ಎನ್ಎಸ್‌ಇ ವಂಚನೆ ಪ್ರಕರಣ: ಚಿತ್ರಾ ರಾಮಕೃಷ್ಣ, ಆನಂದ್ ಸುಬ್ರಮಣಿಯನ್‌ಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್
ನವದೆಹಲಿ: ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ)ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನದಲ್ಲಿರುವ ರಾಷ್ಟ್ರೀಯ ಷೇರುಪೇಟೆಯ (ಎನ್‌ಎಸ್‌ಇ) ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಮತ್ತು ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಎನ್‌ಎಸ್‌ಇಯ ಇಬ್ಬರು ಮಾಜಿ ಅಧಿಕಾರಿಗಳಿಗೆ 'ಕಾನೂನುಬದ್ಧ ಜಾಮೀನು' ನೀಡುತ್ತಿರುವುದಾಗಿ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ತಿಳಿಸಿದ್ದಾರೆ. ಸದ್ಯ ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.
‘ಈ ಕಂಪನಿಯ ಮಾಲೀಕ ಎನ್‌ಎಸ್‌ಇ ಸರ್ವರ್‌ಅನ್ನು ಎನ್‌ಎಸ್‌ಇಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ. 2010ರಿಂದ 2012ರ ನಡುವೆ ಎನ್‌ಎಸ್‌ಇಯ ಕೆಲವು ಅಧಿಕಾರಿಗಳು ಖಾಸಗಿ ಕಂಪನಿಗೆ ಷೇರುಪೇಟೆಯ ಸರ್ವರ್‌ಗೆ ಲಾಗಿನ್ ಮೊದಲಿಗನಾಗಿ ಆಗಲು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿದ್ದರು. ಇದರಿಂದಾಗಿ ಈ ಕಂಪನಿಗೆ ಬೇರೆ ಯಾವುದೇ ಬ್ರೋಕರ್‌ಗಿಂತ ಮೊದಲು ಕೆಲವು ದತ್ತಾಂಶಗಳು ಸಿಗುತ್ತಿದ್ದವು’ ಎಂದು ಸಿಬಿಐ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ಹೇಳಿದೆ.
ಚಿತ್ರಾ ಅವರು ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಯೋಗಿಯೊಬ್ಬರ ಮಾತು ಕೇಳಿ ಆನಂದ್ ಸುಬ್ರಮಣಿಯನ್ ಅವರನ್ನು ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಹುದ್ದೆಗೆ ನೇಮಕ ಮಾಡಿದ್ದರು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೇಳಿದೆ. ಫೆ. 24 ರಂದು ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿತ್ತು.
ವಿಚಾರಣಾ ನ್ಯಾಯಾಲಯವು ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಒಂದು ದಿನದ ನಂತರ ಮಾರ್ಚ್ 6 ರಂದು ಸಿಬಿಐ ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಿತ್ತು.
ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್ 2013 ರಿಂದ ಡಿಸೆಂಬರ್ 2016 ರವರೆಗೆ ಎನ್ಎಸ್‌ಇನ ಎಂಡಿ ಮತ್ತು ಸಿಇಒ ಆಗಿದ್ದರು.
ಸುಬ್ರಮಣಿಯನ್ ನಿರ್ವಹಿಸುತ್ತಿದ್ದ ಬಾಹ್ಯ ಇಮೇಲ್ ಐಡಿಯೊಂದಿಗೆ ಚಿತ್ರ ರಾಮಕೃಷ್ಣ ಮಾತುಕತೆ ನಡೆಸುತ್ತಿದ್ದರು. ಈ ಪ್ರಕರಣದ ಸಂಪೂರ್ಣ ಪಿತೂರಿಯನ್ನು ಬಹಿರಂಗಪಡಿಸಲು ಸಾಕ್ಷಿಗಳ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ