ಗೋವಾದಲ್ಲಿ ಪೂರ್ವಜರ ಆಸ್ತಿ ಕಬಳಿಕೆ: ಬ್ರಿಟನ್ ಗೃಹ ಕಾರ್ಯದರ್ಶಿ ತಂದೆ ಆರೋಪ; ಎಸ್‌ಐಟಿ ತನಿಖೆ

ಉತ್ತರ ಗೋವಾದಲ್ಲಿರುವ ತನ್ನ ಪೂರ್ವಜರ ಆಸ್ತಿಗಳನ್ನು ಅಪರಿಚಿತ ವ್ಯಕ್ತಿಯೊಬ್ಬರು ಕಬಳಿಸಿದ್ದಾರೆ ಎಂದು ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್‌ಮನ್ ಅವರ ತಂದೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡಿದೆ.
ಸುಯೆಲ್ಲಾ ಬ್ರೆವರ್‌ಮನ್
ಸುಯೆಲ್ಲಾ ಬ್ರೆವರ್‌ಮನ್

ಪಣಜಿ: ಉತ್ತರ ಗೋವಾದಲ್ಲಿರುವ ತನ್ನ ಪೂರ್ವಜರ ಆಸ್ತಿಗಳನ್ನು ಅಪರಿಚಿತ ವ್ಯಕ್ತಿಯೊಬ್ಬರು ಕಬಳಿಸಿದ್ದಾರೆ ಎಂದು ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್‌ಮನ್ ಅವರ ತಂದೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ನೂತನ ಪ್ರಧಾನಿ ಲಿಜ್ ಟ್ರಸ್ ಅವರು ಯುಕೆ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಿದರು.

ಅಸ್ಸಾಗಾವೊದಲ್ಲಿ ಒಟ್ಟು 13,900 ಚದರ ಮೀಟರ್ ವಿಸ್ತೀರ್ಣದ ಅವರ ಎರಡು ಪೂರ್ವಜರ ಆಸ್ತಿಯನ್ನು ಕಬಳಿಸಲಾಗಿದೆ ಎಂದು ಬ್ರೇವರ್‌ಮನ್ ತಂದೆ ಕ್ರಿಸ್ಟಿ ಫೆರ್ನಾಂಡಿಸ್ ದೂರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಐಟಿ) ನಿಧಿ ವಾಸನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ದೂರಿನ ಆಧಾರದ ಮೇಲೆ ಎಸ್‌ಐಟಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಆರಂಭವಾಗಿದೆ ಎಂದು ಅವರು ಹೇಳಿದರು. ಫರ್ನಾಂಡಿಸ್ ಅವರ ಕುಟುಂಬದ ಸದಸ್ಯರ ಒಡೆತನದ ಅಸ್ಸಾಗಾವ್ ಗ್ರಾಮದ ಸರ್ವೆ ನಂಬರ್ 253/3 ಮತ್ತು 252/3 ರ ಆಸ್ತಿಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳು ಪವರ್ ಆಫ್ ಅಟಾರ್ನಿ ಮೂಲಕ ದಾಸ್ತಾನು ಪ್ರಕ್ರಿಯೆಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರಿನ ಪ್ರಕಾರ, ಈ ವರ್ಷದ ಜುಲೈ 27ರ ಮೊದಲು ದಾಸ್ತಾನು ಪ್ರಕ್ರಿಯೆಗಳನ್ನು ಸಲ್ಲಿಸಲಾಗಿದ್ದು ಅದು ಆಗಸ್ಟ್‌ನಲ್ಲಿ ಅವರಿಗೆ ತಿಳಿದುಬಂದಿತ್ತು. ಫೆರ್ನಾಂಡಿಸ್ ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಸ್ಪಾಲ್ ಸಿಂಗ್ ಮತ್ತು ಗೋವಾ ಎನ್‌ಆರ್‌ಐ ಕಮಿಷನರೇಟ್‌ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ಗೋವಾ ಎನ್‌ಆರ್‌ಐ ಕಮಿಷನರ್ ನರೇಂದ್ರ ಸವೈಕರ್ ಅವರನ್ನು ಸಂಪರ್ಕಿಸಿದಾಗ, ಕಳೆದ ವಾರ ಇ-ಮೇಲ್ ತನ್ನ ಇಲಾಖೆಗೆ ಬಂದಿದ್ದು, ಅದನ್ನು ರಾಜ್ಯ ಗೃಹ ಇಲಾಖೆಗೆ ರವಾನಿಸಲಾಗಿದೆ. ಎನ್‌ಆರ್‌ಐ ಕಮಿಷನರೇಟ್‌ಗೆ ಇಂತಹ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವಿಲ್ಲ, ಆದ್ದರಿಂದ ನಾವು ದೂರನ್ನು ಗೃಹ ಇಲಾಖೆಗೆ ರವಾನಿಸಿದ್ದೇವೆ ಎಂದು ಅವರು ಹೇಳಿದರು.

ಗೋವಾ ಸರ್ಕಾರವು ಈ ವರ್ಷದ ಆರಂಭದಲ್ಲಿ ಭೂಕಬಳಿಕೆ ಪ್ರಕರಣಗಳ ತನಿಖೆಗಾಗಿ ಪೊಲೀಸ್, ಕಂದಾಯ ಮತ್ತು ಆರ್ಕೈವ್ಸ್ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ರಚಿಸಿತು.

ಎಸ್‌ಐಟಿ ರಾಜ್ಯದಲ್ಲಿ ಇಂತಹ 100ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುತ್ತಿದೆ. ಆರ್ಕೈವ್ಸ್ ಮತ್ತು ಪುರಾತತ್ವ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ 15ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com