ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ಹತ್ಯೆಗೀಡಾದ ಇಬ್ಬರು ದಲಿತ ಬಾಲಕಿಯರ ಸಹೋದರ, ತನ್ನ ಸಹೋದರಿಯರು ಮಹತ್ವಾಕಾಂಕ್ಷೆಯ ಮತ್ತು ಆಧಾರವಾಗಿದ್ದವರು ಎಂದು ನೆನಪಿಸಿಕೊಂಡಿದ್ದಾರೆ.
ತನ್ನ 17 ವರ್ಷದ ಅಕ್ಕ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳುತ್ತಿದ್ದಳು. ಇನ್ನೊಬ್ಬಳು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಸಂಸಾರಕ್ಕಾಗಿ ಚೆನ್ನಾಗಿ ದುಡಿಯಬೇಕು ಎಂದು ಬಯಸಿದ್ದಳು ಎಂದಿದ್ದಾರೆ.
'ಆರು ತಿಂಗಳ ಹಿಂದೆ ನಮ್ಮ ತಾಯಿ ಗರ್ಭಕೋಶದ ಆಪರೇಷನ್ ಮಾಡಿದ ನಂತರ, ನನ್ನ ಸೋದರಿಯರಿಬ್ಬರು ಚಿಂತಿತರಾಗಿದ್ದರು. ತಾಯಿಯನ್ನು ನೋಡಿಕೊಳ್ಳಲು ನನ್ನ ಒಬ್ಬ ಸೋದರಿ ಮನೆಯಲ್ಲಿಯೇ ಇರಲು ಬಯಸಿದ್ದಳು. ಆ ಕಾರಣಕ್ಕಾಗಿ ಆಕೆ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಳು' ಎಂದು ಸಹೋದರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
'ಮತ್ತೊಬ್ಬಳು ಓಧಿನಲ್ಲಿ ತುಂಬಾ ಚುರುಕಿದ್ದಳು ಮತ್ತು ಉದ್ಯೋಗ ಮಾಡುವ ಮೂಲಕ ಕುಟುಂಬವನ್ನು ಬೆಂಬಲಿಸಲು ಬಯಸಿದ್ದಳು ಎಂದಿರುವ ಸಹೋದರ, ತನ್ನ 15 ವರ್ಷದ ಸೋದರಿಯನ್ನು 'ಬಹಳ ಮಹತ್ವಾಕಾಂಕ್ಷೆ' ಇಟ್ಟುಕೊಂಡಿದ್ದವಳು ಎಂದು ನೆನಪಿಸಿಕೊಂಡರು.
ಕಬ್ಬಿನ ಗದ್ದೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಗುರುವಾರ ಬಂಧಿಸಲಾಗಿದೆ.
ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯರು ಬುಧವಾರ ಮಧ್ಯಾಹ್ನ ಇಬ್ಬರು ಆರೋಪಿಗಳಾದ ಜುನೈದ್ ಮತ್ತು ಸೊಹೈಲ್‌ನೊಂದಿಗೆ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಇಬ್ಬರು ಆರೋಪಿಗಳು ಸೋದರಿಯರೊಂದಿಗೆ ಸಂಬಂಧ ಹೊಂದಿದ್ದರು. ಅತ್ಯಾಚಾರವಾದ ಬಳಿಕ ಮದುವೆಗೆ ಒತ್ತಾಯಿಸಿದ್ದರಿಂದ ಅವರಿಬ್ಬರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಲಖಿಂಪುರ ಖೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸ್ ಅಧಿಕಾರಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಹೋದರ, 'ಪೊಲೀಸರು ತಮ್ಮ ಸ್ವಂತ ಲಾಭಕ್ಕಾಗಿ ಕಪೋಲಕಲ್ಪಿತ ಕಥೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ. ನನ್ನ ಸಹೋದರಿಯರನ್ನು ಅಪಹರಿಸಲಾಗಿದೆ. ಅವರಿಗೆ ಆ ವ್ಯಕ್ತಿಗಳ ಬಗ್ಗೆ ತಿಳಿದಿರಲಿಲ್ಲ. ನಮ್ಮಲ್ಲಿ ಯಾರೊಬ್ಬರಿಗೂ ಅವರ ಪರಿಚಯವಿಲ್ಲ. ಹೀಗಾಗಿಯೇ, ನನ್ನ ಸಹೋದರಿಯರ ಜೀವಕ್ಕೆ ಅಪಾಯವಿದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ' ಎಂದು ಅವರು ಹೇಳಿದರು.
'ನಾನು ನನ್ನ ಇಬ್ಬರು ಸಹೋದರಿಯರನ್ನು ಕಳೆದುಕೊಂಡಿದ್ದೇನೆ ಮತ್ತು ಅವರಿಗೆ ನ್ಯಾಯವನ್ನು ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು' ಎಂದು ಅವರು ಹೇಳಿದರು.
ಪೊಲೀಸರು ಆರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 376 (ಅತ್ಯಾಚಾರ) ಮತ್ತು 452 (ಗಾಯ, ಹಲ್ಲೆ ಅಥವಾ ತಪ್ಪು ನಿರ್ಧಾರ ಮಾಡಿದ ನಂತರ ಮನೆಗೆ ಅತಿಕ್ರಮಣ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಅಪ್ರಾಪ್ತರಾಗಿರುವ ಕಾರಣ ಶವಗಳನ್ನು ಸುಡುವ ಬದಲು ಅವರ ಸಮುದಾಯದ ಆಚಾರದಂತೆ ಸತ್ತವರನ್ನು ಹೂಳುತ್ತಾರೆ ಎಂಬ ಕಾರಣಕ್ಕೆ ಅವರ ಮನೆಯ ಸಮೀಪದ ಹೊಲದಲ್ಲಿ ಬಾಲಕಿಯರ ಅಂತ್ಯಕ್ರಿಯೆ ನಡೆಯಿತು.
Advertisement