ಹಿಟ್ಲರ್ ಕೂಡ ಚುನಾವಣೆಯಲ್ಲಿ ಗೆಲ್ಲುತ್ತಿದ್ದ, ಆದರೆ ಸರ್ವಾಧಿಕಾರಿಯಾಗಿದ್ದ, ಅದೇ ರೀತಿ ನಮ್ಮ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವಾಗ್ದಾಳಿ

ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ವಿಷಯಗಳ ಕುರಿತು ಮಾತನಾಡಿ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ
ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಒಳಗೆ ಮತ್ತು ಹೊರಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ ಕುರಿತು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಇಂದು ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ವಿಷಯಗಳ ಕುರಿತು ಮಾತನಾಡಿ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು "ಪ್ರಜಾಪ್ರಭುತ್ವದ ಸಾವಿಗೆ" ಸಾಕ್ಷಿಯಾಗುತ್ತಿದೆ. ಕೇಂದ್ರದ, ಪ್ರಧಾನಿ ಮೋದಿಯವರು ಸರ್ವಾಧಿಕಾರದ ಆಕ್ರಮಣದ ವಿರುದ್ಧ ನಿಲ್ಲುವ ಯಾರಾದರೂ ಕೆಟ್ಟ ದಾಳಿಗೆ ಒಳಗಾಗುತ್ತಾರೆ ಎಂದು ಆರೋಪಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಮಾಜದಲ್ಲಿನ ಹಿಂಸಾಚಾರದಂತಹ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಾರದು ಎಂಬುದು ಸರ್ಕಾರದ ಏಕೈಕ ಅಜೆಂಡಾ. ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ, ನಾಲ್ಕು ಜನರ ಸರ್ವಾಧಿಕಾರವಿದೆ ಎಂದು ನೇರವಾಗಿ ಆರೋಪಿಸಿದರು. 

ನಾವು ಈಗ ದೇಶದಲ್ಲಿ ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ. ಅದಕ್ಕೆ ಭಾರತ ಸಾಕ್ಷಿಯಾಗುತ್ತಿದೆ. ಸುಮಾರು ಒಂದು ಶತಮಾನದ ಹಿಂದೆ ಭಾರತವು ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟಂತೆ ನಿರ್ಮಾಣವಾಯಿತು. ಅದು ಈಗ ನಿಮ್ಮ ಕಣ್ಣುಗಳ ಮುಂದೆ ನಾಶವಾಗುತ್ತಿದೆ ಆರೋಪಿಸಿದರು.

ಮೋದಿಯವರ ಸರ್ವಾಧಿಕಾರದ ಕಲ್ಪನೆಯ ವಿರುದ್ಧ ನಿಲ್ಲುವ ಯಾರೇ ಆಗಿದ್ದರೂ ಅವನು ಯಾರು, ಅವನು ಎಲ್ಲಿಂದ ಬಂದವನು, ಯಾವ ರಾಜ್ಯ, ಯಾವ ಧರ್ಮ, ಗಂಡು ಅಥವಾ ಹೆಣ್ಣು ಎಂಬುದು ನೋಡದೆ ಆ ವ್ಯಕ್ತಿಯನ್ನು ಕೆಟ್ಟದಾಗಿ ಹಲ್ಲೆ ಮಾಡಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ, ಬಂಧಿಸಲಾಗುತ್ತದೆ, ಥಳಿಸಲಾಗುತ್ತದೆ. 

ಬೆಲೆ ಏರಿಕೆಯಾಗಲಿ, ನಿರುದ್ಯೋಗವಾಗಲಿ ಅಥವಾ ಸಮಾಜದಲ್ಲಿನ ಹಿಂಸಾಚಾರವಾಗಲಿ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಾರದು ಎಂಬುದೊಂದೇ ಮೋದಿಯವರ ಅಜೆಂಡಾವಾಗಿದೆ. ನಾಲ್ಕೈದು ಜನರ ಹಿತಾಸಕ್ತಿ ಕಾಪಾಡಲು ಸರ್ಕಾರ ನಡೆಸುತ್ತಿದ್ದು, ‘ಇಬ್ಬರು ಮೂವರು ದೊಡ್ಡ ಉದ್ಯಮಿಗಳ ಹಿತಾಸಕ್ತಿಯಿಂದ ಸರ್ವಾಧಿಕಾರ ನಡೆಸಲಾಗುತ್ತಿದೆ ಎಂದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಮ್ಮನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿರುವ ಕುರಿತು ಕೇಳಿದಾಗ, ಈ ಕೇಸಿನಲ್ಲಿ ವಿಚಾರಣೆ ಮಾಡುವಂತಹದ್ದು ಏನೂ ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆರ್‌ಎಸ್‌ಎಸ್‌ನ ಕಲ್ಪನೆಯನ್ನು ವಿರೋಧಿಸುವುದು ನನ್ನ ಕೆಲಸ. ನಾನು ಅದನ್ನು ಎಷ್ಟು ಹೆಚ್ಚು ಮಾಡುತ್ತೇನೋ ಅಷ್ಟು ಹೆಚ್ಚು ನನ್ನ ಮೇಲೆ ದಾಳಿಯಾಗುತ್ತದೆ, ಸಂತೋಷ, ನನ್ನ ವಿರುದ್ಧ ದಾಳಿ ಮುಂದುವರಿಸಿ ಎಂದರು. ಸರ್ಕಾರ ನನ್ನನ್ನು ಹೆದರಿಸಲು, ಬೆದರಿಸಲು ನೋಡಿದರೆ ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದರು. 

ನಾವು ಸಿದ್ಧಾಂತಕ್ಕಾಗಿ ಹೋರಾಡುತ್ತೇವೆ. ನಮ್ಮಂತಹ ಕೋಟಿಗಟ್ಟಲೆ ಜನರು ಇದ್ದಾರೆ ಎಂಬ ಕಾರಣಕ್ಕಾಗಿ ಮೋದಿ ಮತ್ತು ಅವರ ತಂಡ ಗಾಂಧಿ ಕುಟುಂಬದ ಮೇಲೆ ಎರಗಿ ಬೀಳುತ್ತಿದ್ದಾರೆ. ನಾವು ಪ್ರಜಾಪ್ರಭುತ್ವಕ್ಕಾಗಿ, ಕೋಮು ಸೌಹಾರ್ದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು. 

ನನ್ನ ಕುಟುಂಬ ಈ ದೇಶಕ್ಕಾಗಿ, ದೇಶದ ಹಿತಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಸಿದ್ಧಾಂತಕ್ಕಾಗಿ ಹೋರಾಡುವುದರಿಂದ ಅದು ನಮ್ಮ ಜವಾಬ್ದಾರಿಯಾಗಿದೆ. ಹಿಂದೂ-ಮುಸ್ಲಿಮರು ಪರಸ್ಪರ ಕಿತ್ತಾಡಿಕೊಂಡಾಗ, ದಲಿತರ ಹತ್ಯೆಯಾದಾಗ, ಮಹಿಳೆಯನ್ನು ಥಳಿಸಿದಾಗ ನಮಗೆ ನೋವಾಗುತ್ತದೆ. ಆದ್ದರಿಂದ, ನಾವು ಹೋರಾಡುತ್ತೇವೆ ಎಂದರು.

ಹಿಟ್ಲರ್ ಕೂಡ ಚುನಾವಣೆಯಲ್ಲಿ ಗೆದ್ದಿದ್ದ, ಚುನಾವಣೆಯಲ್ಲಿ ಗೆಲ್ಲುತ್ತಿದ್ದ. ಅಧಿಕಾರವನ್ನು ಅವನು ಹೇಗೆ ಬಳಸಿಕೊಂಡನು? ಅವರು ಜರ್ಮನಿಯ ಎಲ್ಲಾ ಸಂಸ್ಥೆಗಳ ಮೇಲೆ ಹಿಡಿತ ಹೊಂದಿದ್ದರು. ನನಗೆ ಸಂಪೂರ್ಣ ವ್ಯವಸ್ಥೆಯನ್ನು ನೀಡಿ, ನಂತರ ನಾನು ನಿಮಗೆ ಚುನಾವಣೆಗಳನ್ನು ಹೇಗೆ ಗೆಲ್ಲುತ್ತೇನೆ ಎಂದು ತೋರಿಸುತ್ತೇನೆ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.

ವಿತ್ತ ಸಚಿವೆಗೆ ಜ್ಞಾನವಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕೂಡ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದರು. ಅವರು ಹೇಳುತ್ತಿರುವ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಬೇರೆ ಯಾವುದೋ ಎಂದು ನಾನು ಭಾವಿಸುತ್ತೇನೆ. ಹಣಕಾಸು ಸಚಿವರಿಗೆ ಭಾರತದ ಆರ್ಥಿಕತೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ, ಶೂನ್ಯ ತಿಳುವಳಿಕೆ ಹೊಂದಿದ್ದು, ಮುಖವಾಣಿಯಂತೆ ಮಾತನಾಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com