social_icon

ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ; ಹೆಚ್ಚಾಗಿದೆ ಮೂರನೇ ವಿಮಾನ ವಾಹಕದ ಅಗತ್ಯ

ಸ್ವಾತಂತ್ರ್ಯ ಲಭಿಸಿದ ದಿನದಿಂದಲೂ, ಭಾರತೀಯ ನೌಕಾಪಡೆ ಎರಡು ವಿಮಾನವಾಹಕ ನೌಕೆಗಳು ಕಾರ್ಯಾಚರಿಸುವಂತೆ ಮತ್ತು ಒಂದು ವಿಮಾನವಾಹಕ ನೌಕೆ ಡ್ರೈಡಾಕ್‌ನಲ್ಲಿ ಇರುವಂತೆ ಅಂದಾಜಿಸಿತ್ತು. ಆದರೆ ಈ ಗುರಿ ಇಂದಿನವರೆಗೂ ಸಾಧಿಸಲಾಗಿಲ್ಲ.

Published: 02nd August 2022 03:26 PM  |   Last Updated: 02nd August 2022 07:50 PM   |  A+A-


INS Vikramaditya

ಐಎನ್‌ಎಸ್ ವಿಕ್ರಮಾದಿತ್ಯ

Posted By : prasad
Source : The New Indian Express

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ಸಂಪೂರ್ಣ ದೇಶೀಯವಾಗಿ ನಿರ್ಮಿಸಿದ ಪ್ರಥಮ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸೇವಾ ಸೇರ್ಪಡೆಗೆ ಮೊದಲೇ, ಭಾರತದ ಇನ್ನೊಂದು ವಿಮಾನ ವಾಹಕ ನೌಕೆಯಾದ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪ್ರಸ್ತುತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತಳಮಳಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಭಾರತ ತನ್ನ ವಿಮಾನವಾಹಕ ನೌಕೆಗಳನ್ನು ಶಿಪ್ ಯಾರ್ಡ್‌ಗಳಲ್ಲಿ ನಿಲ್ಲಿಸಿ ಸುಮ್ಮನಿರಲು ಸಾಧ್ಯವಿಲ್ಲ.

ಅಗ್ನಿ ಅವಘಡಗಳು:

ಪ್ರಸ್ತುತ ಅಗ್ನಿ ಅವಘಡದಿಂದ ಆಗಿರುವ ಹಾನಿಯ ಕುರಿತು ಇನ್ನೂ ಅಂದಾಜಿಸಲಾಗಿಲ್ಲ. ಆದರೆ ಈ ಅಗ್ನಿ ದುರಂತ ಸಣ್ಣ ಪ್ರಮಾಣದ್ದೆಂದು ಹೇಳಲಾಗಿದ್ದು, ಅದನ್ನು ಕ್ಷಿಪ್ರವಾಗಿ ಆರಿಸಲಾಯಿತು. ಅಧಿಕಾರಿಗಳ ಪ್ರಕಾರ, ವಿಮಾನವಾಹಕ ನೌಕೆ ಕರ್ನಾಟಕದ ಕಾರವಾರ ನೌಕಾನೆಲೆಯಿಂದ ಕಾರ್ಯಾಚರಿಸುತ್ತಿದ್ದ ಸಂದರ್ಭದಲ್ಲಿ ಅಗ್ನಿ ದುರಂತ ಸಂಭವಿಸಿದೆ.

ಆದರೆ ಭಾರತೀಯ ನೌಕಾಪಡೆಯ ಕಾರ್ಯಾಚರಣೆಗೆ ತೊಂದರೆಯಾಗುವ ರೀತಿ ಸಂಭವಿಸಿದ ಮೂರನೇ ಅಗ್ನಿ ದುರಂತ ಇದಾಗಿದೆ. 2019ರ ಏಪ್ರಿಲ್ ತಿಂಗಳಲ್ಲಿ ನೌಕೆಯ ಬಾಯ್ಲರ್ ರೂಮಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೌಕಾಪಡೆಯ ಅಧಿಕಾರಿ ಒಬ್ಬರು ಸುಟ್ಟ ಗಾಯಗಳು ಮತ್ತು ಹೊಗೆಯ ಕಾರಣದಿಂದ ಮೃತಪಟ್ಟು, ಹಲವರು ಗಾಯಗೊಂಡಿದ್ದರು. 2021ರ ಮೇ ತಿಂಗಳಲ್ಲಿ ನೌಕೆಯನ್ನು ಮರುಜೋಡಣೆ ಮಾಡುವ ಸಂದರ್ಭದಲ್ಲಿ ನೌಕೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತು.

ಭಾರತೀಯ ನೌಕಾಪಡೆಯ ನೌಕೆಗಳಲ್ಲಿ ಅಗ್ನಿದುರಂತಗಳು ಹೊಸದಲ್ಲ!

2008ನೇ ಇಸವಿಯಲ್ಲಿ ಯುಎಸ್‌ಎಸ್ ಜಾರ್ಜ್ ವಾಷಿಂಗ್ಟನ್ (ಸಿವಿಎನ್-73) ವಿಮಾನವಾಹಕ ನೌಕೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಹಲವು ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ನೇವಲ್ ಸೀ ಸಿಸ್ಟಮ್ ಕಮಾಂಡ್ ಪ್ರಕಾರ, 2008ರ ಬಳಿಕ, 2021ರ ವೇಳೆಗೆ ಯುಎಸ್ ನೌಕಾಪಡೆ 15 ಪ್ರಮುಖ ಅಗ್ನಿ ಆಕಸ್ಮಿಕಗಳನ್ನು ವರದಿ ಮಾಡಿತ್ತು. ಇದರ ದುರಸ್ತಿ ಮತ್ತು ಬದಲಾವಣೆಗಳಿಗಾಗಿ 6 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೊತ್ತವನ್ನು ಅಮೆರಿಕಾ ಖರ್ಚು ಮಾಡಿತ್ತು. ಅವುಗಳಲ್ಲಿ ಮೂರು ಘಟನೆಗಳಲ್ಲಿ ಬಾನ್‌ಹೋಮ್ ರಿಚರ್ಡ್ ಹಡಗು 2020ರಲ್ಲಿ, ಉಭಯಚರಿ ದಾಳಿ ನೌಕೆ ಯುಎಸ್‌ಎಸ್ ಐಡಬ್ಲ್ಯುಓ ಜಿಮಾ (ಎಲ್‌ಎಚ್‌ಡಿ - 7) 2019ರಲ್ಲಿ ಹಾಗೂ ಅಟ್ಯಾಕ್ ಸಬ್‌ಮರೀನ್ ಯುಎಸ್‌ಎಸ್ ಮಿಯಾಮಿ (ಎಸ್ಎಸ್ಎನ್ - 775) 2012ರಲ್ಲಿ ಅಗ್ನಿ ದುರಂತಕ್ಕೊಳಗಾಗಿದ್ದವು.

ಏಪ್ರಿಲ್ 2020ರಲ್ಲಿ ಚೀನಾದ ಪ್ರಥಮ ಟೈಪ್ 075 ಲ್ಯಾಂಡಿಂಗ್ ಹೆಲಿಕಾಪ್ಟರ್ ಡಾಕ್‌ಗೆ (ಎಲ್‌ಎಚ್‌ಡಿ) ಅಗ್ನಿಸ್ಪರ್ಶವಾಗಿತ್ತು. ಅದೊಂದು ಪ್ರಮುಖ ಅಗ್ನಿ ಆಕಸ್ಮಿಕವಾಗಿತ್ತು. ತನ್ನ ಯುದ್ಧ ನೌಕೆಗಳಲ್ಲಿನ ಸಣ್ಣ ಪುಟ್ಟ ಅಗ್ನಿ ಆಕಸ್ಮಿಕಗಳನ್ನು ಚೀನಾ ವರದಿ ಮಾಡದೆ ಮುಚ್ಚಿಡುತ್ತದೆ.

ಇದನ್ನೂ ಓದಿ: ಡಿಆರ್‌ಡಿಓ ಮತ್ತು ಫ್ರಾನ್ಸ್ ನ ಸಾಫ್ರನ್ ಸಹಯೋಗದಲ್ಲಿ ಎಎಂಸಿಎ ವಿಮಾನದ ಇಂಜಿನ್ ನಿರ್ಮಾಣ?

2021ರಲ್ಲಿ ರಷ್ಯಾದ ನೌಕಾಪಡೆಗಾಗಿ ನಿರ್ಮಾಣಗೊಳ್ಳುತ್ತಿದ್ದ ಪ್ರೊವೋರ್ನಿ ಕಾರ್ವೆಟ್ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡು, ಅದು 800 ಚದರ ಮೀಟರ್‌ಗೆ ವ್ಯಾಪಿಸಿತ್ತು. ಅದರ ಪರಿಣಾಮವಾಗಿ ನೌಕೆಯ ವೀಲ್‌ಹೌಸ್ ಮತ್ತು ಟವರ್ ಮಾಸ್ಟ್ ವಿನ್ಯಾಸ ಪೂರ್ಣವಾಗಿ ನಾಶವಾಗಿತ್ತು.

ಭಾರತೀಯ ನೌಕಾಪಡೆಯ ವಿಮಾನವಾಹಕಗಳ ನಿರ್ವಹಣೆ:

ಭಾರತೀಯ ನೌಕಾಪಡೆ ಈ ವಿಮಾನವಾಹಕ ನೌಕೆಯನ್ನು ಅರ್ಧ ದಶಕದ ಕಾಲ ಉಪಯೋಗಿಸಿದ್ದು, ನೌಕಾಪಡೆಗೆ ವಿಮಾನವಾಹಕ ನೌಕೆಯ ನಿರ್ವಹಣೆಯಲ್ಲಿ ವೃತ್ತಿಪರತೆಯ ಕೊರತೆ ಇದೆ ಎಂದು ಆರೋಪಿಸಲು ಸಾಧ್ಯವಿಲ್ಲ. ಹಳೆಯ ಐಎನ್‌ಎಸ್ ವಿಕ್ರಾಂತ್ ನೌಕೆಯಲ್ಲಿ ಉಂಟಾದ ಬಾಯ್ಲರ್ ಸ್ಫೋಟ ಅದರ ಕಾರ್ಯಾಚರಣೆಯನ್ನು ಪೂರ್ವ ತೀರಕ್ಕೆ ಮಾತ್ರ ಸೀಮಿತಗೊಳಿಸಿತ್ತು. ಆದರೂ ಅದು ಯುದ್ಧದ ಸಂದರ್ಭದಲ್ಲಿ ತನ್ನ ಕಾರ್ಯವನ್ನು ಯಾವ ಸಮಸ್ಯೆಯೂ ಎದುರಾಗದೆ, ಯಶಸ್ವಿಯಾಗಿ ನಿರ್ವಹಿಸಿತ್ತು.

ಐಎನ್‌ಎಸ್ ವಿಕ್ರಮಾದಿತ್ಯ ಇಂದಿಗೂ ಹೊಚ್ಚ ಹೊಸದರಂತಿರುವ ವಿಮಾನವಾಹಕ ನೌಕೆ:

ಸೋವಿಯತ್ ಯೂನಿಯನ್ನಿನ ಕೀವ್ ಕ್ಲಾಸ್ ಒಂದು ವಿಶಿಷ್ಟ ವಿನ್ಯಾಸದ ನೌಕೆಯಾಗಿದೆ. ಇದು ಮುಂಭಾದಲ್ಲಿ ಮೂರನೇ ಒಂದು ಭಾಗ ಹೆವಿ ಕ್ರೂಸರ್ ಆಗಿದ್ದು, ಇದರಲ್ಲಿ 12 ಬೃಹತ್ ಎಸ್‌ಎಸ್-ಎನ್-12 ಆ್ಯಂಟಿ ಶಿಪ್ ಕ್ಷಿಪಣಿಗಳು, 192 ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳು, ಹಾಗೂ ಎರಡು 100 ಮಿಲಿಮೀಟರ್ ಡೆಕ್ ಗನ್‌ಗಳನ್ನು ಹೊಂದಿದೆ. ಹಡಗಿನ ಇನ್ನುಳಿದ ಭಾಗ ವಿಮಾನವಾಹಕವಾಗಿದ್ದು, ಒಂದು ಹ್ಯಾಂಗರ್ ಮತ್ತು ಫ್ಲೈಟ್ ಡೆಕ್ ಒಳಗೊಂಡಿದೆ.

1991ರಲ್ಲಿ ಯುಎಸ್‌ಎಸ್ಆರ್ ವಿಭಜನೆಯ ಬಳಿಕ ರಷ್ಯಾ ಒಂದು ಕೀವ್ ಕ್ಲಾಸ್ ನೌಕೆಯನ್ನು ಪಡೆದು, ಅದನ್ನು ಅಡ್ಮಿರಲ್ ಗೋರ್ಷ್ಕೋವ್ ಎಂದು ಪುನಶ್ಚೇತನಗೊಳಿಸಿತು. ನಿರ್ವಹಣೆಯ ಕೊರತೆಯ ಪರಿಣಾಮವಾಗಿ ಅಡ್ಮಿರಲ್ ಗೋರ್ಷ್ಕೋವ್‌ನ ಬಾಯ್ಲರ್ ರೂಮ್ ಸ್ಫೋಟಗೊಂಡು, ಅದನ್ನು 1996ರಲ್ಲಿ ನಿವೃತ್ತಿಗೊಳಿಸಲಾಯಿತು. ಅದೇ ಸಮಯದಲ್ಲಿ ಭಾರತೀಯ ನೌಕಾಪಡೆಯ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿರಾಟ್ 2007ರಲ್ಲಿ ನಿವೃತ್ತಿಯಾಗಲಿತ್ತು. ನವದೆಹಲಿ ಅದಕ್ಕೆ ಬದಲಿ ವಿಮಾನವಾಹಕ ನೌಕೆಯ ಹುಡುಕಾಟದಲ್ಲಿತ್ತು.

ಇದನ್ನೂ ಓದಿ: ವಿರೋಧದ ಸುಳಿಗೆ ಸಿಲುಕಿರುವ 'ಅಗ್ನಿಪಥ್' ಯೋಜನೆಗೆ ವಿಶ್ವಾಸದ ಕೊರತೆ!

ಆ ಸಮಯದಲ್ಲಿ ವಿಮಾನವಾಹಕ ನೌಕೆಗಳನ್ನು ನಿರ್ಮಿಸುತ್ತಿದ್ದ ದೇಶಗಳ ಹಡಗುಗಳು ಭಾರತದ ಪಾಲಿಗೆ ಅತ್ಯಂತ ದುಬಾರಿಯಾಗಿದ್ದವು. 2004ರಲ್ಲಿ ಭಾರತ ಮತ್ತು ರಷ್ಯಾ ಮಧ್ಯೆ ಒಂದು ಒಪ್ಪಂದ ಏರ್ಪಟ್ಟು, ರಷ್ಯಾ ಭಾರತಕ್ಕೆ ಅಡ್ಮಿರಲ್ ಗೋರ್ಷ್ಕೋವ್ ಅನ್ನು ಉಚಿತವಾಗಿ ಹಸ್ತಾಂತರಿಸಿತು. ಅದರ ಅಭಿವೃದ್ಧಿಗೆ ಭಾರತ 974 ಮಿಲಿಯನ್ ಡಾಲರ್ ಪಾವತಿ ಮಾಡಿತು. ಅಡ್ಮಿರಲ್ ಗೋರ್ಷ್ಕೋವ್ ಒಂದು 44,500 ಟನ್ ತೂಕದ ಬೃಹತ್ ನೌಕೆಯಾಗಿತ್ತು. ಅದನ್ನು ಹೆಲಿಕಾಪ್ಟರ್ ವಾಹಕ ನೌಕೆಯಿಂದ ವಿಮಾನವಾಹಕ ನೌಕೆಯಾಗಿ ಪರಿವರ್ತಿಸಿ, ಲಾಂಚ್ ರಾಂಪ್ ಹಾಗೂ ಒಂದು ಫ್ಲೈಟ್ ಡೆಕ್ ಸ್ಥಾಪಿಸಲಾಯಿತು. ಇದರಲ್ಲಿ 10 ಕಾಮೊವ್ ಹೆಲಿಕಾಪ್ಟರ್‌ಗಳು ಮತ್ತು 24 ಮಿಗ್ - 29ಕೆ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಹುದಾಗಿತ್ತು.

ಈ ಅಭಿವೃದ್ಧಿಯಲ್ಲಿ ನೂತನ ರೇಡಾರ್‌ಗಳು, ಪ್ರೊಪಲ್ಷನ್‌ಗಾಗಿ ಹೊಸ ಬಾಯ್ಲರ್‌ಗಳು, ಕೆಳಗಿಳಿಯುವ ವಿಮಾನಗಳನ್ನು ಹಿಡಿಯಲು ಅರೆಸ್ಟರ್ ವೈರ್‌ಗಳು ಹಾಗೂ ನೂತನ ಡೆಕ್ ಇಲವೇಟರ್‌ಗಳೂ ಸೇರಿದ್ದವು. ಇಡೀ ನೌಕೆಯಲ್ಲಿ ನೂತನ ವೈರಿಂಗ್ ಕಾರ್ಯ ನಡೆಸಿ, ಎಲ್ಲಾ 2,700 ಕೊಠಡಿಗಳು ಮತ್ತು ಕಂಪಾರ್ಟ್‌ಮೆಂಟ್‌ಗಳನ್ನು ನವೀಕರಿಸಲಾಯಿತು. ಈ 'ನೂತನ' ವಿಮಾನವಾಹಕ ನೌಕೆಗೆ ಪ್ರಾಚೀನ ಭಾರತದ ಚಕ್ರವರ್ತಿ, ವಿಕ್ರಮಾದಿತ್ಯನ ಹೆಸರಿಡಲಾಯಿತು.

ಭಾರತ ಈ ಸೆಕೆಂಡ್ ಹ್ಯಾಂಡ್ ಯುದ್ಧ ನೌಕೆಯನ್ನು ಉಚಿತವಾಗಿ, ಆದರೆ ಅಭಿವೃದ್ಧಿ ಮತ್ತು ಮರುಜೋಡಣೆಯ ಮೊತ್ತವನ್ನು ಪಾವತಿಸಿ, 2004ರಲ್ಲಿ ತನ್ನದಾಗಿಸಿತು. ಗೋರ್ಷ್ಕೋವ್‌ನ ಫೋರ್‌ಡೆಕ್‌ನಲ್ಲಿದ್ದ ಎಲ್ಲಾ ಕ್ಷಿಪಣಿ ಲಾಂಚರ್ ಟ್ಯೂಬ್‌ಗಳು ಮತ್ತು ಆಯುಧಗಳನ್ನು ತೆಗೆದು, ಶುದ್ಧ ವಾಹಕವಾಗಿ ಪರಿವರ್ತಿಸಿ, 'ಶಾರ್ಟ್ ಟೇಕಾಫ್ ಬಟ್ ಅರೆಸ್ಟೆಡ್ ರಿಕವರಿ' (ಎಸ್‌ಟಿಒಬಿಎಆರ್) ಆಗಿ ಪರಿವರ್ತಿಸಲಾಯಿತು.

ಆದರೆ ಇಂತಹ ಒಪ್ಪಂದಗಳು ಕಾರ್ಯರೂಪಕ್ಕೆ ತರುವ ಸಂದರ್ಭಗಳಲ್ಲಿ ಸರಿಯಾಗಿರುವುದಿಲ್ಲ. ವೆಚ್ಚದ ಹೆಚ್ಚಳ ಮತ್ತು ಹಸ್ತಾಂತರದ ಅವಧಿಯ ಕುರಿತು ಸಾಕಷ್ಟು ಮಾತುಕತೆಗಳ ಬಳಿಕ ಐಎನ್‌ಎಸ್ ವಿಕ್ರಮಾದಿತ್ಯ ನವೆಂಬರ್ 2013ರಲ್ಲಿ ಸೇನೆಗೆ ಸೇರ್ಪಡೆಯಾಗಿ, ಜೂನ್ 2014ರಲ್ಲಿ ಕಾರ್ಯಾರಂಭಗೊಳಿಸಿತು. ಈ ನೌಕೆ 20 ಮಹಡಿಗಳನ್ನು ಹೊಂದಿದ್ದು, 26 ಮಿಗ್-29ಕೆ ಯುದ್ಧ ವಿಮಾನಗಳನ್ನು, 10 ಎಎಸ್‌ಡಬ್ಲ್ಯು ಹೆಲಿಕಾಪ್ಟರ್, 110 ಅಧಿಕಾರಿಗಳು ಮತ್ತು 1,500 ನಾವಿಕರನ್ನು ಹೊತ್ತೂಯ್ಯಬಲ್ಲದು. ಇದು 1,80,000 ಎಚ್‌ಪಿ ಶಕ್ತಿಯನ್ನು ಬಿಡುಗಡೆಗೊಳಿಸಿ, ಗಂಟೆಗೆ 59 ಕಿಲೋಮೀಟರ್‌ಗಳ ಗರಿಷ್ಠ ವೇಗದಲ್ಲಿ 25,000 ಕಿಲೋಮೀಟರ್ ಚಲಿಸಬಲ್ಲದು ಮತ್ತು ಸಮುದ್ರದಲ್ಲಿ ಸತತವಾಗಿ 45 ದಿನ ಉಳಿಯಬಲ್ಲದು.

ಇದನ್ನೂ ಓದಿ: ಅಪಾಚೆ ಫ್ಯೂಸ್ಲೇಜ್, ಹಿಂದುಸ್ತಾನ್ 228, ಧ್ರುವ್...: ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಭಾರತ ದಾಪುಗಾಲು!

ಪ್ರಸ್ತುತ ಸಮಸ್ಯೆಗಳನ್ನು ಗಮನಿಸಿದರೂ, ಐಎನ್‌ಎಸ್ ವಿಕ್ರಮಾದಿತ್ಯ ಇಂದಿಗೂ ವಾರಂಟಿಯ ಅವಧಿಯಲ್ಲಿದೆ. ಆದ್ದರಿಂದ ಈ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಲಾಗುತ್ತದೆ. ಇದು ಕೇವಲ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಗೆ ಮಾತ್ರ ಸಂಬಂಧಿಸಿದ್ದಲ್ಲದೆ, ಜಗತ್ತಿನ ಎಲ್ಲೇ ಕಾರ್ಯ ನಿರ್ವಹಿಸುವ ವಿಮಾನವಾಹಕ ನೌಕೆಗಳಲ್ಲಿ ಕಾಣಿಸಿಕೊಳ್ಳುವ ತೊಂದರೆಯಾಗಿದೆ. ಆದ್ದರಿಂದಲೇ ಪ್ರತಿಯೊಂದು ಒಪ್ಪಂದದಲ್ಲೂ ಗ್ಯಾರಂಟಿ ಅವಧಿ ಹಾಗೂ ನಿರ್ವಹಣಾ ಷರತ್ತುಗಳನ್ನು ನಮೂದಿಸಲಾಗುತ್ತದೆ.

ವಾರಂಟಿ ಒಪ್ಪಂದದ ಪ್ರಕಾರ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಗೆ 20 ವರ್ಷಗಳ ನಿರ್ವಹಣೆ ಒದಗಿಸುತ್ತದೆ. ಆದರೆ ಭಾರತ ಈ ನೌಕೆಯ ಸೇವಾವಧಿಯನ್ನು 40 ವರ್ಷಗಳಿಗೆ ಹೆಚ್ಚಿಸಬಹುದೆಂದು ನಂಬುತ್ತದೆ.

ಮೂರನೇ ವಿಮಾನವಾಹಕ ನೌಕೆಯ ಅಗತ್ಯತೆ:

ಸ್ವಾತಂತ್ರ್ಯ ಲಭಿಸಿದ ದಿನದಿಂದಲೂ, ಭಾರತೀಯ ನೌಕಾಪಡೆ ಎರಡು ವಿಮಾನವಾಹಕ ನೌಕೆಗಳು ಕಾರ್ಯಾಚರಿಸುವಂತೆ ಮತ್ತು ಒಂದು ವಿಮಾನವಾಹಕ ನೌಕೆ ಡ್ರೈಡಾಕ್‌ನಲ್ಲಿ ಇರುವಂತೆ ಅಂದಾಜಿಸಿತ್ತು. ಆದರೆ ಈ ಗುರಿ ಇಂದಿನವರೆಗೂ ಸಾಧಿಸಲಾಗಿಲ್ಲ. ಈಗ ಎರಡು ವಿಮಾನವಾಹಕ ನೌಕೆಗಳು ಕಾರ್ಯಾಚರಿಸುವ ಸಮಯ ಹತ್ತಿರ ಬಂದಿದ್ದು, ಭಾರತಕ್ಕೆ ವಿಮಾನವಾಹಕ ನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವೂ ಇದೆ. ಭಾರತ ನೂತನ ಐಎನ್‌ಎಸ್ ವಿಕ್ರಾಂತ್ ನಿರ್ಮಿಸುವ ಮೂಲಕ ಅದನ್ನು ಸಾಬೀತುಪಡಿಸಿದೆ‌. ಈಗ ಭಾರತ ಐಎಸಿ - 2 ನಿರ್ಮಿಸುವ ಸಮಯ ಬಂದಿದ್ದು, ವಿಮಾನವಾಹಕ ನೌಕೆಯ ನಿರ್ಮಾಣದಲ್ಲಿ ತಾನು ಸಾಧಿಸಿರುವ ಸಾಮರ್ಥ್ಯ ಕಳೆದುಹೋಗದಂತೆ ನೋಡಿಕೊಳ್ಳಬೇಕಿದೆ.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 


Stay up to date on all the latest ದೇಶ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp