ದೇಶದ ಆರ್ಥಿಕ ಸ್ಥಿತಿ ಹಾದಿಗೆ ತರಲು ನೋಟುಗಳ ಮೇಲೆ ಲಕ್ಷ್ಮೀ, ಗಣೇಶನ ಫೋಟೋ ಮುದ್ರಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್
ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೋಟುಗಳ ಮೇಲೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ನೋಟುಗಳ ಮೇಲೆ ಗಾಂಧೀಜಿ ಫೋಟೋ ಜೊತೆಗೆ ಗಣೇಶ ಹಾಗೂ ಲಕ್ಷ್ಮೀ ದೇವಿ ಫೋಟೋಗಳನ್ನು ಮುದ್ರಿಸುವಂತೆ ಮೋದಿಯವರ ಬಳಿಕ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.
ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ಆದರೆ, ಅದಕ್ಕೆ ದೇವರ ಆಶೀರ್ವಾದ ಕೂಡ ಬೇಕು. ಹೀಗಾಗಿ ನೋಟುಗಳ ಮೇಲೆ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳಿದ್ದರೆ ಆಶೀರ್ವಾದ ಸಿಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ. ಆರ್ಥಿಕತೆಯನ್ನು ಸುಧಾರಿಸಲು ಹಲವಾರು ಹಂತಗಳಿವೆ, ಇದರಲ್ಲಿ ಹೆಚ್ಚಿನ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವುದು ಮತ್ತು ದೇಶದಲ್ಲಿ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿವೆ. ಆದರೆ, ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಉತ್ತಮ ಫಲಿತಾಂಶ ದೊರೆಯದೇ ಇರುವುದರಿಂದ ದೇವರ ಆಶೀರ್ವಾದ ಬೇಕು, ಅದಕ್ಕೆ ಗಣೇಶ ಮತ್ತು ಲಕ್ಷ್ಮಿ ದೇವರ ಫೋಟೋಗಳಿರುವ ಕರೆನ್ಸಿ ನೋಟುಗಳನ್ನು ಮುದ್ರಣ ಮಾಡಿ ಎಂದಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವುದಾಗಿಯೂ ಕೇಜ್ರಿವಾಲ್ ತಿಳಿಸಿದ್ದಾರೆ.