ಸಿಎಂ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸಂಪುಟ ವಿಸ್ತರಣೆ: 18 ಶಾಸಕರು ಸಚಿವರಾಗಿ ಪ್ರಮಾಣವಚನ

ಮಹಾರಾಷ್ಟ್ರ ಸರ್ಕಾರದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಶಿವಸೇನೆಯ ಬಂಡಾಯ ಶಾಸಕರು ಮತ್ತು ಬಿಜೆಪಿ ಸೇರಿ ರಚಿಸಿರುವ ಮೈತ್ರಿ ಸರ್ಕಾರಕ್ಕೆ ಸರ್ಕಾರ ರಚನೆ ಮಾಡಿ 40 ದಿನಗಳ ನಂತರ ಸಚಿವ ಸಂಪುಟ ವಿಸ್ತರಣೆ ಭಾಗ್ಯ ಸಿಕ್ಕಿದೆ.
ಮುಂಬೈನ ರಾಜಭವನದಲ್ಲಿ ಇಂದು ನಡೆದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ
ಮುಂಬೈನ ರಾಜಭವನದಲ್ಲಿ ಇಂದು ನಡೆದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಶಿವಸೇನೆಯ ಬಂಡಾಯ ಶಾಸಕರು ಮತ್ತು (Shiv Sena Rebel MLA’s) ಬಿಜೆಪಿ (BJP) ಸೇರಿ ರಚಿಸಿರುವ ಮೈತ್ರಿ ಸರ್ಕಾರಕ್ಕೆ ಸರ್ಕಾರ ರಚನೆ ಮಾಡಿ 40 ದಿನಗಳ ನಂತರ ಸಚಿವ ಸಂಪುಟ ವಿಸ್ತರಣೆ ಭಾಗ್ಯ ಸಿಕ್ಕಿದೆ.

ಕಳೆದ ಜೂನ್ 30ರಂದು ಸಿಎಂ (CM) ಆಗಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ (Eknath Shinde) ಹಾಗೂ ಡಿಸಿಎಂ (DCM) ಆಗಿ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ (Devendra Fadnavis) ಪ್ರಮಾಣವಚನ ಸ್ವೀಕರಿಸಿದ್ದರು. 

ಇದೀಗ ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಇಂದು ಮಂಗಳವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಶಿವಸೇನೆ ಹಾಗೂ ಬಿಜೆಪಿ ಸರ್ಕಾರದಲ್ಲಿ 50:50ರಷ್ಟು ಸೂತ್ರದಂತೆ ಸಂಪುಟ ವಿಸ್ತರಣೆ ಮಾಡಲಾಗಿದ್ದು, 18 ಶಾಸಕರು ಸಚಿವರಾಗಿ ಇಂದು ಮುಂಬೈಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಪೈಕಿ ಶಿವಸೇನೆಯ 9 ಹಾಗೂ ಬಿಜೆಪಿಯ 9 ಶಾಸಕರು ಸಂಪುಟ ಸೇರಿದರು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ (Bhagat Singh Koshyari) ನೂತನ ಸಚಿವರಿಗೆ ಪ್ರಮಾಣವಚನ (oath) ಬೋಧಿಸಿದರು.

50:50 ಸೂತ್ರದಂತೆ ಸಂಪುಟ ವಿಸ್ತರಣೆ: ಇಂದು ಬೆಳಗ್ಗೆ ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಈ ಹಿಂದೆ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಸೇನೆಯ ಶಾಸಕರೆಲ್ಲರಿಗೂ ಈ ಬಾರಿ ಕೂಡ ಸಚಿವ ಸ್ಥಾನ ದಕ್ಕಿದ್ದು ಮತ್ತೊಬ್ಬ ಬಂಡಾಯ ಶಿವಸೇನೆ ನಾಯಕ ತಾನಾಜಿ ಸಾವಂತ್ ಹೊಸ ಮುಖವಾಗಿದ್ದಾರೆ.

ಬಿಜೆಪಿ ಶಾಸಕರಾದ ಚಂದ್ರಕಾಂತ್ ಪಾಟೀಲ್, ಸುಧೀರ್ ಮಂಗಟಿವಾರ್, ಗಿರೀಶ್ ಮಹಾಜನ್, ಸುರೇಶ್ ಖಾಂಡೆ, ರಾಧಾಕೃಷ್ಣ ಪಾಟೀಲ್, ರವೀಂದ್ರ ಚೌಹಾಣ್, ಮಂಗಲ್ ಪ್ರಭಾತ್ ಲೋಧಾ, ವಿಜಯಕುಮಾರ್ ಗವಿತ್ ಹಾಗೂ ಅತುಲ್ ಸಾವೆ ಸೇರಿದಂತೆ 9 ಮಂದಿ ಶಾಸಕರು ಸಂಪುಟ ಸೇರಿದ್ದಾರೆ.

ಶಿವಸೇನೆಯಿಂದ ಮಂತ್ರಿಗಳು: ದಾದಾ ಭೂಸೆ, ಶಂಭುರಾಜೇ ದೇಸಾಯಿ, ಸಂದೀಪನ್ ಬುಮ್ರೆ, ಉದಯ್ ಸಾಮಂತ್, ತಾನಾಜಿ ಸಾವಂತ್, ಅಬ್ದುಲ್ ಸತ್ತಾರ್, ದೀಪಕ್ ಕೇಸರ್ಕರ್, ಗುಲಾಬ್ರಾವ್ ಪಾಟೀಲ್ ಮತ್ತು ಸಂಜಯ್ ರಾಥೌಡ್.

ಇನ್ನು ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಸಿಎಂ ಏಕನಾಥ್ ಶಿಂಧೆ ಇಂದು ಅಸಮಾಧಾನಿತರನ್ನು ಸಮಾಧಾನಪಡಿಸುವ ಯತ್ನ ನಡೆಸಿದರು. ದಕ್ಷಿಣ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಶಿವಸೇನೆ ಶಾಸಕರನ್ನು ಭೇಟಿ ಮಾಡಿದರು. ಎರಡು-ಮೂರು ವಾರಗಳಲ್ಲಿ ಎರಡನೇ ಸುತ್ತಿನ ವಿಸ್ತರಣೆ ನಡೆಯಲಿದೆ. ಆಗ ಮತ್ತಷ್ಟು ಶಾಸಕರಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಏಕನಾಥ್ ಶಿಂಧೆ ಅವರಿಗೆ ಶಿವಸೇನೆಯ 55 ಶಾಸಕರ ಪೈಕಿ 40 ಶಾಸಕರ ಬೆಂಬಲವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com