ಅಪಾಚೆ ಫ್ಯೂಸ್ಲೇಜ್, ಹಿಂದುಸ್ತಾನ್ 228, ಧ್ರುವ್...: ವಿಮಾನ ನಿರ್ಮಾಣ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಭಾರತ ದಾಪುಗಾಲು!
ಭಾರತದ ನಾಗರಿಕ ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಬೆಳವಣಿಗೆಯತ್ತ ಮುನ್ನುಗ್ಗುತ್ತಿದೆ. ಭಾರತ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 138 ರಿಂದ 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.
Published: 06th July 2022 01:07 PM | Last Updated: 06th July 2022 01:07 PM | A+A A-

ಎಚ್ಎಎಲ್ ನಿರ್ಮಿತ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಧ್ರುವ್
- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಭಾರತ ಈಗ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಬೇಕಾದ ವಿಮಾನಗಳ ನಿರ್ಮಾಣದಲ್ಲಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ವಿದೇಶಗಳ ಅವಲಂಬನೆಯನ್ನು ನಿವಾರಿಸಲು ಸರಿಯಾದ ಹೆಜ್ಜೆಯಿಡುತ್ತಿರುವ ಭಾರತ ತನ್ನದೇ ಸ್ವಂತ ಹಣಕಾಸು ಹೂಡಿಕೆ ಮಾಡುವ ಮೂಲಕ, ಪ್ರಸ್ತುತ ಭಾರತ ಆರು ನಾಗರಿಕ ವಾಯುಯಾನದ ವಿಮಾನಗಳನ್ನು ನಿರ್ಮಿಸುತ್ತಿದೆ. ಅದರೊಡನೆ ಭಾರತ ಈಗ 19 ಸೀಟುಗಳನ್ನು ಹೊಂದಿರುವ ಹಗುರ ನಾಗರಿಕ ವಿಮಾನವನ್ನೂ ನಿರ್ಮಿಸುತ್ತಿದೆ.
ಭಾರತದ ನಾಗರಿಕ ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಬೆಳವಣಿಗೆಯತ್ತ ಮುನ್ನುಗ್ಗುತ್ತಿದೆ. ಈ ಬೆಳವಣಿಗೆಯ ಗತಿ ಅತ್ಯಂತ ವೇಗವಾಗಿಯೇ ಆಗುತ್ತಿದೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿ, ಭಾರತ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 138 ರಿಂದ 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.
ಹಾಗೆಂದ ಮಾತ್ರಕ್ಕೆ, ನಾಗರಿಕ ವಿಮಾನಯಾನ ಎಂದರೆ ಅದು ಕೇವಲ ವಿಮಾನಗಳ ಹಾರಾಟ ಮತ್ತು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಮಾತ್ರ ಒಳಗೊಂಡಿರುವುದಿಲ್ಲ. ಬದಲಿಗೆ ಇಲ್ಲಿ ಒಂದು ಸಂಪೂರ್ಣ ವ್ಯವಸ್ಥೆಯೇ ಅಭಿವೃದ್ಧಿ ಹೊಂದಬೇಕಿದೆ. ಅಂತಹಾ ಸಮಗ್ರ ಅಭಿವೃದ್ಧಿಯನ್ನು ಸಾಧಿಸಬೇಕಾದರೆ, ವಾಯುಯಾನ ಉದ್ಯಮ ತನ್ನ ಶೈಶವಾವಸ್ಥೆಯಿಂದ ಅಭಿವೃದ್ಧಿಯ ಕಡೆಗೆ ಸಾಗಬೇಕಿದೆ. ಆ ನಿಟ್ಟಿನಲ್ಲಿ ಭಾರತ ಸರಿಯಾದ ಹೆಜ್ಜೆಯನ್ನೇ ಇಡುತ್ತಿದೆ.
ಭಾರತ ವಿಮಾನ ನಿರ್ಮಾಣದ ಕ್ಷೇತ್ರದಲ್ಲಿ ಅಪಾರ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ಇಲ್ಲಿಯತನಕ ಭಾರತ ಸರ್ಕಾರ ನಾಗರಿಕ ವಾಯುಯಾನ ವಿಮಾನದ ನಿರ್ಮಾಣ ಕಾರ್ಯ ಕೈಗೊಂಡಿದ್ದರೂ, ಭಾರತ ಈ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿತ್ತು.
ಇದನ್ನೂ ಓದಿ: ಬ್ರಹ್ಮೋಸ್ ರಫ್ತಿಗೆ ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್) ತೊಡರುಗಾಲು!
ಆದರೆ ಈಗ ಭಾರತದಲ್ಲಿ ವಿಮಾನ ಯಾನ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಹಾಗೆ, ಬೋಯಿಂಗ್ ಹಾಗೂ ಟಾಟಾ ಸಂಸ್ಥೆಗಳ ಜಂಟಿ ಉದ್ಯಮವಾದ ಟಾಟಾ ಬೋಯಿಂಗ್ ಸ್ಪೇಸ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲಿ ಅಪಾಚೆ ಫ್ಯೂಸ್ಲೇಜನ್ನು ನಿರ್ಮಾಣಗೊಳಿಸುತ್ತಿದೆ. ಇದು ಕೇವಲ ಭಾರತದ ಉಪಯೋಗಕ್ಕೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಲಭ್ಯವಾಗಲಿದೆ. ಈ ವಿಮಾನಗಳು ಈಗ ಭಾರತದಿಂದ ವಿದೇಶಗಳಿಗೆ ರಫ್ತಾಗಲಿವೆ. ಇದೇ ಸಂದರ್ಭದಲ್ಲಿ ಏರ್‌ಬಸ್ ಸಂಸ್ಥೆಯು ಟಾಟಾ ಅಡ್ವಾನ್ಸ್ ಸಿಸ್ಟಂ ಸಂಸ್ಥೆಯೊಡನೆ ಕಾರ್ಯಾಚರಿಸುತ್ತಿದ್ದು, ಭಾರತೀಯ ವಾಯುಪಡೆ ಬಳಸುತ್ತಿರುವ ಅವ್ರೋ ವಿಮಾನದ ಬದಲಿಗೆ ಬಳಸುವಂತೆ ಏರ್ಬಸ್ ಸಿ295 ನಿರ್ಮಾಣಗೊಳಿಸಲು ಸನ್ನದ್ಧವಾಗಿದೆ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಹ ವಿಮಾನ ನಿರ್ಮಾಣದಲ್ಲಿ ಬಹಳ ಮುಖ್ಯವಾದ ಹೆಜ್ಜೆಗಳನ್ನಿಟ್ಟಿದ್ದು, ಡಾರ್ನಿಯರ್ – 228 ವಿಮಾನದ ಭಾರತೀಯ ಆವೃತ್ತಿಯಾದ ಹಿಂದುಸ್ತಾನ್ – 228 ವಿಮಾನದ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.
ಭಾರತ ಈಗಾಗಲೇ ತನ್ನದೇ ಹಣಕಾಸಿನ ಹೂಡಿಕೆಯಿಂದ ಆರು ನಾಗರಿಕ ವಾಯುಯಾನ ವಿಮಾನಗಳನ್ನು ನಿರ್ಮಾಣಗೊಳಿಸುತ್ತಿದೆ. ಅದರೊಡನೆ ಸಿಎಸ್ಆರ್ ಅಡಿಯಲ್ಲಿ ಭಾರತ 19 ಸೀಟುಗಳ ಹಗುರ ನಾಗರಿಕ ವಿಮಾನಗಳನ್ನೂ ನಿರ್ಮಾಣಗೊಳಿಸುತ್ತಿದೆ. ಈ ಹಗುರ ವಿಮಾನಗಳು ಭಾರತದ ಪ್ರಾದೇಶಿಕ ವಾಯುಯಾನಕ್ಕೆ ಹೆಚ್ಚಿನ ಉತ್ತೇಜನ ನೀಡಲಿವೆ. ಇದರ ಜೊತೆಗೆ ಎಎಲ್ಎಚ್ ಧ್ರುವ್ (ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್) ಅನ್ನೂ ಎಚ್ಎಎಲ್ ಉತ್ಪಾದಿಸುತ್ತಿದೆ.
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ನಾಗರಿಕ ವಾಯುಯಾನ ಯೋಜನೆಯಾದ ಉಡಾನ್ ಯೋಜನೆ ಅತ್ಯಂತ ಯಶಸ್ವಿ ಯೋಜನೆ ಎನಿಸಿಕೊಂಡಿದೆ. ಈ ಯೋಜನೆ ಇಲ್ಲಿಯತನಕ ವಾಯುಯಾನ ವ್ಯವಸ್ಥೆ ಹೊಂದಿರದಿದ್ದ ಅಥವಾ ಸರಿಯಾದ ವಿಮಾನಯಾನ ವ್ಯವಸ್ಥೆ ಇರದಿದ್ದ ಪ್ರದೇಶಗಳನ್ನು ವಿಮಾನಗಳು ತಲುಪುವಂತೆ ಮಾಡಿದೆ.
ಇದನ್ನೂ ಓದಿ: ವಿಮಾನ ಪ್ರಯಾಣಕ್ಕೆ ಮಧ್ಯಮ ವರ್ಗದ ಉತ್ಸಾಹ; ದೇಶೀಯ ಸಂಸ್ಥೆಗಳ ನಡುವೆ ಪೈಪೋಟಿ!
ಈ ಯೋಜನೆಯಡಿ ಕೇವಲ ಸಣ್ಣ ನಗರಗಳು ಹಾಗೂ ದೊಡ್ಡ ಮೆಟ್ರೋ ನಗರಗಳ ಮಧ್ಯ ವಿಮಾನಯಾನ ಮಾತ್ರ ಆರಂಭವಾಗಿರುವುದಲ್ಲ. ಉಡಾನ್ ಯೋಜನೆಯಡಿ 63 ವಿಮಾನ ನಿಲ್ದಾಣಗಳು, ಹೆಲಿಪೋರ್ಟ್ಗಳು ಹಾಗೂ ನೀರಿನ ಮೇಲಿನ ಏರೋಡ್ರೋಮ್‌ಗಳ ನಿರ್ಮಾಣವಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಭಾರತ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲೂ ದುಪ್ಪಟ್ಟಾಗುವುದನ್ನು ಗಮನಿಸಿದೆ. 2014ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಜಾಗದಲ್ಲಿ ಈಗ ಭಾರತದಲ್ಲಿ 138 ವಿಮಾನ ನಿಲ್ದಾಣಗಳಿವೆ.
ಭಾರತ ಇನ್ನು ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 220ಕ್ಕೆ ಏರಿಸುವ ಗುರಿಯನ್ನು ಹೊಂದಿದೆ. ವಿಮಾನಯಾನ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ. ಭಾರತ ಇದನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.
ವಾಯುಯಾನಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 36 ಆಸನಗಳುಳ್ಳ 80 ಅವ್ರೋ ವಿಮಾನಗಳನ್ನು ಹಾಗೂ 19 ಆಸನಗಳ ಹಿಂದುಸ್ತಾನ್ 228 – 201 ವಿಮಾನವನ್ನು ನಿರ್ಮಿಸಿದ್ದು, ಇದು ದೇಶದೊಳಗಿನ ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಒತ್ತು ನೀಡಲಿದೆ.
ಈಗ ಭಾರತದಲ್ಲಿ ಬೋಯಿಂಗ್ ಹಾಗೂ ಟಾಟಾ ಸಂಸ್ಥೆಗಳ ಜಂಟಿ ಉದ್ಯಮವಾದ ಟಾಟಾ ಬೋಯಿಂಗ್ ಸ್ಪೇಸ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಭಾರತದಲ್ಲಿ ವಿದೇಶೀ ರಫ್ತಿಗೂ ಸಾಧ್ಯವಾಗುವಂತೆ ಅಪಾಚೆ ಫ್ಯೂಸ್ಲೇಜ್ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ.
