ಪಿಎಫ್​ಐ, ಎಸ್​ಡಿಪಿಐ ಮೇಲೆ ಎನ್​ಐಎ ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆ

ಪಿಎಫ್ಐ ಮತ್ತು ಎಸ್ ಡಿಪಿಐ  ಸಂಘಟನೆಗಳ ಪದಾಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್​ಡಿಪಿಐ  ಸಂಘಟನೆಗಳ ಪದಾಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಗುಪ್ತಚರ ವಿಭಾಗದ ಅಜಿತ್ ಡೋವಲ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಎನ್​ಐಎ, ಜಾರಿ ನಿರ್ದೇಶನಾಲಯ ಮತ್ತು ಗುಪ್ತದಳದಿಂದ ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳು ಇಂದು ದಾಳಿ ನಡೆಸಿದವು. ವಿವಿಧ ರಾಜ್ಯಗಳ ಪೊಲೀಸರ ನೆರವನ್ನೂ ದಾಳಿಯ ವೇಳೆ ಪಡೆಯಲಾಯಿತು. ಪಿಎಫ್​ಐ ಸಂಘಟನೆಯು ತನ್ನನ್ನು ತಾನು ಸಮಾಜೋ-ಧಾರ್ಮಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ.

ಈ ಸಂಘಟನೆಯ ಬಗ್ಗೆ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಇದೀಗ ಕಠಿಣ ನಿಲುವು ತಳೆದಿವೆ. ಉದಯ್​ಪುರ್ ಮತ್ತು ಅಮರಾವತಿ ನಗರಗಳಲ್ಲಿ ನಡೆದ ಶಿರಚ್ಛೇದ ಪ್ರಕರಣಗಳ ಅಪರಾಧಿಗಳಿಗೆ ಪಿಎಫ್​ಐ ನಂಟು ಇದ್ದುದು ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರವು ಪಿಎಫ್​ಐ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆಯಿತು.

ದೇಶಾದ್ಯಂತ ನಡೆದ ದಾಳಿಯಲ್ಲಿ ನೂರಾರು ಮಂದಿ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೇರಳದಲ್ಲಿ 22, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ 20, ಆಂಧ್ರ ಪ್ರದೇಸದಲ್ಲಿ 5, ಅಸ್ಸಾಂನಲ್ಲಿ 9, ದೆಹಲಿಯಲ್ಲಿ 3, ಮಧ್ಯ ಪ್ರದೇಶದಲ್ಲಿ 4, ಪುದುಚೇರಿಯಲ್ಲಿ 3, ತಮಿಳುನಾಡಿನಲ್ಲಿ 10, ಉತ್ತರ ಪ್ರದೇಶದಲ್ಲಿ 8 ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನು ಎನ್​ಐಎ ಬಂಧಿಸಿದೆ.

ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸುವುದು, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಹಾಗೂ ಉಗ್ರ ಇಸ್ಲಾಂ ಪರ ಸಾಮಾನ್ಯ ಜನರನ್ನು ಓಲೈಸುವುದು ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿವೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 11  ರಾಜ್ಯಗಳಲ್ಲಿ ಪಿಎಫ್‌ಐನ 106 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ ಇದು ದೇಶದ ಅತಿ ದೊಡ್ಡ ದಾಳಿ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com