ಬಿಹಾರ: ಬಿಜೆಪಿ ಸಖ್ಯ ತೊರೆದು ನಿತೀಶ್ ಕುಮಾರ್ ಆರ್‌ಜೆಡಿಯೊಂದಿಗೆ ಮೈತ್ರಿ? ಮಂಗಳವಾರ ನಿರ್ಧಾರ ಪ್ರಕಟ
ಬಿಹಾರದಲ್ಲಿ ಜೆಡಿಯು ಬಿಜೆಪಿ ಜೊತೆಗಿನ ಸಖ್ಯ ತೊರೆಯುವ ಕುರಿತು ಚರ್ಚೆಗಳು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಜೆಡಿಯು ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
Published: 08th August 2022 11:21 PM | Last Updated: 09th August 2022 01:29 PM | A+A A-

ನಿತೀಶ್ ಕುಮಾರ್, ತೇಜಸ್ವಿ ಯಾದವ್
ಪಾಟ್ನಾ: ಬಿಹಾರದಲ್ಲಿ ಜೆಡಿಯು ಬಿಜೆಪಿ ಜೊತೆಗಿನ ಸಖ್ಯ ತೊರೆಯುವ ಕುರಿತು ಚರ್ಚೆಗಳು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಜೆಡಿಯು ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಪಕ್ಷದ ನಾಯಕರೊಂದಿಗಿನ ನಿತೀಶ್ ಅವರ ಸಭೆಯು ಹೆಚ್ಚು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಸಭೆಯಿಂದ ಏನಾದರೂ ನಿರ್ಧಾರ ಹೊರಬೀಳಬಹುದು ಎನ್ನಲಾಗುತ್ತಿದೆ. ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ವಿರುದ್ಧದ ಭ್ರಷ್ಟಾಚಾರ ಆರೋಪ ಮತ್ತು ನಂತರ ಪಕ್ಷಕ್ಕೆ ರಾಜೀನಾಮೆ ನೀಡಿದ ಬಗ್ಗೆ ಚರ್ಚಿಸಲು ಪಕ್ಷವು ಸಭೆಯನ್ನು ಕರೆದಿದೆ ಎಂದು ಜೆಡಿಯು ನಾಯಕರು ಹೇಳುತ್ತಾರೆ. ಆದರೆ ನಿತೀಶ್ ಅವರು ಮತ್ತೆ ಎನ್‌ಡಿಎ ತೊರೆಯಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹವನ್ನುಅವರು ಒಪ್ಪಿಕೊಳ್ಳಲಿಲ್ಲ.
ಜೆಡಿಯುನಲ್ಲಿ ಕೆಲವು ಸಮಸ್ಯೆಗಳಿದ್ದು, ಸಭೆಯಲ್ಲಿ ಚರ್ಚಿಸಲಾಗುವುದು, ಈ ವಿಷಯಗಳ ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜೆಡಿಯು ಹಿರಿಯ ಸಚಿವ ವಿಜಯ್ ಕುಮಾರ್ ಚೌಧರಿ ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಅನಿಶ್ಚಿತತೆಯಲ್ಲಿ ಎನ್‌ಡಿಎ ಭವಿಷ್ಯ, ಜೆಡಿಯು ಸಭೆಗೂ ಮುನ್ನ ಬಿಜೆಪಿ ಎಚ್ಚರಿಕೆಯ ಹೆಜ್ಜೆ
ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿ ಮಂಗಳವಾರ ತನ್ನ ಪಕ್ಷದ ಶಾಸಕರ ಸಭೆ ನಡೆಸಲಿದೆ. ಜೆಡಿಯು ಸಭೆಯು ನಿತೀಶ್ ಅವರ ಮುಂದಿನ ನಡೆ ಕುರಿತು ಹಲವು ಅನುಮಾನಗಳನ್ನು ನಿವಾರಿಸುವ ಸಾಧ್ಯತೆಯಿದ್ದರೆ, ಆರ್‌ಜೆಡಿ ಸಭೆಗೂ ಹೆಚ್ಚಿನ ಮಹತ್ವವಿದೆ. ನಿತೀಶ್ ಕುಮಾರ್ ಒಂದು ವೇಳೆ ಬಿಜೆಪಿ ಸಖ್ಯ ತೊರೆಯುವುದಾದರೆ ತಮ್ಮ ಪಕ್ಷ ಅವರನ್ನು ಸ್ವಾಗತಿಸಲಿದೆ ಎಂದು ಬಿಹಾರ ಆರ್‌ಜೆಡಿ ಅಧ್ಯಕ್ಷ ಜಗದಾನಂದ್ ಸಿಂಗ್ ಹೇಳುವ ಮೂಲಕ ನಡೆಯುತ್ತಿರುವ ರಾಜಕೀಯ ಅನಿಶ್ಚಿತತೆಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ.
ರಾಜ್ಯದಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ಜೆಡಿಯುಗೆ ಆರ್‌ಜೆಡಿ ಹೊರಗಿನ ಬೆಂಬಲವನ್ನು ನೀಡಬಹುದು ಎಂಬ ಊಹಾಪೋಹವಿದೆ. ಮಂಗಳವಾರ ನಡೆಯಲಿರುವ ಆರ್‌ಜೆಡಿ ಸಭೆಯು ತೇಜಸ್ವಿ ಯಾದವ್‌ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವುದನ್ನು ಪಕ್ಷವು ಒಪ್ಪಿಕೊಳ್ಳುತ್ತದೆಯೇ ಅಥವಾ ಅವರಿಗೆ ಸಿಎಂ ಸ್ಥಾನಕ್ಕಾಗಿ ಒತ್ತಾಯಿಸುತ್ತದೆಯೇ ಎಂಬುದು ಪ್ರಮುಖವಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿರ್ಧಾರಗಳನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.