದಲ್ಲಿ ಜಾಮೀನು ಕೋರಿದ್ದರು. ಇದನ್ನು ಇ.ಡಿ ವಿರೋಧಿಸಿತ್ತು.

2008 ರಲ್ಲಿ ಮಹಾರಾಷ್ಟ್ರ ಹೌಸಿಂಗ್ ಮತ್ತು ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (MHADA), ಸರ್ಕಾರಿ ಏಜೆನ್ಸಿಯು, ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (HDIL) ನ ಸಹೋದರ ಕಂಪನಿಯಾದ ಗುರು ಆಶಿಶ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ (GACPL) ಗೆ ಪತ್ರಾ ಚಾಲ್‌ ಮರುಅಭಿವೃದ್ಧಿ ಗುತ್ತಿಗೆಯನ್ನು ನೀಡಿತು.

ಗುರು ಆಶಿಶ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಬಾಡಿಗೆದಾರರಿಗೆ 672 ಫ್ಲಾಟ್‌ಗಳನ್ನು ನಿರ್ಮಿಸಬೇಕಾಗಿತ್ತು ಮತ್ತು ಕೆಲವು ಫ್ಲಾಟ್‌ಗಳನ್ನು ಮಹಾರಾಷ್ಟ್ರ ಹೌಸಿಂಗ್ ಮತ್ತು ಏರಿಯಾ ಡೆವಲಪ್‌ಮೆಂಟ್ ಅಥಾರಿಟಿಗೆ ನೀಡಬೇಕಿತ್ತು.

ಉಳಿದ ಭೂಮಿಯನ್ನು ಖಾಸಗಿ ಡೆವಲಪರ್‌ಗಳಿಗೆ ಮಾರಾಟ ಮಾಡಬಹುದಿತ್ತು. ಆದರೆ, ಕಂಪನಿಯು ಪತ್ರಾ ಚಾಲ್ ಅನ್ನು ಮರುಅಭಿವೃದ್ಧಿಗೊಳಿಸದ ಕಾರಣ ಮತ್ತು ಇ.ಡಿ ಪ್ರಕಾರ 1,034 ಕೋಟಿ ರೂ.ಗೆ ಇತರ ಬಿಲ್ಡರ್‌ಗಳಿಗೆ ಲ್ಯಾಂಡ್ ಪಾರ್ಸೆಲ್ ಮತ್ತು ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್‌ಐ) ಮಾರಾಟ ಮಾಡಿದ್ದರಿಂದ ಬಾಡಿಗೆದಾರರಿಗೆ ಕಳೆದ 14 ವರ್ಷಗಳಲ್ಲಿ ಒಂದೇ ಒಂದು ಫ್ಲಾಟ್ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com