ಬ್ರಹ್ಮೋಸ್‌ ರಫ್ತಿಗೆ ಮಿಸೈಲ್‌ ಟೆಕ್ನಾಲಜಿ ಕಂಟ್ರೋಲ್‌ ರೆಜಿಮ್‌ (ಎಂಟಿಸಿಆರ್) ತೊಡರುಗಾಲು!

ಬ್ರಹ್ಮೋಸ್ ಕ್ಷಿಪಣಿ, ಇದು ಮಾಸ್ಕೋ ಹಾಗೂ ನವದೆಹಲಿಯ ಜಂಟಿ ಯೋಜನೆಯಾಗಿದ್ದು, ಪಿ–800 ಆನಿಕ್‌ ಕ್ರೂಸ್‌ ಕ್ಷಿಪಣಿಯ ಭಾರತೀಯ ಆವೃತ್ತಿಯಾಗಿತ್ತು. ಕ್ಷಿಪಣಿಯ ಹೆಸರನ್ನು ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವಾ ನದಿಗಳಿಂದ ಪ್ರೇರಿತವಾಗಿ ಇಡಲಾಗಿತ್ತು.
ಬ್ರಹ್ಮೋಸ್ ಕ್ಷಿಪಣಿ
ಬ್ರಹ್ಮೋಸ್ ಕ್ಷಿಪಣಿ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬ್ರಹ್ಮೋಸ್ ಕ್ಷಿಪಣಿ ಸಂಶೋಧನೆ ಆರಂಭ 1990ರ ದಶಕದಲ್ಲಿ ನಡೆಯತೊಡಗಿತ್ತು. ಬ್ರಹ್ಮೋಸ್ ಅನ್ನು ಮೊದಲ ಬಾರಿಗೆ 12 ಜೂನ್ 2001 ರಂದು ಪರೀಕ್ಷಿಸಲಾಯಿತು, ಅಂದರೆ ಈಗಾಗಲೆ 21 ವರ್ಷಗಳು ಕಳೆದಿವೆ. ಇದು ಮಾಸ್ಕೋ ಹಾಗೂ ನವದೆಹಲಿಯ ಜಂಟಿ ಯೋಜನೆಯಾಗಿದ್ದು, ಪಿ–800 ಆನಿಕ್‌ ಕ್ರೂಸ್‌ ಕ್ಷಿಪಣಿಯ ಭಾರತೀಯ ಆವೃತ್ತಿಯಾಗಿತ್ತು. ಕ್ಷಿಪಣಿಯ ಹೆಸರನ್ನು ಭಾರತದ ಬ್ರಹ್ಮಪುತ್ರ ಹಾಗೂ ರಷ್ಯಾದ ಮಾಸ್ಕ್ವಾ ನದಿಗಳಿಂದ ಪ್ರೇರಿತವಾಗಿ ಇಡಲಾಗಿತ್ತು. ಈ ಸೂಪರ್‌ ಸಾನಿಕ್‌ ಕ್ಷಿಪಣಿಯ ಭಾರ 2.5 ರಿಂದ 2.9 ಟನ್‌ ಇದ್ದು, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಬಲ್ಲದು.

ವೇಗ, ಎತ್ತರ ಹಾಗೂ ಭಾರ:

ಕ್ರೂಸ್‌ ಕ್ಷಿಪಣಿಗಳು ವಿರೋಧಿಗಳಿಗೆ ಅವುಗಳ ಉಡಾವಣಾ ಸ್ಥಳ ಗಮನಕ್ಕೆ ಬಾರದಂತೆ ಸಾಕಷ್ಟು ದೂರದಿಂದ ಉಡಾಯಿಸಲ್ಪಡುತ್ತವೆ. ಶೀತಲ ಸಮರದ ಸಂದರ್ಭದಲ್ಲಿ ಸೋವಿಯತ್‌ ರಷ್ಯಾ ಅಮೆರಿಕಾದ ಯುದ್ಧ ವಿಮಾನಗಳನ್ನು ನಾಶ ಮಾಡುವ ಉದ್ದೇಶದಿಂದ ಒಂದು ವಿಭಿನ್ನವಾದ ಕ್ರೂಸ್‌ ಕ್ಷಿಪಣಿಯನ್ನು ನಿರ್ಮಿಸಿತ್ತು. ಅಮೆರಿಕಾದ ಯುದ್ಧ ವಿಮಾನಗಳಲ್ಲಿ ರಕ್ಷಣೆಗಾಗಿ ಹಾಗೂ ದಾಳಿಗಾಗಿ ಭೂಮಿಯಿಂದ ಗಾಳಿಗೆ ದಾಳಿ ಮಾಡುವ ಕ್ಷಿಪಣಿಗಳು, ನೆಲದಿಂದ ಗಾಳಿಗೆ ದಾಳಿ ಮಾಡುವ ಕ್ಷಿಪಣಿಗಳು ಹಾಗೂ ಗ್ಯಾಟ್ಲಿಂಗ್‌ - ಕ್ಯಾನನ್‌ ಕ್ಲೋಸ್‌ - ಇನ್‌ ವೆಪನ್‌ ಸಿಸ್ಟಮ್‌ (ಸಿಐಡಬ್ಲ್ಯೂಎಸ್) ಇದ್ದಿದ್ದರಿಂದ ಸೋವಿಯತ್‌ ರಷ್ಯಾ ಶಬ್ದದ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿ, ಶತ್ರುವಿನ ಮೇಲೆ ದಾಳಿ ಮಾಡುವ ಕ್ಷಿಪಣಿ ತಯಾರಿಸಿತು. ಈ ಕ್ಷಿಪಣಿಗಳು ಒಂದೇ ದಾಳಿಯಲ್ಲಿ ಶತ್ರುವನ್ನು ನಾಶ ಮಾಡಬೇಕೆಂಬ ಉದ್ದೇಶದಿಂದ ಅವುಗಳನ್ನು ಸಾಕಷ್ಟು ದೊಡ್ಡದಾಗೇ ನಿರ್ಮಿಸಲಾಗಿತ್ತು.

ಬಲು ದೂರ ಸಾಗುವ ಸಂದರ್ಭದಲ್ಲೂ ಅತಿ ಹೆಚ್ಚು ವೇಗವನ್ನು ಉಳಿಸಿಕೊಳ್ಳಲು ರಾಮ್‌ಜೆಟ್‌ಗಳನ್ನು ಈ ಕ್ಷಿಪಣಿಗಳಲ್ಲಿ ಅಳವಡಿಸಲಾಯಿತು. ಸರಳವಾಗಿ ಹೇಳಬೇಕೆಂದರೆ, ರಾಮ್‌ಜೆಟ್‌ ಒಂದು ಗಾಳಿಯನ್ನು ಉಸಿರಾಡುವ, ದೊಡ್ಡದಾದ ಚಲಿಸುವ ಅಂಶಗಳನ್ನು ಹೊಂದಿರದ ಇಂಜಿನ್‌ ಆಗಿದೆ. ಇದು ಅತ್ಯಂತ ವೇಗವಾಗಿ ಒಳಬರುವ ಗಾಳಿಯನ್ನು ಸಂಕೋಚನ ಕ್ರಿಯೆಗಾಗಿ ಬಳಸಿಕೊಳ್ಳುತ್ತದೆ. ಇದಕ್ಕೆ ಆ ವಾಯುಸಂಚಾರವನ್ನು ಪೂರೈಸಿಕೊಳ್ಳಲು ಸಹಾಯಕ್ಕೆ ಬೇರೆ ಯಾವುದೇ ಮೂಲದಿಂದ ಶಕ್ತಿ ಬೇಕಾಗಿಲ್ಲ. ಬ್ರಹ್ಮೋಸ್‌ ಕ್ಷಿಪಣಿಯಲ್ಲಿ ಆ ಮೊದಲ ವೇಗವರ್ಧನೆಯನ್ನು ಪೂರೈಸಲು ಒಂದು ರಾಕೆಟ್‌ ವ್ಯವಸ್ಥೆ ಇದ್ದು, ಆ ಬಳಿಕ ರಾಮ್‌ಜೆಟ್‌ ಕಾರ್ಯ ನಿರ್ವಹಿಸುತ್ತದೆ.

ಈ ಕ್ಷಿಪಣಿಯ ಅಪಾರವಾದ ಭಾರ ಹಾಗೂ ವೇಗಗಳು ಶತ್ರುವಿನ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಅಪಾರವಾದ ಚಲನಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಇದು ಕ್ಷಿಪಣಿಯು ಸಣ್ಣ ಸಿಡಿತಲೆ ಹೊಂದಿದೆ ಎಂಬ ಅನನುಕೂಲವನ್ನೂ ನಿವಾರಿಸುತ್ತದೆ.

ಈ ಭಾರ ಹಾಗೂ ವೇಗಗಳು ಕ್ಷಿಪಣಿಯು ಕಡಿಮೆ ಎತ್ತರದಲ್ಲಿ ಹಾರಾಟ ಮಾಡಲು ಇನ್ನಷ್ಟು ಸಹಕಾರಿಯಾಗಿವೆ. ಕ್ಷಿಪಣಿಯ ದ್ರವ್ಯರಾಶಿ ಮತ್ತು ವೇಗ ಗುರಿ ಸೇರುವ ಸಂದರ್ಭದಲ್ಲಿ ವಿನಾಶಕಾರಿ ಪರಿಣಾಮ ಉಂಟು ಮಾಡಿದರೆ, ಈ ಕಡಿಮೆ ಎತ್ತರದಲ್ಲಿ ಹಾರುವ ಸಾಮರ್ಥ್ಯ ಬ್ರಹ್ಮೋಸ್‌ ಕ್ಷಿಪಣಿಯನ್ನು ಗುರುತಿಸುವುದು ಮತ್ತು ತಡೆಯುವುದು ಬಹುತೇಕ ಅಸಾಧ್ಯ ಎನಿಸುವಂತೆ ಮಾಡುತ್ತದೆ. ಗುರಿಯಿಂದ 120 ಕಿಲೋಮೀಟರ್‌ ದೂರದಿಂದ ದಾಳಿಯನ್ನು ಕೈಗೊಂಡರೆ, ಕ್ಷಿಪಣಿಯು ಅತ್ಯಂತ ಕಡಿಮೆ ಎತ್ತರದಲ್ಲಿ ಸಾಗಿ, ಗುರಿಯ ಮೇಲೆ ದಾಳಿ ನಡೆಸುತ್ತದೆ. ಸಾಕಷ್ಟು ಪತ್ತೆಹಚ್ಚುವ ಸಾಧನಗಳು ಲಭ್ಯವಿದ್ದರೂ ಕೂಡ, ಸಮುದ್ರಕ್ಕಿಂದ ಸ್ವಲ್ಪವೇ ಎತ್ತರದಲ್ಲಿ ಬರುವ ಕ್ಷಿಪಣಿಯನ್ನು ಒಂದು ಹಡಗು ಕೇವಲ 30 ಕಿಲೋಮೀಟರ್‌ ದೂರದಲ್ಲಷ್ಟೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆ ಬಳಿಕ ಹಡಗಿಗೆ ಅದರ ವಿರುದ್ಧ ಕಾರ್ಯಾಚರಣೆಗೆ ಕೇವಲ ಅರ್ಧ ನಿಮಿಷವಷ್ಟೇ ಸಮಯವಿರುತ್ತದೆ. ಹತ್ತಿರದಲ್ಲಿದ್ದರೂ ಬ್ರಹ್ಮೋಸನ್ನು ಹೊಡೆದುರುಳಿಸುವುದು ಕಷ್ಟಕರ. ಏಕೆಂದರೆ ಕ್ಷಿಪಣಿ ದಾಳಿಯ ಸ್ವಲ್ಪ ಮೊದಲು ಇಂಗ್ಲಿಷ್‌ ನ 'ಎಸ್‌' ಅಕ್ಷರದ ಆಕಾರದಲ್ಲಿ ಬಳುಕಿ, ದಾಳಿ ನಡೆಸುತ್ತದೆ.

ಬ್ರಹ್ಮೋಸ್‌ ನೆಲದ ಮೇಲಿರುವ ಗುರಿಗಳ ಮೇಲೆ ಶಾಶ್ವತ ಪತ್ತೆ ಸಾಧನಗಳಾದ ರೇಡಾರ್‌ಗಳು, ಕಮಾಂಡ್‌ ಸೆಂಟರ್‌ಗಳು, ಏರ್‌ ಬೇಸ್‌ ಹಾಗೂ ಕ್ಷಿಪಣಿ ಬ್ಯಾಟರಿಗಳ ಕಣ್ಣಿಗೂ ಬೀಳದಂತೆ ನಿಖರವಾಗಿ ದಾಳಿ ಮಾಡುತ್ತದೆ.

ಬ್ರಹ್ಮೋಸ್‌ ಕ್ಷಿಪಣಿಗಳನ್ನು ಬಳಸಿ ಮಾಡುವ ಪರಿಣಾಮಕಾರಿ ದಾಳಿಗೆ ಸಾಕಷ್ಟು ಕ್ಷಿಪಣಿಗಳನ್ನು ಒಂದೇ ಸಮಯದಲ್ಲಿ ಹಾರಿಸಬೇಕಾಗುತ್ತದೆ. ಇದು ಶತ್ರುವಿನ ಯುದ್ಧ ವಿಮಾನಗಳು ಅಥವಾ ಹಡಗುಗಳಲ್ಲಿ ಇರಬಹುದಾದ ವಿವಿಧ ಹಂತಗಳ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಸಹಕಾರಿ.

ಬ್ರಹ್ಮೋಸ್‌ನ ವಿಧಗಳು:

ಭಾರತದ ವಿವಿಧ ಅಗತ್ಯಗಳಿಗೆ ತಕ್ಕಂತೆ, ನೆಲ ಹಾಗೂ ಸಮುದ್ರದ ಮೇಲೆ ದಾಳಿ ನಡೆಸಲು ಬ್ರಹ್ಮೋಸ್‌ನಲ್ಲಿ ಹಲವು ವಿಧಗಳನ್ನು ರೂಪಿಸಲಾಗಿದೆ.

ನೆಲದ ಮೇಲೆ, ಕ್ಷಿಪಣಿಯನ್ನು 12 ಚಕ್ರಗಳ ಟ್ರಕ್‌ ಮೇಲೆ ಸ್ಥಾಪಿಸಿರುವ ಮೊಬೈಲ್‌ ಆಟೋನೊಮಸ್‌ ಲಾಂಚರ್‌ ವ್ಯವಸ್ಥೆಯ ಮೂಲಕ ಉಡಾಯಿಸಲಾಗುತ್ತದೆ. ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನು ಐದು ಲಾಂಚರ್‌ಗಳ ರೆಜಿಮೆಂಟಿನಲ್ಲಿ ಜೋಡಿಸಲಾಗಿರುತ್ತದೆ.

ಭಾರತೀಯ ನೌಕಾಪಡೆಯ ಬ್ರಹ್ಮೋಸ್ ಕ್ಷಿಪಣಿ ಸಾಮಾನ್ಯವಾಗಿ ಎಂಟು ಸೆಲ್‌ಗಳ ವರ್ಟಿಕಲ್‌ ಲಾಂಚ್‌ ಸಿಸ್ಟಮ್‌ ಲಾಂಚರ್‌ಗಳನ್ನು ಉಪಯೋಗಿಸಿ ಉಡಾಯಿಸಲ್ಪಡುತ್ತದೆ. ನೌಕಾಪಡೆಯ ಆರು ಯುದ್ಧನೌಕೆಗಳು ಹಾಗೂ ಎರಡು ಡಿಸ್ಟ್ರಾಯರ್‌ಗಳು ಒಂದೊಂದು ಬ್ರಹ್ಮೋಸ್‌ ಲಾಂಚರ್‌ಗಳನ್ನು ಹೊಂದಿವೆ. ನೌಕಾಪಡೆಯ ಇನ್ನೂ ಮೂರು ಡಿಸ್ಟ್ರಾಯರ್‌ಗಳಲ್ಲಿ ಟ್ವಿನ್‌ ಲಾಂಚರ್‌ಗಳೂ ಇವೆ.

ಯುದ್ಧ ನೌಕೆಗಳ ಹಾಗೂ ಡಿಸ್ಟ್ರಾಯರ್‌ಗಳನ್ನು ಹೊರತುಪಡಿಸಿ, ಭಾರತೀಯ ನೌಕಾಪಡೆ 2013ರಲ್ಲಿ ಜಲಾಂತರ್ಗಾಮಿಯ ಮೂಲಕ ಉಡಾಯಿಸಬಹುದಾದ ಬ್ರಹೋಸ್‌ ಆವೃತ್ತಿಯನ್ನೂ ಪ್ರಯೋಗಿಸಿದೆ. ಇದು ಮುಂದಿನ ಯುದ್ಧ ನೌಕೆಗಳಲ್ಲಿ ಸೇವೆಗೆ ಲಭ್ಯವಾಗಲಿದೆ. ಈ ಬ್ರಹ್ಮೋಸ್‌ ಆವೃತ್ತಿಯ ಅನುಕೂಲತೆ ಎಂದರೆ ಅದನ್ನು ಪತ್ತೆ ಹಚ್ಚುವುದು ಬಹುತೇಕ ಅಸಾಧ್ಯವಾಗಿರಲಿದೆ.

ಭಾರತ ಈಗಾಗಲೇ ಬ್ರಹ್ಮೋಸ್‌–ಎ ಎಂಬ ಆವೃತ್ತಿಯನ್ನೂ ಅಭಿವೃದ್ಧಿಪಡಿಸಿದೆ. ಇದನ್ನು ಭಾರತದ ಬಳಿ ಇರುವ, ರಷ್ಯಾ ನಿರ್ಮಿತ ಸು–30ಎಂಕೆಐ ಫೈಟರ್‌ಗಳ ಮೂಲಕ ಉಡಾಯಿಸುವ ಉದ್ದೇಶದಿಂದಲೇ ನಿರ್ಮಿಸಲಾಗಿದೆ. ಸು – 30ಎಸ್‌ ಅನ್ನು ಇಂತಹಾ ಬಲುಭಾರದ ಕ್ಷಿಪಣಿಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಸಾಕಷ್ಟು ಮಾರ್ಪಾಡುಗಳನ್ನೂ ಮಾಡಿಕೊಳ್ಳಲಾಗಿದೆ. ವರದಿಗಳ ಪ್ರಕಾರ, ಭಾರತ ಈಗಾಗಲೇ ಇನ್ನೂರು ಬ್ರಹ್ಮೋಸ್‌–ಎ ಕ್ಷಿಪಣಿಗಳನ್ನು ಕೋರಿಕೊಂಡಿದ್ದು, 40 ಸು - 30ಎಂಕೆಐಗಳನ್ನು ಈ ಕ್ಷಿಪಣಿಗಳ ಜೋಡಣೆಗೆ ಅನುಕೂಲವಾಗುವಂತೆ ಮಾರ್ಪಡಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ.

ಭಾರತ ಇನ್ನೂ ಹೆಚ್ಚಿನ, ಇನ್ನೂ ಘಾತಕವಾದ ಬ್ರಹ್ಮೋಸ್‌ ಆವೃತ್ತಿಗಳನ್ನು ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದೆ. ಕೆಲವು ಮಾಹಿತಿಗಳ ಪ್ರಕಾರ, ಭಾರತ ಈಗಾಗಲೇ 2012ರಲ್ಲಿ ಉಪಗ್ರಹಗಳ ಮೂಲಕ ನಿರ್ದೇಶಿತವಾದ ಹೊಸ ಆವೃತ್ತಿಯನ್ನೂ ಪ್ರಯೋಗಿಸಿದೆ. ಈ ಆವೃತ್ತಿ 500 ಕಿಲೋಮೀಟರ್‌ ವ್ಯಾಪ್ತಿಯನ್ನು ಹೊಂದಿದೆ ಎನ್ನಲಾಗುತ್ತದೆ.

ಭಾರತ ಶೀಘ್ರದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ, ಬ್ರಹ್ಮೋಸ್ - ಎನ್‌ಜಿ ಯನ್ನೂ ಪರಿಚಯಿಸಲಿದೆ. ಇದು ಈಗಿನ ಆವೃತ್ತಿಗಳಿಂದ ಸಣ್ಣದಾಗಿದ್ದು,ಇನ್ನೂ ಹೆಚ್ಚು ವೇಗವಾಗಿ ಹಾಗೂ ರಹಸ್ಯಕರವಾಗಿ ದಾಳಿ ಮಾಡಲಿದೆ.

ಈ ವ್ಯಾಪ್ತಿ ಮೊದಲಿಗಿಂತ ಹೆಚ್ಚು ಆಶಾದಾಯಕವಾಗಿ ಕಾಣಿಸಿಕೊಂಡರೂ, ಇದರಲ್ಲಿ ಒಂದು ಅನನುಕೂಲತೆಯೂ ಇದೆ. ಈ ಕ್ಷಿಪಣಿ ಕಲ್ಪಸಿರುವುದಕ್ಕೂ ಹೆಚ್ಚು ವಿಶಾಲವಾದ ಗುರಿಯನ್ನು ಎದುರಿಸಬೇಕಾಗಿ ಬರಬಹುದು.

ಮಿತಿಗಳು:

ಬ್ರಹ್ಮೋಸ್‌ ಕ್ಷಿಪಣಿಯ ವ್ಯಾಪ್ತಿ ಈಗ ಕೇವಲ 290 ಕಿಲೋಮೀಟರ್‌ ಆಗಿದ್ದು, ಇದು ರಷ್ಯಾ ನಿರ್ಮಿತ ಆನಿಕ್ಸ್‌ ಕ್ಷಿಪಣಿಗಳ ಅರ್ಧ ವ್ಯಾಪ್ತಿಯದಾಗಿದೆ. ಈ ವ್ಯಾಪ್ತಿ ಕಡಿಮೆಯೂ ಆಗಿರುವುದರಿಂದ, ಪರಿಣಾಮಕಾರಿ ದಾಳಿ ನಡೆಸಲು ಈ ಕ್ಷಿಪಣಿಗಳ ಉಡಾವಣಾ ಸ್ಥಳ ಗುರಿಗೆ ಸಮೀಪವಾಗಿರಬೇಕಾಗಿರುತ್ತದೆ. ಅದರ ಪರಿಣಾಮವಾಗಿ, ಉಡಾವಣಾ ಸ್ಥಳ ರಹಸ್ಯವಾಗಿರದೆ, ಶತ್ರುವಿನ ಗಮನಕ್ಕೆ ಬರುವ ಸಾಧ್ಯತೆಗಳು ಇರುತ್ತವೆ. ಹಾಗೆಂದ ಮಾತ್ರಕ್ಕೆ ಈ ಕಡಿಮೆ ವ್ಯಾಪ್ತಿ ಯಾವುದೋ ತಂತ್ರಜ್ಞಾನದ ಅಭಿವೃದ್ಧಿಯ ಕೊರತೆಯಿಂದಲೋ, ತಂತ್ರಜ್ಞಾನದ ಅಲಭ್ಯತೆಯಿಂದಲೋ ಆಗಿರುವುದಲ್ಲ. ಇದು ಮಿಸೈಲ್‌ ಟೆಕ್ನಾಲಜಿ ಕಂಟ್ರೋಲ್‌ ರೆಜಿಮ್‌ (ಎಂಟಿಸಿಆರ್) ಅನ್ನು ದೃಢೀಕರಿಸುವ ಉದ್ದೇಶದಿಂದಲೇ ಈ ಮಿತಿಯನ್ನು ಉದ್ದೇಶಪೂರ್ವಕವಾಗಿ ನಿಗದಿಪಡಿಸಲಾಗಿದೆ. ಎಂಟಿಸಿಆರ್‌ ಎನ್ನುವುದು 35 ರಾಷ್ಟ್ರಗಳ ಪಾಲುದಾರಿಕೆಯಾಗಿದ್ದು, ಇದು 300 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ಮಿತಿ ಹೊಂದಿರುವ ಕ್ಷಿಪಣಿಗಳ ರಫ್ತು ಕೈಗೊಳ್ಳದಂತೆ ತಡೆಯುತ್ತದೆ.

ಎಂಟಿಸಿಆರ್ ಒಕ್ಕೂಟದ ಸದಸ್ಯನಾಗಿರುವುದರಿಂದ ಭಾರತಕ್ಕೆ ಭವಿಷ್ಯದಲ್ಲಿ ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯನಾಗುವುದಕ್ಕೆ ಸಹಕಾರಿಯಾಗಲಿದೆ. ಗಮನಾರ್ಹವಾಗಿ, ಪ್ರಸ್ತುತ ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದಕ್ಕೆ ಚೀನಾ ಅಡ್ಡಗಾಲು ಹಾಕಿ ತಡೆಯುತ್ತಿದ್ದು, ಭಾರತ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿಲ್ಲ ಎಂಬ ಕಾರಣವನ್ನು ಮುಂದಿಡುತ್ತಿದೆ.

ಭಾರತ ಬ್ರಹ್ಮೋಸ್ ಕ್ಷಿಪಣಿಯ 300 ಕಿಲೋಮೀಟರಿಗೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಆಧುನಿಕ ಆವೃತ್ತಿಳನ್ನು ರಫ್ತು ಮಾಡುವ ಮೊದಲು, ಭಾರತ ತನ್ನ ರಫ್ತು ಮಾಡುವ ಗುರಿ ಹಾಗೂ ಎಂಟಿಸಿಆರ್‌ ಮಧ್ಯ ಇರುವ ಅಂತರವನ್ನು ತಗ್ಗಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಅದಕ್ಕೊಂದು ಮಾರ್ಗವನ್ನು ಕಂಡು ಹಿಡಿಯುವುದು ಅವಶ್ಯವಾಗಿದೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com