ವಿಮಾನವಾಹಕ ನೌಕೆಗಳ ವಿಚಾರದಲ್ಲಿ ಭಾರತೀಯ ನೌಕಾಪಡೆ ಮುಂದಿದೆ ಕ್ಲಿಷ್ಟ ಪ್ರಶ್ನೆ!

ನೌಕಾಪಡೆ ಈಗಾಗಲೇ ಅವಳಿ ಇಂಜಿನ್‌ಗಳನ್ನು ಹೊಂದಿರುವ ವಿಮಾನವಾಹಕ ನೌಕೆಗಳಿಂದ ಕಾರ್ಯ ನಿರ್ವಹಿಸಬಲ್ಲ ವಿಮಾನಗಳಿಗಾಗಿ ಟೆಂಡರ್‌ಗೆ ಕರೆ ನೀಡಿದ್ದು, ಕೊನೆಗೂ ಡಸಾಲ್ಟ್ ಏವಿಯೇಷನ್‌ ಸಂಸ್ಥೆಯ ರಫೇಲ್ ಎಂ ಹಾಗೂ ಬೋಯಿಂಗ್ ಸಂಸ್ಥೆಯ ಎಫ್/ಎ-18ಇ/ಎಫ್ ಬ್ಲಾಕ್ III ವಿಮಾನಗಳನ್ನು ಆಯ್ಕೆ ಮಾಡಿಕೊಂಡಿತು.
ಎಫ್ಎ-18 ಸೂಪರ್ ಹಾರ್ನೆಟ್
ಎಫ್ಎ-18 ಸೂಪರ್ ಹಾರ್ನೆಟ್

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ನೌಕಾಪಡೆ ಇನ್ನು ಕೆಲ ಸಮಯದಲ್ಲಿ ತನ್ನ ನೂತನ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ಅನ್ನು ಪಡೆದುಕೊಳ್ಳಲಿದೆ. ಈ ನೌಕೆಯು ಭಾರತದ ಶಕ್ತಿಯನ್ನು ತನ್ನ ತೀರಗಳಿಂದಾಚೆಗೂ ತೋರಿಸಲು ಸಮರ್ಥವಾಗಿದೆ. ಐಎನ್‌ಎಸ್ ವಿಕ್ರಾಂತ್ ಸೇವೆಗೆ ಸೇರ್ಪಡೆಗೊಂಡರೆ ಭಾರತದ ಬಳಿ ಐಎನ್‌ಎಸ್ ವಿಕ್ರಮಾದಿತ್ಯ ಸೇರಿದಂತೆ ಎರಡು ತೇಲುವ ಏರ್‌ಫೀಲ್ಡ್‌ಗಳಿರಲಿವೆ. ಆದರೆ ಭಾರತೀಯ ನೌಕಾಪಡೆ ವಿಮಾನಗಳ ಕೊರತೆ ಎದುರಿಸುತ್ತಿದೆ. ಇದು ಒಂದು ರೀತಿ ಚಾಕೋಲೇಟ್ ಇಲ್ಲದಿರುವ ಚಾಕೋಲೇಟ್ ಬಿಸ್ಕೆಟ್‌ನಂತೆ ಭಾಸವಾಗುತ್ತದೆ.

ಭಾರತೀಯ ನೌಕಾಪಡೆ ಮಿಗ್-29ಕೆ ವಿಮಾನಗಳನ್ನು ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯ ಮೂಲಕ ಕಾರ್ಯ ನಿರ್ವಹಿಸುತ್ತದೆ. ಐಎನ್‌ಎಸ್ ವಿಕ್ರಾಂತ್ ನೌಕೆಯನ್ನೂ ಈ ವಿಮಾನಗಳ ಕಾರ್ಯ ನಿರ್ವಹಣೆಗೆ ತಕ್ಕಂತೆಯೇ ನಿರ್ಮಿಸಿದೆ. ಮಿಗ್-29ಕೆಗೆ ಸೂಕ್ತವಾಗುವಂತಹ ಡೆಕ್ ನಿರ್ಮಿಸುವ ಸಂದರ್ಭದಲ್ಲಿ ರಷ್ಯನ್ನರನ್ನೂ ಸಂಪರ್ಕಿಸಿತ್ತು. ಆದರೆ ನೌಕಾಪಡೆ ತನಗಿನ್ನೂ ಈ ವಿಮಾನಗಳು ಬೇಕೇ ಎಂಬ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೆ ನೌಕಾಪಡೆ ಇನ್ನೂ ಮಿಗ್-29ಕೆಯ ಸಮಸ್ಯೆಗಳ ಕುರಿತೂ ಮಾತನಾಡುತ್ತಿಲ್ಲ. ಸಾಮಾನ್ಯವಾಗಿ ಮಿಗ್-29ಕೆ ನಿರ್ವಹಣಾ ತೊಂದರೆಗಳನ್ನು ಎದುರಿಸುತ್ತದೆ ಎನ್ನುವುದು ತಿಳಿದಿರುವ ವಿಚಾರವಾಗಿದೆ.

ನೌಕಾಪಡೆ ಈಗಾಗಲೇ ಅವಳಿ ಇಂಜಿನ್‌ಗಳನ್ನು ಹೊಂದಿರುವ ವಿಮಾನವಾಹಕ ನೌಕೆಗಳಿಂದ ಕಾರ್ಯ ನಿರ್ವಹಿಸಬಲ್ಲ ವಿಮಾನಗಳಿಗಾಗಿ ಟೆಂಡರ್‌ಗೆ ಕರೆ ನೀಡಿದ್ದು, ಕೊನೆಗೂ ಡಸಾಲ್ಟ್ ಏವಿಯೇಷನ್‌ ಸಂಸ್ಥೆಯ ರಫೇಲ್ ಎಂ ಹಾಗೂ ಬೋಯಿಂಗ್ ಸಂಸ್ಥೆಯ ಎಫ್/ಎ-18ಇ/ಎಫ್ ಬ್ಲಾಕ್ III ವಿಮಾನಗಳನ್ನು ಆಯ್ಕೆ ಮಾಡಿಕೊಂಡಿತು. ಈಗ ಇದು ಎರಡು ಕುದುರೆಗಳ ಮಧ್ಯದ ಓಟವಾಗಿದ್ದು, ಭಾರತ ಫ್ರೆಂಚ್ ಮತ್ತು ಅಮೆರಿಕನ್ ಆಯ್ಕೆಗಳಲ್ಲಿ ಯಾವುದನ್ನು ಆರಿಸುತ್ತದೆ ಎಂಬುದಷ್ಟೇ ಉಳಿದಿರುವ ಪ್ರಶ್ನೆಯಾಗಿದೆ.

ಈ ಎರಡೂ ಯುದ್ಧ ವಿಮಾನಗಳೂ ಗೋವಾದ ನೌಕಾನೆಲೆಯಿಂದ ಪರೀಕ್ಷೆಗೊಳಪಟ್ಟಿದ್ದು, ಅವುಗಳ ಮೂಲಕ ಸ್ಕೈ ಜಂಪ್ ಆಯೋಜಿಸಲಾಗಿತ್ತು.

ಅಂತಿಮವಾಗಿ ವಿಮಾನಗಳ ಖರೀದಿಯ ಸಂಖ್ಯೆ ಮೊದಲು ಯೋಚಿಸಿದ್ದ 57 ರಿಂದ 26 ವಿಮಾನಗಳಿಗೆ ಇಳಿದಿರುವುದು ಅನಿಶ್ಚಿತತೆಗೆ ಕಾರಣವಾಗಿದೆ. ನಿರ್ಧಾರ ಕೈಗೊಳ್ಳುವವರ ಸಂದಿಗ್ದತೆಗೆ ಈ ಎರಡು ವಿಮಾನಗಳ ಬೆಲೆಯ ವ್ಯತ್ಯಾಸ, ಅಭಿವೃದ್ಧಿ, ಆಯುಧಗಳು, ನಿರ್ವಹಣಾ ವೆಚ್ಚ, ಸರಿ ಹೊಂದುವ ಕಾರ್ಯಗಳು ಮತ್ತು ವ್ಯವಸ್ಥೆಗಳು, ಭಾರತೀಯ ನೌಕಾಪಡೆಯ ಪ್ರಸ್ತುತ ಮೂಲಭೂತ ಸೌಕರ್ಯಗಳ ಜೊತೆ ಇರುವ ಸಾಮಾನ್ಯ ಹೊಂದಿಕೆಗಳೂ ಕಾರಣವಾಗಿವೆ.

ಆದ್ದರಿಂದ ಭಾರತೀಯ ನೌಕಾಪಡೆಯ ಎರಡೂ ವಿಮಾನವಾಹಕ ನೌಕೆಗಳಿಗೆ ಅಗತ್ಯವಿರುವಷ್ಟು ಯುದ್ಧ ವಿಮಾನಗಳು ಲಭ್ಯವಾಗುವುದಿಲ್ಲ. ಭಾರತೀಯ ನಿರ್ಮಾಣದ ಮುಂದಿನ ವಿಮಾನವಾಹಕ ನೌಕೆ ನೌಕಾಪಡೆಗೆ 2037-40ರಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ‌ ಎನ್ನಲಾಗುತ್ತದೆ.

ಅದರೊಡನೆ ನೌಕಾಪಡೆಯ ಮುಂದೆ ಮೂರನೇ ಆಯ್ಕೆಯೂ ಇದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಗಳು ಜಂಟಿಯಾಗಿ ಭಾರತೀಯ ನೌಕಾಪಡೆಗಾಗಿ ಒಂದು ಟ್ವಿನ್-ಇಂಜಿನ್ ಡೆಕ್ ಬೇಸ್ಡ್ ಫೈಟರ್ (ಟಿಇಡಿಬಿಎಫ್) ವಿಮಾನವನ್ನು ನಿರ್ಮಿಸುತ್ತಿದೆ. ಇದು ಪ್ರಸ್ತುತ ನೌಕಾಪಡೆಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ 40 ಮಿಗ್-29ಕೆ ಯುದ್ಧ ವಿಮಾನಗಳ ಬದಲಿಗೆ ಸೇರ್ಪಡೆಯಾಗಲಿವೆ. ಆದರೆ ದುರದೃಷ್ಟವಶಾತ್ ಈ ವಿಮಾನಗಳ ಸೇರ್ಪಡೆ ಇನ್ನೂ ಒಂದು ದಶಕದ ನಂತರವಷ್ಟೇ ಕೈಗೂಡಲಿದೆ.

ರಫೇಲ್-ಎಂ ವರ್ಸಸ್ ಎಫ್ಎ-18 ಸೂಪರ್ ಹಾರ್ನೆಟ್

ರಫೇಲ್ ಮತ್ತು ಸೂಪರ್ ಹಾರ್ನೇಟ್‌ಗಳು ತಮ್ಮ ಎಇಎಸ್ಎ ರೇಡಾರ್‌ಗಳು, ಮಾಡ್ಯುಲರ್ ವಿನ್ಯಾಸಗಳು, ಡೇಟಾ ಲಿಂಕ್ ಹಾಗೂ ಪೇಲೋಡ್ ವಿಚಾರಗಳಲ್ಲಿ ಒಂದನ್ನೊಂದು ಹೋಲುತ್ತವೆ. ಆದರೆ ಅವುಗಳ ರೆಕ್ಕೆಯ ಗಾತ್ರವೂ ಮುಖ್ಯವಾಗುತ್ತದೆ. ರಫೇಲ್‌ನ ರೆಕ್ಕೆಗಳು ಮುಚ್ಚಲ್ಪಡದಿರುವ ಕಾರಣ, ಸಣ್ಣ ಗಾತ್ರದ ವಿಮಾನವಾಹಕ ನೌಕೆಯಾದ ವಿಕ್ರಾಂತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳು ಹಿಡಿಸಲು ಸಾಧ್ಯವಿಲ್ಲ. ಆದರೆ ಎಫ್/ಎ-18ರ ರೆಕ್ಕೆಗಳು ಮುಚ್ಚಲ್ಪಡುವ ಕಾರಣ ಅದರಲ್ಲಿ ಈ ಸಮಸ್ಯೆ ಕಾಡುವುದಿಲ್ಲ.

ಭಾರತೀಯ ವಿಮಾನವಾಹಕಗಳ ಇಲವೇಟರ್‌ಗಳು ಸಣ್ಣವಾಗಿದ್ದು, ಕೇವಲ ಎಫ್ಎ-18 ಬ್ಲಾಕ್ III ಮಾತ್ರ ಸರಿಹೊಂದುತ್ತವೆ. ವರದಿಗಳ ಪ್ರಕಾರ, ರಫೇಲ್ ವಿಮಾನ ಒಂದಕ್ಕೆ ನೂರು ಮಿಲಿಯನ್ ಡಾಲರ್ ಮೊತ್ತ ತಗುಲಿದರೆ, ಸೂಪರ್ ಹಾರ್ನೆಟ್‌ಗೆ 66 ಮಿಲಿಯನ್ ಡಾಲರ್ ಬೆಲೆ ಆಗುತ್ತದೆ. ಈ ಮೊತ್ತ ಕೇವಲ ವಿಮಾನಗಳದ್ದೇ ಹೊರತು ಆಯುಧಗಳು ಮತ್ತು ಬಿಡಿಭಾಗಗಳನ್ನು ಒಳಗೊಂಡಿಲ್ಲ.

ಆದರೆ ನೌಕಾಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಒಂದು ವೇಳೆ ಒಂದು ಸ್ಕ್ವಾಡ್ರನ್ ವಿಮಾನಗಳನ್ನು ತುರ್ತಿನಲ್ಲಿ ಖರೀದಿಸುವುದಾದರೆ, ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಸೇನೆಯ ಬಳಕೆಯಲ್ಲಿರುವುದರಿಂದ, ಅದೇ ಆಯ್ಕೆಯಾಗುವ ಸಾಧ್ಯತೆಗಳಿವೆ.

ಹಾಗೆಂದು ವಿಮಾನಗಳ ಖರೀದಿಯಲ್ಲಿ ಎರಡನ್ನೂ ಇರಲಿ ಎಂದು ಖರೀದಿಸಲು ಸಾಧ್ಯವಿಲ್ಲ. ಕೆಲವು ಜನರ ಪ್ರಕಾರ, ಭಾರತೀಯ ನೌಕಾಪಡೆ ಮತ್ತು ವಾಯುಪಡೆಗಳ ಅಗತ್ಯವನ್ನು ಒಂದೇ ಟೆಂಡರ್ ಮೂಲಕ ಪೂರೈಸಲು ಸಾಧ್ಯವಾಗಬೇಕು. ಈಗಾಗಲೇ ರಫೇಲ್ ವಿಮಾನಗಳಿಗೆ ಬೇಕಾದ ತರಬೇತಿ, ನಿರ್ವಹಣೆ ಹಾಗೂ ಸಿಮ್ಯುಲೇಟರ್‌‌ಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಎಫ್ಎ-18 ಸೂಪರ್ ಹಾರ್ನೆಟ್ ಹಿನ್ನಡೆ ಎದುರಿಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಮೂಡುತ್ತಿರುವ ಪ್ರಮುಖ ಪ್ರಶ್ನೆ ಎಂದರೆ ಭಾರತೀಯ ನೌಕಾಪಡೆ ವಿಮಾನಗಳಲ್ಲಿನ ಸಾಮಾನ್ಯತೆಯನ್ನು ಮಾನದಂಡವಾಗಿ ಪರಿಗಣಿಸಬೇಕಾ ಅಥವಾ ವಿಮಾನವಾಹಕ ನೌಕೆಯಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ ಎಂಬುದನ್ನು ಪರಿಗಣಿಸಬೇಕಾ ಎಂಬುದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಎಫ್ಎ-18 ಸೂಪರ್ ಹಾರ್ನೆಟ್ ಅತಿ ಹೆಚ್ಚು ಉಪಯೋಗಿಸಲ್ಪಡುತ್ತಿರುವ ವಿಮಾನವಾಹಕ ನೌಕೆ ಆಧಾರಿತ ಯುದ್ಧ ವಿಮಾನವಾಗಿದೆ. ರಫೇಲ್ ಎಂ ವಿಮಾನಗಳು ಕಡಿಮೆ ಸಂಖ್ಯೆಯಲ್ಲಿ ಬಳಕೆಯಾಗುತ್ತಿದ್ದು, ತನ್ನ ಅಮೆರಿಕಾದ ಪ್ರತಿಸ್ಪರ್ಧಿಯಷ್ಟು ವ್ಯಾಪಕವಾಗಿ ಬಳಸಲ್ಪಡುತ್ತಿಲ್ಲ.

ರಫೇಲ್-ಎಂ ಹೊಂದಿರುವ ಇನ್ನೊಂದು ಅನುಕೂಲತೆ ಎಂದರೆ ಫ್ರಾನ್ಸ್ ತನ್ನ ಚಾರ್ಲ್ಸ್ ಡಿ ಗೌಲ್ ವಿಮಾನವಾಹಕ ನೌಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ರಫೇಲ್ ವಿಮಾನಗಳನ್ನು ಭಾರತಕ್ಕೆ ಒದಗಿಸಲು ಸಿದ್ಧವಾಗಿದೆ. ಇದು ಭಾರತೀಯ ನೌಕಾಪಡೆಗೆ ತನ್ನ ಪೈಲಟ್‌ಗಳಿಗೆ ತರಬೇತಿ ನೀಡಿ, ಐಎನ್‌ಎಸ್ ವಿಕ್ರಾಂತ್ ನೌಕೆಯ ಮೇಲೆ ಅಭ್ಯಾಸ ನಡೆಸಲು ನೆರವಾಗುತ್ತದೆ. ಆದರೆ ಬೋಯಿಂಗ್ ಇನ್ನೂ ತಾನು ಯಾವಾಗ ವಿಮಾನ ಒದಗಿಸಬಹುದು ಎಂಬ ಕುರಿತು ಮಾಹಿನಿ ನೀಡಿಲ್ಲ.

ಟಿಇಡಿಬಿಎಫ್ ಅಂಶ

ಈ ಲೇಖನದಲ್ಲಿ ಈಗಾಗಲೇ ಉಲ್ಲೇಖಿಸಿದಂತೆ ಟಿಇಡಿಬಿಎಫ್ ಯುದ್ಧ ವಿಮಾನ ಇನ್ನೊಂದು ದಶಕದ ಅವಧಿಯಲ್ಲಿ ಬರುವ ಸಾಧ್ಯತೆಗಳಿವೆ. ಆ ಸಮಯದಲ್ಲಿ ಮಿಗ್-29ಕೆ ನಿವೃತ್ತಿಗೆ ಸಜ್ಜಾಗಿರಲಿದೆ. ಅಂದರೆ, ಭಾರತೀಯ ನೌಕಾಪಡೆ ಮುಂದಿನ ಹಂತದಲ್ಲಿ ಬೇಕಾಗುವ ಪಶ್ಚಿಮದ ವಿಮಾನಗಳಿಗೆ ಹೆಚ್ಚಿನ ಖರೀದಿ ಆದೇಶ ನೀಡಬೇಕಾಗುತ್ತದೆ. ಆದರೆ ನೂತನ ಯುದ್ಧ ವಿಮಾನಗಳಿಗೆ ಹೆಚ್ಚಿನ ಆಯುಷ್ಯ ಇರುವುದರಿಂದ ಅದು ಟಿಇಡಿಬಿಎಫ್ ಖರೀದಿಯನ್ನು ಕಡಿಮೆಗೊಳಿಸುತ್ತದೆ. ಆದರೆ ಟಿಇಡಿಬಿಎಫ್ ಚಾಲ್ತಿಗೆ ಬರುವ ಸಮಯದಲ್ಲಿ ಅದು ಮೂರೂ ವಿಮಾನವಾಹಕ ನೌಕೆಗಳಲ್ಲೂ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ. ಆದ್ದರಿಂದ ಭಾರತ ಟಿಇಡಿಬಿಎಫ್ ಚಾಲ್ತಿಗೆ ಬರುವ ಸಂದರ್ಭದಲ್ಲಿ ನಿವೃತ್ತಿ ಹೊಂದಬಹುದಾದ ವಿಮಾನಗಳ ಏರ್‌ಫ್ರೇಮ್‌ಗಳನ್ನು ಖರೀದಿಸುವುದು ಸೂಕ್ತ ನಿರ್ಧಾರ ಎನಿಸಲಿದೆ. ಆದರೆ ಫ್ರಾನ್ಸ್ ತನ್ನ ಸಂಪೂರ್ಣ ರಫೇಲ್-ಎಂ ಪಡೆಯನ್ನು ತಕ್ಷಣವೇ ಹಸ್ತಾಂತರಿಸುವುದು ಸಾಧ್ಯವಿಲ್ಲದ ವಿಚಾರ. ಆದರೆ ಭಾರತೀಯ ನೌಕಾಪಡೆ ಬೋಯಿಂಗ್ ಸಂಸ್ಥೆಯೊಡನೆ ಮಾತುಕತೆ ನಡೆಸಿ, ಹಳೆಯದಾದ ಅಮೆರಿಕಾದ ನೌಕಾಪಡೆಯ ಎಫ್-18ಎಸ್ ಖರೀದಿಸುವ, ಮರುಬಳಕೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಬಹುದು.

ಪ್ರಸ್ತುತ ಲಭ್ಯವಿರುವ ಆಯ್ಕೆ

ಆಸಕ್ತಿಕರ ವಿಚಾರವೆಂದರೆ, ಭಾರತೀಯ ನೌಕಾಪಡೆ ಕೊಚ್ಚಿಯ ಶಿಪ್ ಯಾರ್ಡ್‌ನಿಂದ ಐಎನ್‌ಎಸ್ ವಿಕ್ರಾಂತನ್ನು ಪಡೆದುಕೊಳ್ಳುವ ಕುರಿತಾಗಿ ಹಂಚಿಕೊಂಡ ಪತ್ರಿಕಾ ಹೇಳಿಕೆಯಲ್ಲಿ ವಿಕ್ರಾಂತ್ ಮಿಗ್-29ಕೆ ವಿಮಾನಗಳನ್ನು ಬಳಸಲಿದೆ ಎಂಬುದಾಗಿ ಹೇಳಿದ್ದು, ಅದರಲ್ಲಿ ಬೇರೆ ಯಾವ ಆಯ್ಕೆಯ ಕುರಿತೂ ಪ್ರಸ್ತಾಪಿಸಲಾಗಿಲ್ಲ. ಅಂದರೆ, ಈ‌ ಹೇಳಿಕೆಯ ಪ್ರಕಾರ ಎರಡು ವಿಮಾನವಾಹಕ ನೌಕೆಗಳೂ ಪ್ರಸ್ತುತ ಲಭ್ಯವಿರುವ ಕಡಿಮೆ ಸಂಖ್ಯೆಯ ಮಿಗ್-29ಕೆ ವಿಮಾನಗಳನ್ನೇ ಬಳಸಲಿವೆ. ಶಾಂತಿಯ ಸಮಯದಲ್ಲಿ ವಿಮಾನವಾಹಕ ನೌಕೆಗಳು ವಿಮಾನಗಳಿಂದ ತುಂಬಿರಬೇಕಾಗಿಲ್ಲವಾದ್ದರಿಂದ ಯಾವ ತೊಂದರೆಯೂ ಎದುರಾಗದಿರಬಹುದು. ಇದು ಎರಡು ಸಂದರ್ಭಗಳಲ್ಲಿ ಮಾತ್ರ ಸಮಸ್ಯೆ ಉಂಟುಮಾಡಬಹುದಾಗಿದ್ದು, ಒಂದು ಪೈಲಟ್‌ಗೆ ಹೆಚ್ಚಿನ ಹಾರಾಟದ ಅವಧಿ ಸಿಗದಿರುವುದು ಮತ್ತು ಎರಡನೆಯದಾಗಿ, ತುರ್ತು ಪರಿಸ್ಥಿತಿ ಎದುರಾದಾಗ ವಿಮಾನಗಳ ಪೂರ್ತಿ ತಂಡ ಸೇವೆಗೆ ಲಭ್ಯವಾಗದಿರಬಹುದು.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com