ಸ್ವಾತಂತ್ರ್ಯ ದಿನಾಚರಣೆ: ಕೆಂಪುಕೋಟೆಗೆ 7,000 ಮಂದಿಗೆ ಆಹ್ವಾನ, ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು!
ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವ ಕೆಂಪುಕೋಟೆಗೆ ಈ ಬಾರಿ 7000 ಅತಿಥಿಗಳು ಬರುವ ಸಾಧ್ಯತೆ ಇರುವುದರಿಂದ ದೆಹಲಿ ಪೊಲೀಸರು ಸರ್ಪಗಾವಲು ಹೆಚ್ಚಿಸಿದ್ದಾರೆ.
Published: 13th August 2022 03:36 PM | Last Updated: 13th August 2022 04:16 PM | A+A A-

ಕೆಂಪುಕೋಟೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವ ಕೆಂಪುಕೋಟೆಗೆ ಈ ಬಾರಿ 7000 ಅತಿಥಿಗಳು ಬರುವ ಸಾಧ್ಯತೆ ಇರುವುದರಿಂದ ದೆಹಲಿ ಪೊಲೀಸರು ಸರ್ಪಗಾವಲು ಹೆಚ್ಚಿಸಿದ್ದಾರೆ.
ಕೆಂಪುಕೋಟೆ ಆಗಮನದ ಸ್ಥಳದಲ್ಲಿ ವಿವಿಧ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸೋಮವಾರ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಸುಮಾರು 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಯಾವುದೇ ರೀತಿಯ ಬೆದರಿಕೆಗಳನ್ನು ಸುಲಭವಾಗಿ ಎದುರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಗಾಳಿಪಟಗಳನ್ನು ಹಿಡಿಯಲು 400 ಮಂದಿಯನ್ನು ನಿಯೋಜಿಸಲಾಗಿದೆ. ಇನ್ನು ಕಟ್ಟಡದ ಮೇಲ್ಛಾವಣಿ ಸೇರಿದಂತೆ ಸೂಕ್ಷ್ಮಪ್ರದೇಶಗಳಲ್ಲೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೆಂಪುಕೋಟೆಯಿಂದ ಐದು ಕಿ.ಮೀವರೆಗೆ ಗಾಳಿಪಟ ಹಾರಾಟದ ವಲಯವಲ್ಲ ಎಂದು ಘೋಷಿಸಲಾಗಿದೆ. ಡಿಆರ್ ಡಿಒದ ಡ್ರೋಣ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ, 8 ಸಾವಿರ ಜನರಿಗೆ ಆಹ್ವಾನ
ಕೆಂಪುಕೋಟೆ ಸುತ್ತಲು ಹೈ ರೆಸ್ಯೂಲೆಷನ್ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಅಲ್ಲಿಗೆ ಬರುವವರ ಮುಖಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತದೆ. ಈ ಬಾರಿ ಆಹ್ವಾನಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿರುವುದರಿಂದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಊಟದ ಬಾಕ್ಸ್, ನೀರಿನ ಬಾಟಲ್, ರಿಮೋಟ್ ಕಂಟ್ರೋಲ್ ಕಾರಿನ ಕೀಗಳು, ಸಿಗರೇಟ್ ಲೈಟರ್, ಬ್ರಿಫ್ಕೆಸ್, ಹ್ಯಾಂಡ್ ಬಾಗ್ಸ್, ಕ್ಯಾಮೆರಾ, ಬೈನಾಕ್ಯೂಲರ್, ಛತ್ರಿಗಳು ಸೇರಿದಂತೆ ಇದೇ ರೀತಿಯ ವಸ್ತುಗಳನ್ನು ಕೆಂಪುಕೋಟೆಯ ಆವರಣದಲ್ಲಿ ನಿಷೇಧಿಸಲಾಗಿದೆ.
ದೆಹಲಿಯಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್ ಆಯುಕ್ತ ದೀಪೇಂದ್ರ ಪಾತಕ್ ಹೇಳಿದ್ದು ಆಗಸ್ಯ್ 13ರಿಂದ 15ರವರೆಗೆ ಗಾಳಿಪಟ, ಬಲೂನ್ ಅಥವಾ ಚೀನಾದ ಲ್ಯಾಂಟರ್ನ್ಗಳನ್ನು ಹಾರಿಸುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ.