ಮಹಿಳೆಯನ್ನು ನಿಂದಿಸಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯನ ನಿವಾಸದ ಮೇಲೆ ಬುಲ್ಡೋಜರ್ ಪ್ರಯೋಗ; ಅಕ್ರಮ ಕಟ್ಟಡ ನೆಲಸಮ

ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಆರೋಪವನ್ನು ಎದುರಿಸುತ್ತಿದ್ದ ಬಿಜೆಪಿಯ ಕಿಸಾನ್ ಮೋರ್ಚಾ ಸದಸ್ಯನೆಂದು ಹೇಳಲಾದ ಶ್ರೀಕಾಂತ್ ತ್ಯಾಗಿ ಅವರ ನಿವಾಸದ ಮೇಲೆ ಬಿಜೆಪಿ ಬುಲ್ಡೋಜರ್ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ನೆಲಸಮ ಮಾಡಿದೆ.
ಶ್ರೀಕಾಂತ್ ತ್ಯಾಗಿಗೆ ಸೇರಿದ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಬುಲ್ಡೋಜರ್ ದಾಳಿ
ಶ್ರೀಕಾಂತ್ ತ್ಯಾಗಿಗೆ ಸೇರಿದ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಬುಲ್ಡೋಜರ್ ದಾಳಿ

ನವದೆಹಲಿ: ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಆರೋಪವನ್ನು ಎದುರಿಸುತ್ತಿದ್ದ ಬಿಜೆಪಿಯ ಕಿಸಾನ್ ಮೋರ್ಚಾ ಸದಸ್ಯನೆಂದು ಹೇಳಲಾದ ಶ್ರೀಕಾಂತ್ ತ್ಯಾಗಿ ಅವರ ನಿವಾಸದ ಮೇಲೆ ಬಿಜೆಪಿ ಬುಲ್ಡೋಜರ್ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನು ನೆಲಸಮ ಮಾಡಿದೆ.

ಪೊಲೀಸ್ ಸಿಬ್ಬಂದಿಯೊಂದಿಗೆ ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯನ್ನು ತಲುಪಿದ ಅಧಿಕಾರಿಗಳು, ಶ್ರೀಕಾಂತ್ ತ್ಯಾಗಿ ಅವರು ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಕೆಡವಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ತ್ಯಾಗಿ ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ನೋಯ್ಡಾ ಪೊಲೀಸರು ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ಸದಸ್ಯ ತ್ಯಾಗಿ ಮತ್ತು ಮಹಿಳೆಯ ನಡುವೆ ಜಗಳ ನಡೆದಿತ್ತು. ತ್ಯಾಗಿ ಅವರು ಕೆಲವು ಸಸಿಗಳನ್ನು ನೆಡಲು ಬಯಸಿದ್ದರು. ಆದರೆ, ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಿಳೆ ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತ್ಯಾಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿತ್ತು. ಅದಾದ ಕೆಲವು ದಿನಗಳ ನಂತರ, ತ್ಯಾಗಿ ಅವರ ಬೆಂಬಲಿಗರು ವಸತಿ ಸಂಕೀರ್ಣಕ್ಕೆ ತೆರಳಿ, ಮಹಿಳೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಮತ್ತು ಮಹಿಳೆಯನ್ನು ನಿಂದಿಸಿದ್ದರು.

"ನಿಂದನೆ' ಮಾಡಿದ್ದ ಶ್ರೀಕಾಂತ್ ತ್ಯಾಗಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರಕ್ಕೆ ಧನ್ಯವಾದಗಳು. ನೋಯ್ಡಾ ಆಡಳಿತದಿಂದ ತ್ಯಾಗಿ ಅವರು ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳು ಈಗ ನೆಲಸಮವಾಗಿವೆ'. #SrikantTyagi' ಎಂದು ದೆಹಲಿಯ ಬಿಜೆಪಿ ವಕ್ತಾರ ಕೇಮಚಂದ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ನೋಯ್ಡಾ 2ನೇ ಹಂತದ ಸ್ಟೇಷನ್ ಇನ್‌ಚಾರ್ಜ್ ಸುಜಿತ್ ಉಪಾಧ್ಯಾಯ ಅವರನ್ನು ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಎಲ್‌.ವೈ ಮತ್ತು ನೋಯ್ಡಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ಸಿಂಗ್, ಗ್ರ್ಯಾಂಡ್ ಓಮ್ಯಾಕ್ಸ್ ವಸತಿ ಸಂಕೀರ್ಣಕ್ಕೆ ಬಂದು ನಿವಾಸಿಗಳನ್ನು ಭೇಟಿಯಾದರು. ನೋಯ್ಡಾ ಆಡಳಿತವು ತ್ಯಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಘಟನೆ ನಡೆದಾಗಿನಿಂದ ತ್ಯಾಗಿ ಪರಾರಿಯಾಗಿದ್ದು, ಆತನನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕೂಡ ತ್ಯಾಗಿಯನ್ನು ಬಂಧಿಸುವಂತೆ ಒತ್ತಾಯಿಸಿದೆ. ಅಲ್ಲದೆ, ಮಹಿಳೆಗೆ ಪೊಲೀಸ್ ರಕ್ಷಣೆ ನೀಡುವಂತೆ ಪೊಲೀಸರಿಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com