ಭೋಪಾಲ್: ಐವರ ಭೀಕರ ಹತ್ಯೆಗೆ ಬ್ಲಾಕ್ ಬಸ್ಟರ್ ಕೆಜಿಎಫ್ ಸಿನಿಮಾ ಪ್ರೇರಣೆ!
ಭೋಪಾಲ್: ಮನುಷ್ಯನ ಬದುಕಲ್ಲಿ ಸಿನಿಮಾಗಳು ಮಹತ್ತರ ಪಾತ್ರ ವಹಿಸುತ್ತವೆ. ಬಂಗಾರದ ಮನುಷ್ಯ ಸಿನಿಮಾ ನೋಡಿದ ಹಲವರು ಆಗಿನ ಕಾಲದಲ್ಲಿ ಪಟ್ಟಣ ಬಿಟ್ಟು ಮತ್ತೆ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡ ನಿದರ್ಶನಗಳಿವೆ. ಸಿನಿಮಾಗಳನ್ನ ಪ್ರೇರಣೆಯನ್ನಾಗಿ ತೆಗೆದುಕೊಂಡ ಹಲವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಅದೇ ರೀತಿ ಸಿನಿಮಾಗಳ ಪ್ರೇರಣೆ ಕೆಟ್ಟ ಕೆಲಸಗಳನ್ನೂ ಮಾಡಿಸಿಬಿಡುತ್ತೆ. ಇಡೀ ಭಾರತ ಚಿತ್ರರಂಗದಲ್ಲೇ ಮೈಲಿಗಲ್ಲು ಸೃಷ್ಟಿಸಿದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಿಂದ ಪ್ರೇರಿತಗೊಂಡ ಸರಣಿ ಹಂತಕನೊಬ್ಬ ಫೇಮಸ್ ಆಗಲು ಐವರು ಸೆಕ್ಯುರಿಟಿ ಗಾರ್ಡ್ ಗಳನ್ನು ಹತ್ಯೆಮಾಡಿರೋ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದಲ್ಲಿ ನಿದ್ರೆ ಮಾಡುತ್ತಿದ್ದ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಶಂಕಿತ ಸರಣಿ ಹಂತಕ ಕೊಂದಿದ್ದಾನೆ. ಸರಣಿ ಹಂತಕ ಸೆಕ್ಯುರಿಟಿ ಗಾರ್ಡ್ ಮೇಲೆ ದಾಳಿ ಮಾಡುತ್ತಿರುವುದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. 19 ವರ್ಷದ ಆರೋಪಿ ಶಿವ ಪ್ರಸಾದ್ ಎಂದು ಗುರುತಿಸಲಾದ ವ್ಯಕ್ತಿ, ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್‌ನಿಂದ ಪ್ರೇರಿತನಾಗಿ ಪ್ರಸಿದ್ಧನಾಗಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ.
ಭೋಪಾಲ್‌ನಲ್ಲಿ ಶುಕ್ರವಾರ ಮುಂಜಾನೆ ಪೊಲೀಸರು ಆತನನ್ನು ಕೊಲೆಯಾದವರ ಪೈಕಿ ಓರ್ವನಿಂದ ಕದ್ದ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದ ನಂತರ ಬಂಧಿಸಿದ್ದಾರೆ.
ಸಿಸಿಕ್ಯಾಮೆರಾ ದೃಶ್ಯದಲ್ಲಿರುವಂತೆ ಆರೋಪಿಯು ಶಾರ್ಟ್ಸ್ ಮತ್ತು ಶರ್ಟ್ ಧರಿಸಿದ್ದು ಸೆಕ್ಯುರಿಟಿ ಗಾರ್ಡ್ ಗೆ ಹೊಡೆದು ನಂತರ ಅವನ ತಲೆಯನ್ನು ಕಲ್ಲಿನಿಂದ ಜಜ್ಜುತ್ತಿರುವುದನ್ನು ತೋರಿಸುತ್ತಿದೆ.
ಪೊಲೀಸ್ ಅಧಿಕಾರಿ ತರುಣ್ ನಾಯಕ್ ಪ್ರಕಾರ, ಆರೋಪಿಯು ಕನ್ನಡ ಚಲನಚಿತ್ರ ಕೆಜಿಎಫ್ ನಿಂದ ಸ್ಫೂರ್ತಿ ಪಡೆದಿದ್ದು, ರಾತ್ರಿಯ ವೇಳೆಯಲ್ಲಿ ಸೆಕ್ಯುರಿಟಿ ಗಾರ್ಡ್ ಗಳನ್ನು ಹತ್ಯೆ ಮಾಡುತ್ತಿದ್ದ. ಮುಂದೆ ಪೊಲೀಸರನ್ನು ಗುರಿಯಾಗಿಸಲು ಯೋಜಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಆರೋಪಿ ಶಿವಪ್ರಸಾದ್ ಸಾಗರ್‌ನಲ್ಲಿ ಮೂವರು ಮತ್ತು ಭೋಪಾಲ್‌ನಲ್ಲಿ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಫೇಮಸ್ ಆಗಬೇಕೆಂಬುದೇ ಅವನ ಏಕೈಕ ಗುರಿಯಾಗಿದ್ದು, ಅವನು ರಾತ್ರಿ ವೇಳೆ ನಿದ್ರಿಸುವ ಭದ್ರತಾ ಸಿಬ್ಬಂದಿಯನ್ನು ಮಾತ್ರ ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಸ್ಥಳದಲ್ಲಿ ಕಾವಲುಗಾರನೊಬ್ಬನನ್ನು ಕೊಲೆ ಮಾಡಲಾಗಿದ್ದು, ಆತನ ಮುಖದ ಮೇಲೆ ಶೂ ಇರಿಸಲಾಗಿತ್ತು.
ಕಾರ್ಖಾನೆಯೊಂದರ ಸಿಬ್ಬಂದಿ ಕಲ್ಯಾಣ್ ಲೋಧಿ ಅವರನ್ನು ಆಗಸ್ಟ್ 28 ರಂದು ತಲೆಗೆ ಸುತ್ತಿಗೆಯಿಂದ ಒಡೆದು ಕೊಲ್ಲಲಾಯಿತು..
ಮರುದಿನ ರಾತ್ರಿಯೇ ಕಲಾ ಮತ್ತು ವಾಣಿಜ್ಯ ಕಾಲೇಜಿನ 60 ವರ್ಷದ ಭದ್ರತಾ ಸಿಬ್ಬಂದಿ ಶಂಭು ನಾರಾಯಣ ದುಬೆ ಅವರನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
ಅದರ ಮರುದಿನ ಮನೆಯೊಂದರಲ್ಲಿ ವಾಚ್‌ಮ್ಯಾನ್ ಆಗಿದ್ದ ಮಂಗಲ್ ಅಹಿರ್ವಾರ್‌ನನ್ನು ಶಿವಪ್ರಸಾದ್ ಕೊಂದು ಹಾಕಿದ್ದ.
ಗುರುವಾರ ರಾತ್ರಿ ಶಿವಪ್ರಸಾದ್ ಸೋನು ವರ್ಮಾ(23) ಎಂಬ ವ್ಯಕ್ತಿಯನ್ನು ಮಾರ್ಬಲ್ ರಾಡ್ ಬಳಸಿ ಕೊಂದಿದ್ದಾರೆ. ಸೋನು ವರ್ಮಾ ಮಾರ್ಬಲ್ ಅಂಗಡಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು.
ಭೋಪಾಲ್‌ನಿಂದ 169 ಕಿಮೀ ದೂರದಲ್ಲಿರುವ ಸಾಗರ್‌ನಲ್ಲಿ ಶಿವಪ್ರಸಾದ್‌ನ ಹತ್ಯೆಯ ದಂಧೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ