ರಾಷ್ಟ್ರಪತ್ನಿ ಹೇಳಿಕೆ ವಿವಾದ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಎಫ್‌ಐಆರ್ ದಾಖಲು

ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಭೋದಿಸಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ

ದಿಂಡೋರಿ: ಬಿಜೆಪಿ ಮುಖಂಡರೊಬ್ಬರು ನೀಡಿರುವ ದೂರಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಭೋದಿಸಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಿಂಡೋರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಅನ್ನು ಮುಂದಿನ ಕ್ರಮ ಕೈಗೊಳ್ಳಲು ದೆಹಲಿಯ ಸಂಸತ್ ಭವನದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಸಂಸದ ಓಂ ಪ್ರಕಾಶ್ ಧುರ್ವೆ ಅವರು ಅಧೀರ್ ರಂಜನ್ ಚೌಧರಿ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಿಂಡೋರಿ ಕೊತ್ವಾಲಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಿಕೆ ಸಿರಾಮೆ ತಿಳಿಸಿದ್ದಾರೆ. .

'ಎಫ್ಐಆರ್ ಅನ್ನು ದಿಂಡೋರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಿಂಗ್ ಅವರು ದೆಹಲಿ ಪೊಲೀಸರಿಗೆ ಪರಿಶೀಲನೆ ಮತ್ತು ತನಿಖೆಗಾಗಿ ವರ್ಗಾಯಿಸಿದ್ದಾರೆ' ಎಂದು ಅವರು ಹೇಳಿದರು.

ಘಟನೆ ದೆಹಲಿಯಲ್ಲಿ ನಡೆದಿರುವುದರಿಂದ, ಎಫ್‌ಐಆರ್ ಮುಂದಿನ ಕ್ರಮಕ್ಕಾಗಿ ಸಂಸತ್ ಭವನದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಸಿಂಗ್ ಭಾನುವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಯು ಆದಿವಾಸಿಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಧುರ್ವೆ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಸಂಸತ್ತಿನ ಒಳಗೆ ಮತ್ತು ಹೊರಗೆ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ 'ರಾಷ್ಟ್ರಪತ್ನಿ' ಹೇಳಿಕೆಗೆ ಕಾಂಗ್ರೆಸ್ ನಾಯಕ ಈಗಾಗಲೇ ಕ್ಷಮೆಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com