ಪತ್ರಕರ್ತ ಪಾತ್ರಧಾರಿ ವಿದ್ಯಾರ್ಥಿಯಿಂದ ತನ್ನ ಶಾಲೆಯ ಅವ್ಯವಸ್ಥೆ ವಿಡಿಯೋ ವೈರಲ್; ಶಿಕ್ಷಕರ ಬೆದರಿಕೆ; ಸಚಿವರ ನೆರವಿನ ಭರವಸೆ!
ಪುಟ್ಟ ಬಾಲಕನೋರ್ವ ಪತ್ರಕರ್ತ ವೇಷಧಾರಿಯಾಗಿ ತನ್ನದೇ ಶಾಲೆಯ ಅವ್ಯವಸ್ಥೆಯನ್ನು ವಿಡಿಯೋ ಮೂಲಕ ಜಗಜ್ಜಾಹೀರು ಮಾಡಿದ್ದು, ಈ ವಿಡಿಯೋ ಬೆನ್ನಲ್ಲೇ ಬಾಲಕನಿಗೆ ಶಾಲೆಯ ಶಿಕ್ಷಕರೇ ಬೆದರಿಕೆ ಒಡ್ಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
Published: 06th August 2022 03:56 PM | Last Updated: 06th August 2022 04:39 PM | A+A A-

ಪತ್ರಕರ್ತನಾದ ಬಾಲಕ ಸರ್ಫರಾಜ್
ರಾಂಚಿ: ಪುಟ್ಟ ಬಾಲಕನೋರ್ವ ಪತ್ರಕರ್ತ ವೇಷಧಾರಿಯಾಗಿ ತನ್ನದೇ ಶಾಲೆಯ ಅವ್ಯವಸ್ಥೆಯನ್ನು ವಿಡಿಯೋ ಮೂಲಕ ಜಗಜ್ಜಾಹೀರು ಮಾಡಿದ್ದು, ಈ ವಿಡಿಯೋ ಬೆನ್ನಲ್ಲೇ ಬಾಲಕನಿಗೆ ಶಾಲೆಯ ಶಿಕ್ಷಕರೇ ಬೆದರಿಕೆ ಒಡ್ಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ಗೊಡ್ಡಾದ ಸರ್ಕಾರಿ ಶಾಲೆಯೊಂದರಲ್ಲಿ 12 ವರ್ಷದ ವಿದ್ಯಾರ್ಥಿಯೊಬ್ಬ ವರದಿಗಾರನಾಗಿ ತನ್ನದೇ ಶಾಲಾ ಅವ್ಯವಸ್ಥೆಯನ್ನು ವಿಡಿಯೋ ಮೂಲಕ ಜಗಜ್ಜಾಹೀರು ಮಾಡಿದ್ದಾನೆ. ಶಾಲೆಯ ಹಾಲಿ ಪರಿಸ್ಥಿತಿ, ಶೌಚಾಲಯ, ಕೊಠಡಿಗಳಲ್ಲಿನ ದುರವಸ್ಥೆ ಮತ್ತು ಶಿಕ್ಷಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ತೆರೆದಿಟ್ಟಿದ್ದಾನೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಅದೇ ಶಾಲೆಯ ಕೆಲ ಶಿಕ್ಷಕರು ಬಾಲಕನಿಗೆ ಬೆದರಿಕೆ ಹಾಕಿದ್ದಾರೆ.
12 ವರ್ಷದ ಪುಟ್ಟ ಪೋರ ಸರ್ಫರಾಜ್ ಎಂಬಾತ ಮರದ ಪುಟ್ಟ ಕೋಲಿಗೆ ಪ್ಲಾಸ್ಟಿಕ್ ಬಾಟಲಿ ಅಳವಡಿಸಿ ಅದನ್ನೇ ಮೈಕ್ ಆಗಿ ಬಳಸಿ ತನ್ನದೇ ಶಾಲೆಯ ಅವಾಂತರಗಳನ್ನು ವರಜಿ ಮಾಡಿದ್ದಾನೆ. ಗೊಡ್ಡಾದ ಮಹ್ಗಾಮಾ ಬ್ಲಾಕ್‌ನ ಭಿಖಿಯಾಚಕ್ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಾಲೆಯ ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಯನ್ನು ಬಹಿರಂಗಪಡಿಸಿದ್ದಾನೆ. ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಯತ್ತ ಮುಖಕೂಡ ಹಾಕುತ್ತಿಲ್ಲ ಎಂದು ವಿಡಿಯೋದಲ್ಲಿ ದೂರಿದ್ದಾನೆ. ಅಲ್ಲದೆ ಶಾಲೆಯ ಈ ಅವ್ಯವಸ್ಥೆಗೆ ಕಾರಣರಾದ ಶಿಕ್ಷಕರನ್ನು ಶಾಲೆಯಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರಿಗೆ ಮನವಿ ಮಾಡಿದ್ದಾರೆ.
बच्चे की सच्ची पत्रकारिता को दिल से सलाम
— Maaz Akhter (@MaazAkhter800) August 4, 2022
वीडियो झारखंड की है और बच्चे का नाम सरफराज है@MaazAkhter800#JharkhandNews #Viral pic.twitter.com/dsKVdtiRSe
ವಿಡಿಯೋದಲ್ಲಿ ಬಾಲಕ ಸರ್ಫರಾಜ್, ಶಾಲೆಯ ಅವರಣದಲ್ಲೇ ಬೆಳೆದಿರುವ ಗಿಡಗಂಟೆಗಳು, ಶಾಲಾ ತರಗತಿಗಳನ್ನು ಜಾನುವಾರುಗಳ ಮೇವು ಸಂಗ್ರಹಿಸುವ ಗೋಡೌನ್ ಆಗಿ ಬಳಸಲಾಗುತ್ತಿದೆ. ಕುಡಿಯುವ ನೀರಿಲ್ಲ.. ಶೌಚಾಲಯವಿಲ್ಲ.. ಆವರಣದಲ್ಲೇ ಸರಿಯಾದ ನಿರ್ವಹಣೆ ಇಲ್ಲದೇ ಮರಗಳು ಬೆಳೆದಿವೆ ಎಂದು ವರದಿ ಮಾಡಿದ್ದಾನೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಶಾಲಾ ಸಿಬ್ಬಂದಿ ಬಾಲಕನಿಗೆ ಬೆದರಿಕೆ ಹಾಕಿದ್ದು, ಇಂತಹ ಕೆಲಸದಿಂದ ದೂರವಿರುವಂತೆ.. ಇಲ್ಲದಿದ್ದರೇ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಪಂಚಾಯತ್ ಚುನಾವಣೆಯಲ್ಲಿ ಗೆದ್ದದ್ದು ಪತ್ನಿಯರು, ಪ್ರಮಾಣ ವಚನ ಸ್ವೀಕರಿಸಿದ್ದು ಮಾತ್ರ ಪತಿ ಮಹಾಶಯರು!
ಇನ್ನು ಶಾಲಾ ಶಿಕ್ಷಕರ ಬೆದರಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಕ ಸರ್ಫರಾಜ್, 'ಈ ಶಾಲೆಯಲ್ಲಿ ಶಿಕ್ಷಕರಿಲ್ಲ. ನಾನು ಈ ವಿಡಿಯೋ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಶಾಲೆಯ ಸಿಬ್ಬಂದಿ ನನ್ನ ನಿವಾಸಕ್ಕೆ ಬಂದು ಬೆದರಿಕೆ ಹಾಕಿದ್ದಾರೆ. ಶಿಕ್ಷಕರಲ್ಲಿ ಒಬ್ಬರಾದ ಎಂಡಿ ತಮಿಜುದ್ದೀನ್ ನನ್ನ ಮನೆಗೆ ಬಂದು ನನ್ನ ವಿರುದ್ಧ ದೂರು ನೀಡುವುದಾಗಿ ನನ್ನ ಪೋಷಕರಿಗೆ ಬೆದರಿಕೆ ಹಾಕಿದರು. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಹಾಜರಾತಿಗಾಗಿ ಮಾತ್ರ ಶಾಲೆಗೆ ಬರುವುದರಿಂದ ಅವರನ್ನು ಶಾಲೆಯಿಂದ ತೆಗೆದುಹಾಕುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾನೆ.
ಅಂತೆಯೇ ಇಂತಹ ಬೆದರಿಕೆಗಳಿಂದ ಹಿಂದೆ ಸರಿಯುವುದಿಲ್ಲ ಮತ್ತು ಮುಂದೆಯೂ ಇಂತಹ ವಿಷಯಗಳನ್ನು ಬಹಿರಂಗಪಡಿಸುತ್ತೇನೆ. ಪ್ರಾರಂಭದಲ್ಲಿ ಶಾಲೆಯ ಸ್ಥಿತಿ ಹೀಗಿರಲಿಲ್ಲ, ಆದರೆ ನಂತರ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇದು ಹದಗೆಟ್ಟಿದೆ. ಶಿಕ್ಷಕರು ತಮ್ಮ ಹಾಜರಾತಿಗಾಗಿ ಮಾತ್ರ ಇಲ್ಲಿಗೆ ಬರುತ್ತಾರೆ; ಶಿಕ್ಷಕರು ಸರಿಯಾಗಿ ಪಾಠ ಮಾಡದ ಕಾರಣ, ಮಕ್ಕಳು ಸಹ ನಿಯಮಿತವಾಗಿ ಬರುವುದಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಬರಗಾಲ ಬರುವ 'ಅಪಶಕುನ': ಯುವತಿಗೆ ಸ್ವಂತ ಭೂಮಿಯಲ್ಲೇ ಉಳುಮೆಗೆ ನಿಷೇಧ ಹೇರಿದ ಜಾರ್ಖಂಡ್ ಪಂಚಾಯತ್!
ಅಚ್ಚರಿ ಎಂದರೆ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಶಾಲೆಯ ಕಟ್ಟಡವನ್ನು ಸ್ವಚ್ಛಗೊಳಿಸಲಾಗಿದೆ ಮತ್ತು ಅಲ್ಲಿ ಪೋಸ್ಟ್ ಮಾಡಲಾದ ಇಬ್ಬರು ಶಾಲಾ ಶಿಕ್ಷಕರನ್ನು ಅಮಾನತುಗೊಳಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ರಜನಿ ದೇವಿ ಶಿಫಾರಸು ಮಾಡಿದ್ದಾರೆ. ಅಲ್ಲದೆ ಸ್ವತಃ ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಗುರುವಾರ ರಾತ್ರಿ ಬಾಲಕ ಸರ್ಫರಾಜ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಎಲ್ಲ ರೀತಿಯ ನೆರವು ನೀಡುವುದಾಗಿ ಮತ್ತು ಶಾಲೆಯನ್ನು ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಪತ್ರಕರ್ತನಾಗಲು ಬಯಸುತ್ತಾನೆ ಸರ್ಫರಾಜ್
ಇನ್ನು ಬಾಲಕ ಸರ್ಫರಾಜ್ ತಾನು ದೊಡ್ಡವನಾದ ಬಳಿಕ ಪತ್ರಕರ್ತನಾಗಲು ಬಯಸುತ್ತೇನೆ ಎಂದು ಹೇಳಿದ್ದಾನೆ. ಆದರೆ ತನ್ನ ಈ ನಿರ್ಧಾರವನ್ನು ಅವರ ಶಾಲೆಯ ಶಿಕ್ಷಕರು ಇಷ್ಟಪಡಲಿಲ್ಲ.. ಅವರು ಇಂತಹ ಚಟುವಟಿಕೆಗಳಿಂದ ದೂರವಿರಲು ಸೂಚಿಸಿದ್ದಾರೆ ಎಂದು ಹೇಳಿದ್ದಾನೆ.