ಸಗಣಿಯಿಂದ ಮಾಡಿದ 1.25 ಲಕ್ಷ ದೀಪ ಬೆಳಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ 'ದೀಪೋತ್ಸವ' ಕಾರ್ಯಕ್ರಮದ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರ ಗೋವಿನ ಸಗಣಿಯಿಂದ ಮಾಡಿದ 1.25 ಲಕ್ಷ ದೀಪಗಳನ್ನು ಬೆಳಗಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ 'ದೀಪೋತ್ಸವ' ಕಾರ್ಯಕ್ರಮದ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರ ಗೋವಿನ ಸಗಣಿಯಿಂದ ಮಾಡಿದ 1.25 ಲಕ್ಷ ದೀಪಗಳನ್ನು ಬೆಳಗಿಸಲಿದೆ.

ಈ ದೀಪಾವಳಿಯಂದು ಪ್ರತಿ ಮನೆಯಲ್ಲೂ ಹಸುವಿನ ಸಗಣಿಯಿಂದ ಮಾಡಿದ ಕನಿಷ್ಠ ಒಂಬತ್ತು ದೀಪಗಳನ್ನು ಬೆಳಗಿಸುವಂತೆ ರಾಜ್ಯ ಸರ್ಕಾರ ಜನತೆಗೆ ಮನವಿ ಮಾಡಿದೆ.

ಜನರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಸರ್ಕಾರ ಪ್ರಾರ್ಥಿಸುತ್ತದೆ ಎಂದು ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಹೇಳಿದ್ದಾರೆ.

"ಗೋವು ದೇವತೆಗಳ ಆಧ್ಯಾತ್ಮಿಕ ಶಕ್ತಿಯನ್ನು ಸಾಕಾರಗೊಳಿಸುತ್ತದೆ ಮತ್ತು ಗೋವನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಯೋಗಿ ಆದಿತ್ಯನಾಥ್ ಸರ್ಕಾರವು ಈ ದೀಪಾವಳಿಯಲ್ಲಿ ಹಸುವಿನ ಸಗಣಿಯಿಂದ ಮಾಡಿದ ದೀಪಗಳನ್ನು ಬೆಳಗಿಸುವ ಮೂಲಕ ರಾಜ್ಯದ ಎಲ್ಲಾ ನಾಗರಿಕರ ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲಿದೆ" ಅವರು ತಿಳಿಸಿದ್ದಾರೆ.

ಇದು ಪರಿಸರ ಸ್ನೇಹಿ ಕ್ರಮ ಎಂದು ಕರೆದ ಸಚಿವರು, ಈ ಕ್ರಮ ದೇಶದಲ್ಲಿ ಸ್ಥಳೀಯ ಜಾನುವಾರುಗಳ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ. ಮುಂಬರುವ ಹಬ್ಬದಲ್ಲೂ ಹಸುವಿನ ಸಗಣಿ ಆಧಾರಿತ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

ದೀಪೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯ 21 ಪ್ರಮುಖ ದೇವಾಲಯಗಳಲ್ಲಿ ಸುಮಾರು 4.5 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com