ಲಖನೌನ ಹೋಟೆಲ್‌ನಲ್ಲಿ ಬೆಂಕಿ ಅವಘಡ
ಲಖನೌನ ಹೋಟೆಲ್‌ನಲ್ಲಿ ಬೆಂಕಿ ಅವಘಡ

ಲಖನೌ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಲಖನೌ ನಗರದ ಹಜರತ್‌ಗಂಜ್ ಪ್ರದೇಶದ ಮದನ್ ಮೋಹನ್ ಮಾಳವಿಯಾ ಮಾರ್ಗ್‌ನಲ್ಲಿರುವ ಲೆವಾನಾ ಸೂಟ್ಸ್‌ನಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published on

ಲಖನೌ: ನಗರದ ಹಜರತ್‌ಗಂಜ್ ಪ್ರದೇಶದ ಮದನ್ ಮೋಹನ್ ಮಾಳವಿಯಾ ಮಾರ್ಗ್‌ನಲ್ಲಿರುವ ಲೆವಾನಾ ಸೂಟ್ಸ್‌ನಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್ ಮಾಲೀಕರ ಪ್ರಕಾರ, ಕಟ್ಟಡದಲ್ಲಿ 30 ಕೊಠಡಿಗಳಿದ್ದು, ಘಟನೆ ಸಮಯದಲ್ಲಿ 18 ಕೊಠಡಿಗಳಲ್ಲಿ ತಂಗಿದ್ದರು. ಅಲ್ಲಿ 35-40 ಜನರಿದ್ದರು ಮತ್ತು ಬೆಳಿಗ್ಗೆ ಕೆಲವರು ಹೋಟೆಲ್‌ನಿಂದ ಹೊರಬಂದಿದ್ದರು. ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಮತ್ತು ಅನೇಕ ಜನರನ್ನು ಹೋಟೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ' ಎಂದು ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗ್ವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು. ನಿಖರವಾದ ಕಾರಣ ಏನೆಂಬುದನ್ನು ಕಂಡುಹಿಡಿಯಲಾಗುತ್ತಿದೆ. ಮೊದಲ ಮಹಡಿಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಔತಣಕೂಟವಿತ್ತು ಎಂದು ಹೋಟೆಲ್ ಮಾಲೀಕರು ನಮಗೆ ತಿಳಿಸಿದ್ದಾರೆ' ಎಂದು ತಿಳಿಸಿದರು.

ಸುಮಾರು ಎರಡು ಡಜನ್ ಜನರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಲಖನೌನ ಹೋಟೆಲ್‌ನಲ್ಲಿ ಬೆಂಕಿ ದುರಂತದ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಸ್ಥಳೀಯ ಆಡಳಿತದಿಂದ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೇಳಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನನ್ನ ಕಚೇರಿಯು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ' ಎಂದು ಲಖನೌ ಸಂಸದ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್‌ ಮಾಡಿದ್ದಾರೆ.

ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ನಾವು ನೋಡಿಕೊಳ್ಳುತ್ತೇವೆ ಮತ್ತು ಇದಕ್ಕಾಗಿ ಇಡೀ ರಾಜ್ಯಕ್ಕೆ ನಿರ್ದೇಶನ ನೀಡಲಾಗುವುದು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಮಾಹಿತಿ ನಿರ್ದೇಶಕ ಶಿಶಿರ್ ಸಿಂಗ್ ಮಾತನಾಡಿ, ಲಖನೌ ವಿಭಾಗದ ಕಮಿಷನರ್ ಮತ್ತು ಲಖನೌ ಪೊಲೀಸ್ ಆಯುಕ್ತರು ಜಂಟಿಯಾಗಿ ಘಟನೆ ಬಗ್ಗೆ ತನಿಖೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.

ಹೋಟೆಲ್‌ನಿಂದ ದಟ್ಟ ಹೊಗೆ ಹೊರಬರುತ್ತಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಗಾಜುಗಳನ್ನು ಒಡೆದು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಜನರನ್ನು ರಕ್ಷಿಸುವ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಚಂದ್ರೇಶ್ ಯಾದವ್ ಅವರಿಗೂ ಸುಟ್ಟ ಗಾಯಗಳಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com