ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಕೆ ಸಿ ವೇಣುಗೋಪಾಲ್, ಅಶೋಕ್ ಗೆಹ್ಲೊಟ್ ಗೆ ಸೋನಿಯಾ ಗಾಂಧಿ ಕರೆ

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ವೇದಿಕೆ ಬಿರುಸಾಗಿದೆ. ನಿನ್ನೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರನ್ನು ತುರ್ತು ಚರ್ಚೆಗೆ ಕರೆದಿದ್ದರು.
ಸೋನಿಯಾ ಗಾಂಧಿ(ಸಂಗ್ರಹ ಚಿತ್ರ)
ಸೋನಿಯಾ ಗಾಂಧಿ(ಸಂಗ್ರಹ ಚಿತ್ರ)
Updated on

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ(Congress presidential poll) ವೇದಿಕೆ ಬಿರುಸಾಗಿದೆ. ನಿನ್ನೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರನ್ನು ತುರ್ತು ಚರ್ಚೆಗೆ ಕರೆದಿದ್ದರು. ಅಶೋಕ್ ಗೆಹ್ಲೋಟ್ ಅವರು ದೆಹಲಿಗೆ ತೆರಳುವ ಮೊದಲು ರಾಜಸ್ಥಾನದ ಶಾಸಕರ ಜೊತೆ ತಡರಾತ್ರಿ ಸಭೆಯನ್ನು ಕರೆದಿದ್ದಾರೆ. ಅವರು ಸಹ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದರು. 

ವೇಣುಗೋಪಾಲ್ ಅವರು ಕೇರಳದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು, ಈ ಮಧ್ಯೆ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಯ 10 ಜನಪಥ್ ಹಾದಿ ಹಿಡಿದರು. ಮೂಲಗಳ ಪ್ರಕಾರ ಇಬ್ಬರೂ ಅಧ್ಯಕ್ಷ ಚುನಾವಣೆಯ ಕುರಿತು ಚರ್ಚಿಸಿದ್ದಾರೆ. ಚುನಾವಣೆಗೆ ನಾಮನಿರ್ದೇಶನವು ಇದೇ 24 ರಿಂದ ಪ್ರಾರಂಭವಾಗಲಿದೆ. ವೇಣುಗೋಪಾಲ್ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾದ ನಂತರ ಗೆಹ್ಲೋಟ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಲಿದ್ದಾರೆ. 

ಇಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಗೆಹ್ಲೋಟ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಕೇರಳಕ್ಕೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ. ಅಲ್ಲಿಂದ ದೆಹಲಿಗೆ ವಾಪಸಾಗುವ ನಿರೀಕ್ಷೆ ಇದ್ದು, ಸೆ.30ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಇಲ್ಲೇ ಇರಲಿದ್ದಾರೆ.

ಪಕ್ಷದ ತಿರುವನಂತಪುರಂ ಸಂಸದ ಶಶಿ ತರೂರ್ ಸೋಮವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ನಂತರ, ಪಕ್ಷದ ಹೈಕಮಾಂಡ್ ಸ್ಪರ್ಧೆಗೆ ಸಿದ್ಧತೆ ಆರಂಭಿಸಿದೆ, ಹೆಚ್ಚಿನ ರಾಜ್ಯ ನಿರ್ಣಯಗಳು ರಾಹುಲ್ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಲು ಒತ್ತಾಯಿಸಿ ನಿರ್ಣಯಗಳನ್ನು ಅಂಗೀಕರಿಸಿವೆ. 

ಯಾವುದೇ ಅಧಿಕೃತ ಅಭ್ಯರ್ಥಿ ಇರುವುದಿಲ್ಲ ಎಂದು ಸೋನಿಯಾ ಗಾಂಧಿ ತರೂರ್‌ಗೆ ತಿಳಿಸಿದ್ದರೂ, ನಿಷ್ಠಾವಂತರನ್ನು ಕಣಕ್ಕಿಳಿಸಲು ನಾಯಕತ್ವವು ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಅಭ್ಯರ್ಥಿಯಾಗಿ ಗೆಹ್ಲೋಟ್ ಹೈಕಮಾಂಡ್ ನ  ಮೊದಲ ಆಯ್ಕೆ ಎಂದು ವರದಿಯಾಗಿದೆ. ಆದರೆ, ಅಭ್ಯರ್ಥಿಯಾಗಿರುವುದನ್ನು ನಿರಾಕರಿಸಿರುವ ಅವರು, ರಾಹುಲ್ ಗಾಂಧಿಯವರನ್ನು ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ರಾಹುಲ್ ಅವರನ್ನು ಪಕ್ಷದ ಮುಖ್ಯಸ್ಥರಾಗಿ ಮರಳುವಂತೆ ಮನವೊಲಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ರಾಜಸ್ಥಾನ, ಛತ್ತೀಸ್‌ಗಢ, ಗುಜರಾತ್, ತಮಿಳುನಾಡು, ಬಿಹಾರ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ಸುಮಾರು ಹನ್ನೆರಡು ರಾಜ್ಯ ಘಟಕಗಳು ರಾಹುಲ್‌ಗೆ ಪಕ್ಷದ ಸಾರಥ್ಯ ವಹಿಸಬೇಕೆಂದು ಕರೆ ನೀಡುವ ನಿರ್ಣಯಗಳನ್ನು ಅಂಗೀಕರಿಸಿವೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಪಿ ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಇತರರು ಸ್ಪರ್ಧಿಸುವ ಬದಲು ಒಮ್ಮತದಿಂದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 8 ಮತ್ತು ಚುನಾವಣೆ ಅಗತ್ಯವಿದ್ದಲ್ಲಿ ಅಕ್ಟೋಬರ್ 17 ರಂದು ನಡೆಯಲಿದೆ, ಅಕ್ಟೋಬರ್ 19 ರಂದು ಫಲಿತಾಂಶ ಹೊರಬೀಳಲಿದೆ.

ಒಂದು ವೇಳೆ ಸ್ಪರ್ಧೆ ನಡೆದರೆ, ಎರಡು ದಶಕಗಳ ನಂತರ ಕಾಂಗ್ರೆಸ್ಸಿಗರು ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಿದ್ದಾರೆ. ನವೆಂಬರ್ 2000 ರಲ್ಲಿ ಸೋನಿಯಾ ಗಾಂಧಿ ಜಿತೇಂದ್ರ ಪ್ರಸಾದ ಅವರನ್ನು ಸೋಲಿಸಿದಾಗ ಪಕ್ಷವು ಕೊನೆಯ ಬಾರಿಗೆ ಈ ಹುದ್ದೆಗೆ ಸ್ಪರ್ಧೆಯನ್ನು ಕಂಡಿತು. ಅದಕ್ಕೂ ಮುನ್ನ ಸೀತಾರಾಮ್ ಕೇಸ್ರಿ ಅವರು 1997ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು.

ಪಕ್ಷದ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರು ಬರಲಿದ್ದಾರೆ. ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ 2017 ಮತ್ತು 2019 ರ ನಡುವಿನ ಎರಡು ವರ್ಷಗಳನ್ನು ಹೊರತುಪಡಿಸಿ 1998 ರಿಂದ ಸೋನಿಯಾ ಗಾಂಧಿಯವರೇ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com