ಭಾರತ್ ಜೋಡೋ ಯಾತ್ರೆ: ರಾಹುಲ್ 'ಪಪ್ಪು' ಅಲ್ಲ ಎಂಬುದು ಜನರಿಗೆ ಮನವರಿಕೆ- ಸಂಧ್ಯಾ ಗೋಖಲೆ
ಮುಂಬೈ: ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ 'ಪಪ್ಪು' ಇಮೇಜ್ ಸತ್ಯ ಅಲ್ಲ ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ ಎಂದು ಲೇಖಕಿ-ಚಿತ್ರ ನಿರ್ದೇಶಕಿ ಸಂಧ್ಯಾ ಗೋಖಲೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಧ್ಯಾ ಗೋಖಲೆ ಮತ್ತು ಅವರ ಪತಿ ನಟ ಅಮೋಲ್ ಪಾಲೇಕರ್, ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಪ್ರಜಾಸತಾತ್ಮಕ ಮೌಲ್ಯಗಳು ಕುಸಿತ ವಿರುದ್ಧ ಕೆಲವೇ ಕೆಲವು ಮಂದಿ ಮಾತನಾಡುತ್ತಿದ್ದಾರೆ. ತನಿಖಾ ಸಂಸ್ಥೆಗಳು ಅಥವಾ ಪೊಲೀಸರಿಂದ ಸಂಭಾವ್ಯ ದಾಳಿಗೆ ಹೆದರಿ ಬಹುತೇಕ ಸಿಬ್ಬಂದಿ ಹೆದರುತ್ತಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಈ ಧ್ವನಿಯನ್ನು ಅಡಗಿಸಲಾಗುತ್ತಿದೆಯೇ?ಎಂದು ಪ್ರಶ್ನಿಸಿದ ಸಂಧ್ಯಾ ಗೋಖಲೆ, ಕನಿಷ್ಠ ಪಕ್ಷ ರಾಹುಲ್ ಗಾಂಧಿಯಾದರೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಉತ್ಸಾಹದೊಂದಿಗೆ ಧೈರ್ಯ ತೋರಿಸುತ್ತಿದ್ದಾರೆ . ಹಾಗಾಗೀ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ದ್ವೇಷ ರಾಜಕೀಯ, ಧರ್ಮಾಂಧತೆ, ದಬ್ಬಾಳಿಕೆ ತಡೆಯುವುದರಲ್ಲಿ ನಾವು ನಂಬಿಕೆ ಹೊಂದಿರುತ್ತೇವೆ ಎಂದು ಅಮೋಲ್ ಪಾಲೇಕರ್ ಹೇಳಿದರು.
ನಮ್ಮ ಜೀವನದಲ್ಲಿ ಅನೇಕ ಆಯ್ಕೆಗಳು ಮತ್ತು ನಿರ್ಧಾರಗಳು ಅನೇಕ ಕಾರಣಗಳಿಂದ ನಿರ್ಬಂಧಿಸಲ್ಪಟ್ಟಿವೆ. ಸ್ವಯಂ ಸೆನ್ಸಾರ್‌ಶಿಪ್ ಸರ್ವತ್ರವಾಗಿದೆ. ಎಲ್ಲಾ ರೀತಿಯಲ್ಲೂ ನಮ್ಮ ಪ್ರಜಾತಂತ್ರದ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಭಿನ್ನಾಭಿಪ್ರಾಯವನ್ನು ದೇಶದ್ರೋಹದೊಂದಿಗೆ ಸಮೀಕರಿಸಲಾಗುತ್ತಿದೆ. ಪ್ರಾದೇಶಿಕ ಸಾಮಾಜಿಕ- ರಾಜಕೀಯ ಅಸಮಾನತೆ ಹೆಚ್ಚಾಗುತ್ತಿದೆ. ಕೆಲವೊಂದು ಉದ್ಯಮಿಗಳು ಮಾಧ್ಯಮಗಳು ಮತ್ತು ಮನೋರಂಜನಾ ಉದ್ಯಮನ್ನು ನಿಯಂತ್ರಿಸುತ್ತಿದ್ದಾರೆ. ಆ ಮೂಲಕ ಪ್ರಗತಿಪರ ಚಿಂತನೆಗಳನ್ನು ಅಳಿಸಿ, ಬಿಜೆಪಿಯ ಹಿಂದುತ್ವ ವಿವರಿಸುವ ಇತಿಹಾಸವನ್ನು ನಾಶಪಡಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾಗಿ ಸಂಧ್ಯಾ ಗೋಖಲೆ ತಿಳಿಸಿದರು.
ರಾಹುಲ್ ಗಾಂಧಿ ಯಾತ್ರೆಗೆ ದಕ್ಷಿಣ ಭಾರತದಲ್ಲಿ ಅಪಾರ ಬೆಂಬಲ ವ್ಯಕ್ತವಾಗಿದೆ. ಪ್ರಮುಖ ಮಾಧ್ಯಮಗಳು ಸುದ್ದಿ ಬಿತ್ತರಿಸದಿದ್ದರೂ, ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಸಿಗುತ್ತಿದೆ. ಮಾಧ್ಯಮಗಳು ಬಿಂಬಿಸಿರುವಂತೆ ರಾಹುಲ್ ಪಪ್ಪು ಇಮೇಜ್ ಸತ್ಯ ಅಲ್ಲ ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ. ಜನರು ರಾಹುಲ್ ಜೊತೆಗೆ ನೇರವಾಗಿ ಸಂವಾದ ನಡೆಸುತ್ತಿದ್ದಾರೆ. ಆತನ ದುರ್ಬಲತೆಯು ಆತನ ದೊಡ್ಡ ಶಕ್ತಿಯಾಗಿದೆ ಎಂದು ಸಂಧ್ಯಾ ಗೋಖಲೆ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ