ಪುಣೆ: ಕೋವಿಡ್ ಲಸಿಕೆ ತಯಾರಕ ಕಂಪನಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ)ಗೆ ಅದರ ಸಿಇಒ ಅದಾರ್ ಪೂನಾವಾಲ ಅವರ ಹೆಸರಿನಲ್ಲಿ 1.01 ಕೋಟಿ ರೂ.ಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ.
ದೂರಿನ ಪ್ರಕಾರ, ಸೀರಂ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರು ಎಸ್‌ಐಐ ಸಿಇಒ ಅದಾರ್ ಪೂನಾವಾಲಾ ಎಂಬ ವ್ಯಕ್ತಿಯಿಂದ ವಾಟ್ಸಾಪ್‌ನಲ್ಲಿ ಸಂದೇಶ ಸ್ವೀಕರಿಸಿದ್ದಾರೆ ಮತ್ತು ಆ ಸಂದೇಶದಲ್ಲಿ ಸೂಚಿಸಿದಂತೆ ಸೆಪ್ಟೆಂಬರ್ 2022 ರಲ್ಲಿ ಏಳು ವಿವಿಧ ಖಾತೆಗಳಿಗೆ ಹಣವನ್ನು ಕಳುಹಿಸಿದ್ದಾರೆ. ನಂತರ ಆ ಸಂದೇಶ ಅದಾರ್ ಪೂನಾವಾಲಾ ಅವರಿಂದ ಬಂದಿದ್ದಲ್ಲ. ಅವರ ಹೆಸರಿನಲ್ಲಿ ಯಾರೋ ದುಷ್ಕರ್ಮಿಗಳು ನಕಲಿ ಸಂದೇಶ ಕಳುಹಿಸಿ ಕಂಪನಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ವೇಳೆ ಪೊಲೀಸರು ಹಣ ವರ್ಗಾವಣೆ ಮಾಡಿರುವ ಎಂಟು ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
"ಈಗ ದೇಶದ ವಿವಿಧ ಭಾಗಗಳಿಂದ ಬಂಧಿತರಾಗಿರುವ ಈ ಏಳು ಜನರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬಹಿರಂಗವಾಗಿದೆ. ಆದರೆ, ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ" ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸ್ಮಾರ್ತನ ಪಾಟೀಲ್ ಹೇಳಿದ್ದಾರೆ.
ಆರೋಪಿಗಳ ಎಲ್ಲಾ ಖಾತೆಗಳನ್ನು ಮತ್ತು 40 ಇತರ ಖಾತೆಗಳನ್ನು ಸಹ ಜಪ್ತಿ ಮಾಡಲಾಗಿದೆ. ಈ ಎಂಟು ಖಾತೆಗಳಿಂದ ಹಣವನ್ನು ಮತ್ತಷ್ಟು ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಖಾತೆಗಳಲ್ಲಿದ್ದ 13 ಲಕ್ಷ ರೂ.ಗಳನ್ನು ನಾವು ಸೀಜ್ ಮಾಡಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ.
Advertisement