
ಬೆಂಗಳೂರು: ಮನುಷ್ಯನ ಬಾಳಿನಲ್ಲಿ ಆಹಾರ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ, ಆಹಾರ ಜಗತ್ತಿನಲ್ಲಿ ಸಮತೋಲನ ಕಾಪಾಡುತ್ತದೆ. ಕೇವಲ ಸಸ್ಯಾಹಾರಿ ಅಥವಾ ಕೇವಲ ಮಾಂಸಹಾರದಿಂದ ಸಮತೋಲನ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಮೀನು ಮೊದಲಿನಿಂದಲೂ ಆಹಾರ. ಮೀನು ಸಸ್ಯಾಹಾರಿ ಪ್ರಾಣಿ, ಆದರೆ, ಮೀನು ತಿನ್ನುವವರು ಮಾಂಸಾಹಾರಿ, ಕೆಲವು ದೇಶಗಳಲ್ಲಿ ಮೀನು ತಿನ್ನುವುದನ್ನು ಸಸ್ಯಾಹಾರ ಎಂದು ಹೇಳುತ್ತಾರೆ .ಮೀನಿನಲ್ಲಿ ಸಾಕಷ್ಟು ಪೋಷಕಾಂಶ ದೊರೆಯುತ್ತದೆ. ಮೀನು ನೀರಿನಲ್ಲಿ ಇರುವುದರಿಂದ ಸ್ವಚ್ಚವಾಗಿರುತ್ತದೆ. ಮೀನು ಉತ್ಪಾದನೆಗೆ ಸಾಕಷ್ಟು ಶ್ರಮ ಇರುವುದರಿಂದ ಸಾಕಷ್ಟು ಜನರಿಗೆ ಉದ್ಯೋಗ ದೊರೆಯುತ್ತಿದೆ ಎಂದಿದ್ದಾರೆ.
ಒಳನಾಡು ಮೀನುಗಾರಿಕೆ ಅಭಿವೃದ್ಧಿ ಬಗ್ಗೆ ಹೊಸ ಸಂಶೊಧನೆ ಅಗತ್ಯ ಇದೆ. ಸಂಶೊಧನೆ ನಡೆಸಿ ಹೊಸ ತಳಿಗಳ ಪ್ರಯೋಗ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಸಮುದ್ರ ಮೀನುಗಾರಿಕೆಗೆ ಹೆಚ್ಚಿನ ಬೆಂಬಲ ಕೊಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕರಾವಳಿಯಲ್ಲಿ ಮೀನು ಉತ್ಪಾದನೆಯಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಕರಾವಳಿ ಮೀನುಗಾರರು 8 ನಾಟಿಕಾ ಮೈಲ್ ಮಾತ್ರ ಮಿನುಗಾರಿಕೆ ಮಾಡುತ್ತಿದ್ದಾರೆ. ಆಳವಾದ ಮೀನುಗಾರಿಕೆಯಲ್ಲಿ ಉತ್ಕೃಷ್ಟ ಮೀನುಗಳು ದೊರೆಯುತ್ತವೆ. ನಮ್ಮ ಪ್ರದಾನ ಮಂತ್ರಿಗಳ ಮೀನುಗಾರರ ಯೋಜನೆಯಿಂದ ರಾಜ್ಯದಲ್ಲಿ 100 ಡೀಪ್ ಸಿ ಮೀನಿಗಾರಿಕೆಯ ಹಡಗು ನೀಡಲು ತೀರ್ಮಾನ ಮಾಡಿದ್ದೇವೆ. ಅದರಲ್ಲಿ ಶೇ 40% ಸಬ್ಸಿಡಿ ಇದೆ ಎಂದು ಹೇಳಿದರು.
ಮೀನುಗಾರರಿಗೆ ಡಿಸೆಲ್ ಜೊತೆಗೆ ಸೀಮೆಎಣ್ಣೆಯನ್ನು ಕೇಳಿದಷ್ಟು ಕೊಡಲು ತೀರ್ಮಾನಿಸಿದ್ದೇನೆ. ಪ್ರವಾಹದಲ್ಲಿ ಹಡಗು ಹಾನಿಯಾಗಿದ್ದರೆ ಅವುಗಳ ರಿಪೇರಿಗೆ ಅನುದಾನ ನಿಡಲಾಗುವುದು ಎಂದು ಸಿಎಂ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು ಕೆರೆಯನ್ನು ಮಿನುಗಾರಿಕೆಗೆ ನೀಡಲಾಗುವುದು. ಒಳನಾಡು ಮೀನುಗಾರಿಕೆಗೆ ಹಚ್ಚಿನ ಅನುದಾನ ನೀಡಲಾಗುವುದು. ಕರ್ನಾಟಕ ಮೀನುಗಾರಿಕೆಯಲ್ಲಿ ಇನ್ನು ಸಾಕಷ್ಟು ಸ್ಕೇಲ್ ಅಪ್ ಆಗಬೇಕಿದೆ. ಪಕ್ಕದ ಆಂಧ್ರ ಪ್ರದೇಶ ಸಾಕಷ್ಟು ಮುಂದುವರೆದಿದೆ. ಅಲ್ಲಿಗೆ ನಿಯೋಗ ಹೋಗಿ ಅಧ್ಯಯನ ಮಾಡಿ, ರಾಜ್ಯದಲ್ಲಿ ಮಿನುಗಾರಿಕೆ ಪ್ರಮಾಣ ಎರಡು ಪಟ್ಟು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಮೀನುಗಾರರ ಕುಟುಂಬಕ್ಕೆ 5000 ಮನೆಗಳನ್ನು ನೀಡಲಾಗಿದೆ. ಜನವರಿ ಅಂತ್ಯದೊಳಗೆ ಮನೆ ನಿರ್ಮಾಣ ಮಾಡಬೇಕು ಎಂಬ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮೀನಿಗೆ ಸಾಕಷ್ಟು ಬೇಡಿಕೆ ಇದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಮೀನು ಮಾರಾಟ ಔಟ್ ಲೆಟ್ ತೆರೆಯಲು ಸರ್ಕಾರ ನಿರ್ಧರಿಸಿದೆ. ಖಾಸಗಿಯವರು ಅಂಗಡಿ ತೆರೆಯಲು ಬಿಬಿಎಂಪಿಯಿಂದ ಜಾಗದ ವ್ಯವಸ್ಥೆ ಮಾಡಲಾಗುವುದು ಎಂದರು.
ಕೃಷಿಯಲ್ಲಿ ಸಮಗ್ರ ಅಭಿವೃದ್ದಿ ಎಂದರೆ ಮೀನುಗಾರಿಕೆ, ಹೈನುಗಾರಿಕೆ ಎಲ್ಲವೂ ಸೇರಿದೆ. ಇದರ ಜೊತೆಗೆ ಸಂಸ್ಕರಣೆಗೆ ಕಾರ್ಖಾನೆಗಳ ಅಗತ್ಯವಿದೆ. ಆ ಮೂಲಕ ಉದ್ಯಮ ಸೇವಾ ವಲಯ ಎಲ್ಲವೂ ಬೆಳೆಯುತ್ತದೆ ಎಂದರು.
Advertisement