ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಪರಮಾತ್ಮನಲ್ಲಿ ಲೀನ
ನರಸಿಂಗ್ ಪುರ: ಆದಿ ಶಂಕರಾಚಾರ್ಯ ಪರಂಪರೆಯ ದ್ವಾರಕಾ ಶಾರದಾ ಪೀಠ ಹಾಗೂ ಬದರಿಯ ಜ್ಯೋತಿರ್ಪೀಠದ ಜಗದ್ಗುರು ಸ್ವಾಮಿ ಸ್ವರೂಪಾನಂದ ಸರಸ್ವತಿಗಳು (99) ಸೆ.11 ರಂದು ಪರಮಾತ್ಮನಲ್ಲಿ ಲೀನರಾದರು.
ಮಧ್ಯಪ್ರದೇಶದ ನರಸಿಂಗ್ ಪುರ ನಗರದಲ್ಲಿ ಶ್ರೀಗಳ ದೇಹಾಂತ್ಯವಾಗಿದೆ.
1924 ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಜನಿಸಿದ್ದ ಸ್ವರೂಪಾನಂದ ಸರಸ್ವತಿ ಶ್ರೀಗಳ ಪೂರ್ವಾಶ್ರಮದ ಹೆಸರು ಪೋತಿರಾಮ್ ಉಪಾಧ್ಯಾಯ. ಉತ್ತರಾಮ್ನಾಯ ಮಠ ಜ್ಯೋತಿರ್ಪೀಠದ ಬ್ರಹ್ಮಾನಂದ ಸರಸ್ವತಿಗಳ ಶಿಷ್ಯರಾಗಿದ್ದ ಪೋತಿರಾಮ್ ಉಪಾಧ್ಯಾಯ ಅವರಿಗೆ 1950 ರಲ್ಲಿ ಬ್ರಹ್ಮಾನಂದ ಸರಸ್ವತಿಗಳು ಸಂನ್ಯಾಸ ದೀಕ್ಷೆ ನೀಡಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂಬ ಯೋಗಪಟ್ಟ ನೀಡಿದ್ದರು. ಸ್ವರೂಪಾನಂದ ಸರಸ್ವತಿಗಳು ಸ್ವಾಮಿ ಕರಪಾತ್ರಿ ಮಹಾರಾಜರು ಸ್ಥಾಪಿಸಿದ್ದ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ನ ಅಧ್ಯಕ್ಷರೂ ಆಗಿದ್ದರು.
ಶ್ರೀಗಳ ವಿದೇಹ ಮುಕ್ತಿಗೆ ಸಿಎಂ ಸಂತಾಪ:
ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಕ್ವಿಟ್ ಇಂಡಿಯಾ ಚಳವಳಿ ಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ. ಶ್ರೀಗಳಿಗೆ ಸದ್ಗತಿ ಪ್ರಾಪ್ತಿ ಯಾಗಲಿ ಹಾಗೂ ಅವರ ಅನುಯಾಯಿಗಳಿಗೆ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ