ದೆಹಲಿ ಒಳಚರಂಡಿ ಸಾವು ಪ್ರಕರಣ: ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ಡಿಡಿಎಗೆ ಹೈಕೋರ್ಟ್ ಆದೇಶ

ಕಳೆದ ತಿಂಗಳು ಒಳಚರಂಡಿಯೊಳಗೆ ವಿಷಕಾರಿ ಅನಿಲ ಸೇವಿಸಿ ಸಾವನ್ನಪ್ಪಿದ ಇಬ್ಬರ  ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಡಿಡಿಎ) ನಿರ್ದೇಶನ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ತಿಂಗಳು ಒಳಚರಂಡಿಯೊಳಗೆ ವಿಷಕಾರಿ ಅನಿಲ ಸೇವಿಸಿ ಸಾವನ್ನಪ್ಪಿದ ಇಬ್ಬರ  ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಡಿಡಿಎ) ನಿರ್ದೇಶನ ನೀಡಿದೆ.

ಘಟನೆ ಕುರಿತ ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ನ್ಯಾಯಾಲಯ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ಪೀಠ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರು ಇನ್ನೂ ಮ್ಯಾನುಯಲ್ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದು ಟೀಕಿಸಿದೆ.

ಈ ಘಟನೆ ಯಾರ ಅಧಿಕಾರ ವ್ಯಾಪ್ತಿಯಲ್ಲಿ ನಡೆದಿದೆಯೋ ಅವರು ಮೃತರ ಕುಟುಂಬಕ್ಕೆ ಪರಿಹಾರವನ್ನು ಪಾವತಿಸಬೇಕು ಎಂದು ಡಿಡಿಎಗೆ ಆದೇಶಿಸಿದೆ.

ಮೃತ ವ್ಯಕ್ತಿಗಳ ಕುಟುಂಬಕ್ಕೆ ಅನುಕಂಪದ ನೇಮಕಾತಿಯನ್ನು ಸಹ ಡಿಡಿಎ ಪರಿಗಣಿಸಬೇಕು ಮತ್ತು ಮುಂದಿನ ವಿಚಾರಣೆಯ ದಿನಾಂಕದೊಳಗೆ ಈ ಆದೇಶವನ್ನು ಪಾಲಿಸದಿದ್ದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರು ಕೋರ್ಟ್ ಗೆ ಹಾಜರಾಗಬೇಕು ಎಂದು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಸೆಪ್ಟಂಬರ್ 9 ರಂದು ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲ ಸೇವಿಸಿ ನೈರ್ಮಲ್ಯ ಕಾರ್ಮಿಕ ಮತ್ತು ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದರು.

ಕಾರ್ಮಿಕ ಒಳ ಚರಂಡಿಯನ್ನು ಸ್ವಚ್ಛಗೊಳಿಸಲು ಇಳಿದಾಗ ಅವರು ಮೂರ್ಛೆ ಹೋದರು. ನಂತರ ಅವರನ್ನು ರಕ್ಷಿಸಲು ಹೋದ  ಸೆಕ್ಯೂರಿಟಿ ಗಾರ್ಡ್ ಸಹ ಪ್ರಜ್ಞೆ ಕಳೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com