ಕೇಜ್ರಿವಾಲ್
ಕೇಜ್ರಿವಾಲ್

ಕೇಜ್ರಿವಾಲ್ ಆಪ್ತರಿಂದ ಜೈಲಿನಲ್ಲಿರುವ ಆಮ್ ಆದ್ಮಿ ಸಚಿವನ ವೀಡಿಯೋ, ಮಾಹಿತಿ ಸೋರಿಕೆ: ಬಿಜೆಪಿ 

 ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಕುರಿತಾದ ವೀಡಿಯೋ ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವುದು ದೆಹಲಿ ಸಿಎಂ ಕೇಜ್ರಿವಾಲ್ ಆಪ್ತರಿಂದ ಎಂದು ಬಿಜೆಪಿ ಆರೋಪಿಸಿದೆ.
Published on

ನವದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಕುರಿತಾದ ವೀಡಿಯೋ ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವುದು ದೆಹಲಿ ಸಿಎಂ ಕೇಜ್ರಿವಾಲ್ ಆಪ್ತರಿಂದ ಎಂದು ಬಿಜೆಪಿ ಆರೋಪಿಸಿದೆ.
 
ಬಿಜೆಪಿ ಆರೋಪಕ್ಕೆ ಆಮ್ ಆದ್ಮಿ ಪಕ್ಷ ತಕ್ಷಣವೇ ಪ್ರತಿಕ್ರಿಯೆ ನೀಡಿಲ್ಲ. ನ.27 ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್  ವಿಐಪಿ ಸೌಲಭ್ಯಗಳನ್ನು ಅನುಭವಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದ ಮೀಮ್ ಗಳಿಗೆ ಸಂಬಂಧಪಟ್ಟಿದ್ದೋ ಅಥವಾ ಪತ್ರಿಕೆಗಳ ಕಾರ್ಟೂನ್ ಗಳಿಗೆ ಸಂಬಂಧಿಸಿದ್ದೋ ಅಲ್ಲ ಅದು ನೈತಿಕತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ಬಳಿಕ ಸತ್ಯೇಂದ್ರ ಜೈನ್ ಸೆಲ್‌ನಲ್ಲಿ ಕ್ಲೀನಿಂಗ್ ಸೇವೆ: ವಿಡಿಯೋ ವೈರಲ್
 
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಮಸಾಜ್, ಜೈಲು ಅಧೀಕ್ಷಕರನ್ನು ಭೇಟಿ ಮಾಡುವುದು ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯುತ್ತಿರುವುದಕ್ಕೆ  ತೀವ್ರ ವಿವಾದಕ್ಕೀಡಾಗಿದ್ದಾರೆ.

ಸತ್ಯೇಂದ್ರ ಜೈನ್ ವಿಷಯವಾಗಿ ಕೇಜ್ರಿವಾಲ್ ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಂಬಿತ್ ಪಾತ್ರ ಆರೋಪಿಸಿದ್ದಾರೆ. ಭಾನುವಾರ ಹೊಸ ವೀಡಿಯೋ ಸೋರಿಕೆಯಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಬಿತ್ ಪಾತ್ರ, ಜೈನ್ ಅವರಿರುವ ಜೈಲು ಕೊಠಡಿಯನ್ನು ಶುಚಿಯಾಗಿಡುವುದಕ್ಕೆ 10 ಮಂದಿಯನ್ನು ನೇಮಕ ಮಾಡಲಾಗಿದೆ. ಇದು ಗಂಭೀರವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
 
ಜೈಲಿನ ಸಿಸಿಟಿವಿ ಕ್ಯಾಮರಾ ದೃಶ್ಯಗಳು ಸೋರಿಕೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಜೈನ್ ಈಗಾಗಲೇ ಕೋರ್ಟ್ ಮೊರೆ ಹೋಗಿದ್ದು, ದೃಶ್ಯಗಳು ಬಹಿರಂಗವಾಗದಂತೆ ಸೂಚನೆ ನೀಡುವುದಕ್ಕೆ ಮನವಿ ಮಾಡಿದ್ದಾರೆ. ಸತ್ಯೇಂದ್ರ ಜೈನ್ ಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದನ್ನು ಜಾರಿ ನಿರ್ದೇಶನಾಲಯ ಒಪ್ಪಿಕೊಂಡಿದ್ದು, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನೂ ಬಿಡುಗಡೆ ಮಾಡಿದೆ. 

ಈ ದೃಶ್ಯಗಳು ನಮಗೆ ಜೈಲಿನ ಅಧಿಕಾರಿಗಳು ನೀಡುತ್ತಿಲ್ಲ. ಇವುಗಳನ್ನು ಆಮ್ ಆದ್ಮಿ ಪಕ್ಷದವರೇ ಆದ ಕೇಜ್ರಿವಾಲ್ ಆಪ್ತರು ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com