ರಾಜಸ್ಥಾನ: ಶಿಕ್ಷಕರಿಗೆ ಇಟ್ಟಿದ್ದ ನೀರು ಕುಡಿದಿದ್ದಕ್ಕೆ ಥಳಿತ; ದಲಿತ ಬಾಲಕ ಸಾವು!

ಶಿಕ್ಷಕರಿಗಾಗಿ ಇಟ್ಟಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕೆ ಶಾಲಾ ಶಿಕ್ಷಕರು ಥಳಿಸಿದ ಕಾರಣ ರಾಜಸ್ಥಾನದಲ್ಲಿ ದಲಿತ ಸಮುದಾಯದ ಒಂಬತ್ತು ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಜೈಪುರ: ಶಿಕ್ಷಕರಿಗಾಗಿ ಇಟ್ಟಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕೆ ಶಾಲಾ ಶಿಕ್ಷಕರು ಥಳಿಸಿದ ಕಾರಣ ರಾಜಸ್ಥಾನದಲ್ಲಿ ದಲಿತ ಸಮುದಾಯದ ಒಂಬತ್ತು ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ. ಸದ್ಯ ಶಿಕ್ಷಕನನ್ನು ಬಂಧಿಸಲಾಗಿದ್ದು, ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಲೋರ್ ಜಿಲ್ಲೆಯ ಸೈಲಾ ಗ್ರಾಮದ ಖಾಸಗಿ ಶಾಲೆಯಲ್ಲಿ ಜುಲೈ 20 ರಂದು ಈ ಘಟನೆ ನಡೆದಿದೆ. ಹಲ್ಲೆಯಿಂದಾಗಿ ಕಣ್ಣು ಮತ್ತು ಕಿವಿಗೆ ಗಾಯವಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಸುಮಾರು 300 ಕಿಮೀ ದೂರದ ಅಹಮದಾಬಾದ್‌ಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರಕರಣದ ತ್ವರಿತ ತನಿಖೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ನ್ಯಾಯ ದೊರಕಿಸಿಕೊಡಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕುಟುಂಬಕ್ಕೆ ₹ 5 ಲಕ್ಷ ನೆರವು ನೀಡಲಾಗುವುದು’ ಎಂದು ಟ್ವೀಟ್ ಮಾಡಿದ್ದಾರೆ.

ಸಂತ್ರಸ್ತನ ಮರಣೋತ್ತರ ಪರೀಕ್ಷೆಗಾಗಿ ಪೊಲೀಸ್ ತಂಡವನ್ನು ಅಹಮದಾಬಾದ್‌ಗೆ ಕಳುಹಿಸಲಾಗಿದೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕುಡಿಯುವ ನೀರಿನ ಪಾತ್ರೆಯನ್ನು ಮುಟ್ಟಿದ್ದಕ್ಕಾಗಿ ಬಾಲಕನನ್ನು ಕೆಟ್ಟದಾಗಿ ಥಳಿಸಲಾಗಿದೆ ಎಂದು ಬಾಲಕನ ಕುಟುಂಬದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

'ಪಾತ್ರೆಯಲ್ಲಿಟ್ಟಿದ್ದ ನೀರು ಕುಡಿದಿದ್ದಕ್ಕಾಗಿ ನನ್ನ ಮಗನನ್ನು ಶಿಕ್ಷಕ ಚಾಲಿ ಸಿಂಗ್ ಥಳಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾನೆ. ಬಾಲಕನಿಗೆ ತೀವ್ರ ರಕ್ತಸ್ರಾವವಾಯಿತು. ಆತನನ್ನು ನಾನು ಉದಯಪುರಕ್ಕೆ ಚಿಕಿತ್ಸೆಗಾಗಿ ಕರೆದೊಯ್ದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟನು' ಎಂದು ಬಾಲಕನ ತಂದೆ ದೇವರಾಮ್ ಮೇಘವಾಲ್ ಹೇಳಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆಯು ಈ ವಿಚಾರದ ಕುರಿತು ತನಿಖೆ ಪ್ರಾರಂಭಿಸಿದೆ. ರಾಜಸ್ಥಾನ ಎಸ್‌ಸಿ ಆಯೋಗದ ಅಧ್ಯಕ್ಷ ಖಿಲಾಡಿ ಲಾಲ್ ಬೈರ್ವಾ ಅವರು ತ್ವರಿತ ತನಿಖೆಗಾಗಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com