
ಅಮರಾವತಿ: ಮಹಾರಾಷ್ಟ್ರದ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪ್ರಮುಖ ಆರೋಪಿಯ ಸುಳಿವು ಪತ್ತೆ ಮಾಡಲು 2 ಲಕ್ಷ ರೂ ಬಹುಮಾನ ಘೋಷಿಸಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ಟೈಲರ್ ಹತ್ಯೆ ಬೆನ್ನಲ್ಲೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮಹಾರಾಷ್ಟ್ರದ ಅಮರಾವತಿಯ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎಗೆ ಈ ವರೆಗೂ ಪ್ರಮುಖ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ ಈಗಾಗಲೇ ಕೊಲ್ಹೆ ಹತ್ಯೆ ಪ್ರಕರಣ ಸಂಬಂಧ ಶಹೀಂ ಅಹ್ಮದ್ ಫಿರೋಜ್ ಅಹ್ಮದ್ ಎಂಬಾತನ ಕೈವಾಡದ ಕುರಿತು ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಆದರೆ ಆತನ ಇರುವಿಕೆ ಕುರಿತು ಮಾಹಿತಿಗಳು ಲಭ್ಯವಾಗುತ್ತಿಲ್ಲ.
ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿ ಶಹೀಂ ಅಹ್ಮದ್ ಫಿರೋಜ್ ಅಹ್ಮದ್ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮರಾವತಿಯ ಜಾಕಿರ್ ಕಾಲೋನಿ ನಿವಾಸಿ ಶಹೀಂ ಅಹಮದ್ ಫಿರೋಜ್ ಅಹಮದ್ ಪ್ರಕರಣ ದಾಖಲಾದಾಗಿನಿಂದ ಪರಾರಿಯಾಗಿದ್ದಾನೆ. "ಅಹ್ಮದ್ (22 ವರ್ಷ) ಬಂಧನಕ್ಕೆ ಕಾರಣವಾಗುವ ಯಾವುದೇ ರೀತಿಯ ಮಾಹಿತಿಗಾಗಿ ಎನ್ಐಎ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಕೋಲ್ಹೆ ಹತ್ಯೆಗೆ ಸಂಬಂಧಿಸಿದಂತೆ ಎನ್‌ಐಎ ಇದುವರೆಗೆ ಹತ್ತು ಜನರನ್ನು ಬಂಧಿಸಿದೆ.
ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಕೋಲ್ಹೆ ಜೂನ್ 21 ರಂದು ಪೂರ್ವ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಕೊಲ್ಲಲ್ಪಟ್ಟಿದ್ದರು. ಈ ಹತ್ಯೆ ಮಹಾರಾಷ್ಟ್ರದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
Advertisement