ಎಐಸಿಸಿ ಅಧ್ಯಕ್ಷೀಯ ಚುನಾವಣೆ: ಪಕ್ಷದ ಹಿರಿಯ ಮುಖಂಡರೆಲ್ಲ ಖರ್ಗೆಗೆ ಬೆಂಬಲ- ಗೆಹ್ಲೋಟ್

ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಹಿರಿಯ ಮುಖಂಡರೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ನವದೆಹಲಿ: ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಹಿರಿಯ ಮುಖಂಡರೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.  ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ ಎಂದು ನಿನ್ನೆಯಷ್ಟೇ ಘೋಷಿಸಿದ ಗೆಹ್ಲೋಟ್, ಹಿರಿಯ ಮುಖಂಡರ ಸಭೆ ನಂತರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಎಲ್ಲಾ ಹಿರಿಯ ಮುಖಂಡರು ಖರ್ಗೆ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಶಶಿ ತರೂರು ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧವಾಗಿ ಸ್ಪರ್ಧಿಸಲಿದ್ದಾರೆ. 

ರಾಜಸ್ಥಾನ ಮುಖ್ಯಮಂತ್ರಿ ಹುದ್ದೆ ತೊರೆಯಲು ನಿಮ್ಮನ್ನು ವರಿಷ್ಠರು ಕೇಳಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್, ಕಳೆದ ಐದು ವರ್ಷಗಳಿಂದ ಗಾಂಧಿ ಕುಟುಂಬದ ಆಶೀರ್ವಾದದಿಂದ ಹಲವಾರು ಹುದ್ದೆ ನಿರ್ವಹಿಸಿದ್ದೇನೆ. ಇದು ಹುದ್ದೆಯ ವಿಚಾರವಲ್ಲ, ಆದರೆ, ಪಕ್ಷವನ್ನು ಹೇಗೆ ಸಂಘಟಿಸುವರು ಎಂಬುದಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಚುನಾವಣೆ ನಂತರ ಪಕ್ಷ ಪುನರ್ ಸಂಘಟಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವಂತೆ ಗೆಹ್ಲೋಟ್ ಮನವಿ ಮಾಡಿದರು.  ಖರ್ಗೆ ಅವರು ಅನುಭವಿ ರಾಜಕಾರಣಿಯಾಗಿದ್ದು, 10-12 ಬಾರಿ ಚುನಾವಣೆಯಲ್ಲಿ ಗೆದಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವುದಾಗಿ ಗೆಹ್ಲೋಟ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com