ಸೇನಾ ಹೆಲಿಕಾಪ್ಟರ್ ಪತನ
ಸೇನಾ ಹೆಲಿಕಾಪ್ಟರ್ ಪತನ

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಕಾಸರಗೋಡು ಯೋಧ ಸೇರಿ 5 ಮಂದಿ ಸಾವು

ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಪತನಗೊಂಡಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಕಾಸರಗೋಡು ಮೂಲದ ಯೋಧ ಸೇರಿದತೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Published on

ಗುವಾಹಟಿ: ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಪತನಗೊಂಡಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಕಾಸರಗೋಡು ಮೂಲದ ಯೋಧ ಸೇರಿದತೆ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟುಟಿಂಗ್ ಬಳಿಯ ಮಿಗ್ಗಿಂಗ್ ನಲ್ಲಿ ನಿನ್ನೆ ಬೆಳಗ್ಗೆ 10:43 ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಭಾರತೀಯ ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ (ALH) ನಿನ್ನೆ ಬೆಳಿಗ್ಗೆ 10:40 ರ ಸುಮಾರಿಗೆ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್ ಪ್ರದೇಶದ ಬಳಿ ಪತನಗೊಂಡಿತ್ತು. ಪ್ರಾಥಮಿಕ ವರದಿಗಳ ಅನ್ವಯ ದುರಂತ ಸಂಭವಿಸದ ವೇಳೆ ಕಾಪ್ಟರ್ ನಲ್ಲಿ ಪೈಲಟ್ ಸೇರಿದಂತೆ ಐವರು ಇದ್ದರು ಎನ್ನಲಾಗಿತ್ತು. ಕಾಪ್ಟರ್ ಪತನವಾದ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗಿತ್ತು. ಕಾಪ್ಟರ್ ಪತನವಾಗುತ್ತಿದ್ದಂತೆಯೇ ಪರ್ವತದಿಂದ ಬೆಂಕಿ ಮಿಶ್ರಿತ ದಟ್ಟ ಹೊಗೆ ಏರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದೀಗ ಕಾಪ್ಟರ್ ನಲ್ಲಿದ್ದ ಎಲ್ಲ ಐದೂ ಮಂದಿ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟವರಲ್ಲಿ ಕಾಸರಗೋಡಿನ ಸೈನಿಕ ಕೂಡ ಇದ್ದು, ಮೃತರನ್ನು ಚೆರ್ವತ್ತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ ಕೌಶಲ್ಯ ದಂಪತಿಯ ಪುತ್ರ  ಕೆ.ವಿ ಅಶ್ವಿನ್ (24) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಇಲೆಕ್ಟ್ರಾನಿಕ್ ಆ್ಯಂಡ್ ಮೆಕಾನಿಕಲ್  ವಿಭಾಗದ ಇಂಜಿನಿಯರ್ ಆಗಿ ಅಶ್ವಿನ್ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು. ಕೆಲ ಸಮಯದ ಹಿಂದೆಯಷ್ಟೇ ರಜೆಯಲ್ಲಿ ಮನೆಗೆ ಬಂದು ಒಂದು ತಿಂಗಳ ಹಿಂದೆ ಮರಳಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗ್ಗೆ 10.45ರ ಸುಮಾರಿಗೆ ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಮಿಗ್ಲಿಂಗ್ ಎಂಬಲ್ಲಿ ಭಾರತೀಯ ಸೇನಾ ಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಪತನಗೊಂಡಿತ್ತು. ಹೆಲಿಕಾಪ್ಟರ್ ನಲ್ಲಿ ಒಟ್ಟು ಐವರು ಪ್ರಯಾಣಿಕರಿದ್ದರು. ನಾಲ್ವರ ಮೃತದೇಹ ಲಭಿಸಿದೆ. ಪಾರ್ಥಿವ ಶರೀರ ಎರಡು ದಿನಗಳೊಳಗೆ ಊರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಐವರು ಸಿಬ್ಬಂದಿ ಇದ್ದ ಹೆಲಿಕಾಪ್ಟರ್‌ ದೈನಂದಿನ ತಾಲೀಮಿನಲ್ಲಿ ತೊಡಗಿದ್ದ ಸಂದರ್ಭದಲ್ಲಿ (ಬೆಳಿಗ್ಗೆ 10.43ಕ್ಕೆ) ಮಿಗ್ಗಿಂಗ್‌ ಎಂಬ ಹಳ್ಳಿಯ ಸಮೀಪ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ನಾಲ್ಕು ಶವಗಳು ಸಿಕ್ಕಿವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಲಿಕಾಪ್ಟರ್‌ ಪತನವಾಗಿರುವ ಸ್ಥಳವು ಚೀನಾ ಗಡಿಯಿಂದ 35 ಕಿ.ಮೀ.ದೂರದಲ್ಲಿದ್ದು, ಪರ್ವತಗಳಿಂದ ಕೂಡಿದೆ. ಸೇನೆ ಮತ್ತು ವಾಯು ಪಡೆಗಳು ಜಂಟಿಯಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಸಿಯಾಂಗ್ ಜಿಲ್ಲೆಯ ಲಿಕಾಬಲಿಯಿಂದ ಹಾರಾಟ ಆರಂಭಿಸಿರುವ ಸೇನಾ ಪಡೆಯ ಎಎಲ್‌ಎಚ್ ಡಬ್ಲ್ಯುಎಸ್‌ಐ ಹೆಲಿಕಾಪ್ಟರ್ ಅರುಣಾಚಲಪ್ರದೇಶದ ಟ್ಯುಟಿಂಗ್‌ನ ದಕ್ಷಿಣದ ಮಿಗ್ಗಿಂಗ್‌ನಲ್ಲಿ ಪತನಗೊಂಡಿದೆ ಎಂದು ತೇಜ್‌ಪುರ ನೆಲೆಯ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಎ.ಎಸ್. ವಾಲಿಯಾ ಅವರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com