ವಿರೋಧದ ಸುಳಿಗೆ ಸಿಲುಕಿರುವ 'ಅಗ್ನಿಪಥ್' ಯೋಜನೆಗೆ ವಿಶ್ವಾಸದ ಕೊರತೆ!

ಅಗ್ನಿಪಥ್‌ ಯೋಜನೆಯ ಹಾದಿ ಕಷ್ಟಕರವಾಗಿರುವಂತೆ ಕಾಣುತ್ತಿದ್ದು, ಇದರ ಕುರಿತಾಗಿ ಹಿರಿಯ ಸೈನಿಕರು, ಸೇನೆಗೆ ಸೇರಲು ಕಾತರಾಗಿರುವವರು ಹಾಗೂ ವಿರೋಧ ಪಕ್ಷಗಳ ಹಲವಾರು ನಾಯಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಭಾರತೀಯ ಶಶಸ್ತ್ರ ಪಡೆಗಳು
ಭಾರತೀಯ ಶಶಸ್ತ್ರ ಪಡೆಗಳು
Updated on

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬಹುತೇಕ ಒಂದು ವಾರದ ಹಿಂದೆ ಈಗ ಅಗ್ನಿಪಥ್‌ ಎಂದು ಹೆಸರಿಸಲಾಗಿರುವ ರಕ್ಷಣಾ ಯೋಜನೆಯನ್ನು ಪರಿಚಯಿಸಲಾಗಿತ್ತು. ಈ ಯೋಜನೆಯಡಿ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಗಳಿಗೆ ನಾಲ್ಕು ವರ್ಷಗಳ ಗುತ್ತಿಗೆಯಡಿ ಯುವ ಸೈನಿಕರನ್ನು ನೇಮಿಸಿಕೊಳ್ಳುವ ಯೋಜನೆ ಇದಾಗಿದೆ. ಕೇಂದ್ರ ಸರ್ಕಾರದ ಪ್ರಕಾರ, ಈ ಯೋಜನೆ ಭಾರತೀಯ ಸೇನಾಪಡೆಗಳ ಸರಾಸರಿ ವಯಸ್ಸನ್ನು ಕಡಿತಗೊಳಿಸಿ, ಸೇನೆಯನ್ನು ಇನ್ನಷ್ಟು ಯುವ ಸೇನೆಯನ್ನಾಗಿಸಲಿದೆ. ಅದರೊಡನೆ ಈ ಯೋಜನೆ ಸರ್ಕಾರದ ಬೊಕ್ಕಸದ ಮೇಲೆ ಬೀಳುವ ಪಿಂಚಣಿಯ ಭಾರವನ್ನೂ ಕಡಿತಗೊಳಿಸಲಿದೆ.

ಆದರೂ ಅಗ್ನಿಪಥ್‌ ಯೋಜನೆಯ ಹಾದಿ ಕಷ್ಟಕರವಾಗಿರುವಂತೆ ಕಾಣುತ್ತಿದ್ದು, ಇದರ ಕುರಿತಾಗಿ ಹಿರಿಯ ಸೈನಿಕರು, ಸೇನೆಗೆ ಸೇರಲು ಕಾತರಾಗಿರುವವರು ಹಾಗೂ ವಿರೋಧ ಪಕ್ಷಗಳ ಹಲವಾರು ನಾಯಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.

ಹಲವಾರು ಮಾಜಿ ಸೈನಿಕರೂ ಸಹ ಈ ಕುರಿತು ಮಾತನಾಡಿ, ಈ ಅಗ್ನಿಪಥ್‌ ಯೋಜನೆ ಸಾರ್ವಜನಿಕರ ಸುರಕ್ಷತೆಗೆ ತೊಂದರೆ ಉಂಟು ಮಾಡಬಹುದು, ಇದರಿಂದ ಭವಿಷ್ಯದಲ್ಲಿ ಸೈನಿಕರ ಭವಿಷ್ಯಕ್ಕೂ ಮಾರಕವಾಗಬಹುದು, ಅವರ ಯುದ್ಧ ಮಾಡುವ ಸಾಮರ್ಥ್ಯಕ್ಕೆ ಧಕ್ಕೆಯಾಗಬಹುದು, ಭಾರತೀಯ ಸೇನಾಪಡೆಗಳ ನೈತಿಕತೆ ಹಾಗೂ ವೃತ್ತಿಪರತೆಗೆ ಹಾನಿ ಉಂಟುಮಾಡಬಹುದು ಹಾಗೂ ನಾಗರಿಕ ಸಮಾಜದ ಮಿಲಿಟರಿಕರಣಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಗ್ನಿಪಥ್‌ ಯೋಜನೆಯ ಮುಂದಿರುವ ಗುರುತರ ಸವಾಲುಗಳು:

ಅಗ್ನಿಪಥ್‌ ಯೋಜನೆಯ ಕುರಿತಾಗಿ ತಮ್ಮ ಸ್ಪಷ್ಟ ಅಸಮಾಧಾನವನ್ನು ಹೊರ ಹಾಕುತ್ತಾ ಹಲವು ಪ್ರತಿಭಟನಾಕಾರರು ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಹೇಗೆ ಅದು ಸಮಾಜ ಹಾಗೂ ಸೇನೆಯ ಮೇಲೆ ದುಷ್ಪರಿಣಾಮ ಬೀರುತ್ತದೆ, ನಾಗರಿಕರ ಸುರಕ್ಷತೆಯ ಮೇಲೆ ಅದು ಹೇಗೆ ಸವಾಲಾಗಿ ಪರಿಣಮಿಸುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಂದ ಮಾಧ್ಯಮ ವರದಿಗಳಲ್ಲಿ, ನಿವೃತ್ತ ಕರ್ನಲ್‌ ಎನ್‌ ಎನ್‌ ಭಾಟಿಯಾ ಅವರು ಈ ನೂತನ ಯೋಜನೆ ಜಾರಿಗೆ ಬಂದರೆ ಅದು ಹೇಗೆ ಹೊಸದಾಗಿ ನೇಮಕಗೊಳ್ಳುವ ಸೈನಿಕರ ತರಬೇತಿಯನ್ನು ಅರ್ಧಕ್ಕೆ ಇಳಿಸುತ್ತದೆ ಎಂದಿದ್ದರು. ಅವರು ಮಾತನಾಡುತ್ತಾ, ಈ ಯೋಜನೆಯ ಮೂಲಕ ನೇಮಕಗೊಳ್ಳುವ ಅರೆಬರೆ ತರಬೇತಿ ಪಡೆದ ಹೊಸ ಸೈನಿಕರು ಅವರ ಸೇವಾ ಅವಧಿಯಲ್ಲಿ 9 ತಿಂಗಳು ರಜೆಯಲ್ಲಿ (ಎರಡು ತಿಂಗಳ ವಾರ್ಷಿಕ ರಜೆ ಹಾಗೂ ಇಪ್ಪತ್ತು ದಿನಗಳ ಸಾಮಾನ್ಯ ರಜೆ) ಕಳೆಯುತ್ತಾರೆ. ಅದರೊಡನೆ ಅವರಿಗೆ ಆರೋಗ್ಯ ಸಮಸ್ಯೆಗಳು ಹಾಗೂ ಪ್ರಯಾಣಕ್ಕಾಗಿ ಇನ್ನೂ ಒಂದಷ್ಟು ಸಮಯ ಕಳೆದು ಹೋಗುತ್ತದೆ. ಆದ್ದರಿಂದ ಈ ಹೊಸ ಸೈನಿಕರು ಸಂಪೂರ್ಣವಾಗಿ ತರಬೇತಿ ಹೊಂದಿ, ತಯಾರಾಗುವ ಮೊದಲೇ ಅವರ ನಾಲ್ಕು ವರ್ಷಗಳ ಅವಧಿ ಕಳೆದು ಹೋಗುತ್ತದೆ ಹಾಗೂ ಅವರಲ್ಲಿ 75% ಜನರು ನಿರುದ್ಯೋಗಿಗಳಾಗಿರುತ್ತಾರೆ ಹಾಗೂ ಜೀವನ ನಡೆಸಲು ಇನ್ನೇನು ಮಾರ್ಗ ಎಂದು ಯೋಚಿಸುತ್ತಿರುತ್ತಾರೆ. ಈ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಅವರು 24x7x365x4 ದಿನಗಳ ಕಾಲವೂ ಅವರು ಸೇನಾಪಡೆಗಳಿಗೆ ಸೇರಿದ ಹಾಗೂ ಮುಂದಿನ ದಿನಗಳ ಬಗ್ಗೆ ಮಾತನಾಡುತ್ತಾ ಕಳೆಯುತ್ತಾರೆಯೇ ಹೊರತು ಅವರ ಉದ್ಯೋಗಕ್ಕೆ ಸಂಪೂರ್ಣವಾಗಿ ಬದ್ಧವಾಗಿರಲು ಸಾಧ್ಯವಾಗಿರುವುದಿಲ್ಲ.

ನಿವೃತ್ತ ಮೇಜರ್‌ ಜನರಲ್‌ ರಜನ್‌ ಕೊಚ್ಚಾರಿ ಅವರೂ ಸಹ ಅಗ್ನಿಪಥ್‌ ಯೋಜನೆಗೆ ಎದುರಾಗಬಹುದಾದ ಸವಾಲುಗಳ ಕುರಿತು ಮಾತನಾಡಿದ್ದರು. “ಅಗ್ನಿಪಥ್‌ ಯೋಜನೆಯಲ್ಲಿ ನೂತನವಾಗಿ ಸೇನೆಗೆ ಸೇರ್ಪಡೆಯಾಗುವ ಈ ಸಣ್ಣ ವಯಸ್ಸಿನ ಹುಡುಗರ ಮನಸ್ಥಿತಿಯನ್ನು ಶಿಸ್ತುಬದ್ಧವಾಗಿಸಿ, ಅವರು ಸೇನಾಪಡೆಗಳ ಸಂಸ್ಕೃತಿಗೆ ಹೊಂದಿಕೊಳ್ಳುವಂತೆ ಮಾಡುವುದೂ ಒಂದು ಸವಾಲಿನ ವಿಚಾರವಾಗಲಿದೆ. ಅದೂ ಅಲ್ಲದೆ ಈ ಯೋಜನೆಯಡಿ ಸೇನೆಗೆ ಸೇರ್ಪಡೆಯಾಗುವ ಯುವಕರಿಗೆ ಅವರು ಸೇನಾಪಡೆಗಳಿಗೆ ತಾತ್ಕಾಲಿಕ ಅವಧಿಗಷ್ಟೇ ಸೇರ್ಪಡೆಗೊಂಡಿದ್ದಾರೆ ಎಂಬ ಯೋಚನೆಯೂ ಕೊರೆಯುತ್ತಿರುತ್ತದೆ. ಅದರ ಪರಿಣಾಮವಾಗಿ, ಸೇನೆಯಲ್ಲಿ ಅವರ ತೊಡಗಿಕೊಳ್ಳುವ ಮನಸ್ಥಿತಿ ಪೂರ್ಣ ಪ್ರಮಾಣದ ಉದ್ಯೋಗಿಗಳಿಗಿಂತ ಕಡಿಮೆ ಇರುವ ಸಾಧ್ಯತೆಗಳಿವೆ. ಹಾಗಾಗಿ ಅಗ್ನಿಪಥ್‌ ಯೋಜನೆಗೆ ಎದುರಾಗುವ ಮೊದಲ ಸವಾಲೆಂದರೆ ಆ ಯುವಕರ ಮನಸ್ಥಿತಿಯನ್ನು ಬದಲಾಯಿಸುವುದು, ಆ ಬಳಿಕ ಅವರಲ್ಲಿ ಅವರ ರೆಜಿಮೆಂಟಿನ ಸ್ಫೂರ್ತಿ ತುಂಬುವುದು ಹಾಗೂ ಅವರನ್ನು ಭಾರತೀಯ ಸೇನಾಪಡೆಗಳು ನಿಯೋಜಿಸುವ ಸ್ಥಳಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡುವುದಾಗಿದೆ. ಆ ಬಳಿಕ ಎದುರಾಗುವ ಸವಾಲೆಂದರೆ ಸೇನೆಗೆ ಅಗ್ನಿಪಥ್‌ ಯೋಜನೆಯಡಿ ಸೇರ್ಪಡೆಯಾದ ಅಗ್ನಿವೀರರಲ್ಲಿ ನಾಲ್ಕು ವರ್ಷದ ಸೇವಾ ಅವಧಿಯ ಬಳಿಕ ಕೇವಲ 25% ಸೈನಿಕರನ್ನು ಸೇನೆಗೆ ಉದ್ಯೋಗಿಗಳಾಗಿ ನೇಮಕಗೊಳಿಸುವುದು. ಅವರನ್ನು ಯಾವ ಆಧಾರದ ಮೇಲೆ ನೇಮಕಗೊಳಿಸುವುದು ಎಂಬುದೂ ಒಂದು ಪ್ರಶ್ನೆಯೇ ಆಗಿದೆ. ಇನ್ನು ಅಗ್ನಿಪಥ್‌ ಯೋಜನೆಗೆ ಎದುರಾಗುವ ಮೂರನೇ ಸವಾಲೆಂದರೆ, ಅಗ್ನಿಪಥ್‌ ಯೋಜನೆಯಡಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಸೇನೆಯಿಂದ ಹೊರಬರುವ ಯುವಕರಿಗೆ ಯಾವ ರೀತಿ ಉದ್ಯೋಗ ಸೃಷ್ಟಿ ಮಾಡುವುದು? ಅದೂ ಅಲ್ಲದೆ ಐಟಿಐ ಸೇರಿದಂತೆ ಭಾರತದ ವಿವಿಧ ಯೋಜನೆಗಳ ಪರಿಣಾಮ ಅಥವಾ ಪ್ರಯೋಜನ ಹೇಳಿಕೊಳ್ಳುವಷ್ಟೇನೂ ಕಂಡು ಬಂದಿಲ್ಲ. ಆದ್ದರಿಂದ ಈ ಯೋಜನೆಗಳು ಪರಿಣಾಮಕಾರಿ ಆಗುತ್ತವೆ ಅಂದುಕೊಳ್ಳುವುದಾದರೂ ಹೇಗೆ?

ಅಗ್ನಿವೀರರಾಗಿ ಅಗ್ನಿಪಥ್ ಯೋಜನೆಯಡಿ ಸೇನೆಗೆ ನೇಮಕಗೊಳ್ಳುವ ಯುವ ಜನತೆಯ ಬಳಿ ಸೇನೆಯ ಕುರಿತಾದ ಜ್ಞಾನ, ಸೇನೆಯ ರಹಸ್ಯ ಸ್ಥಳಗಳು, ಹಾಗೂ ವಿವಿಧ ರೀತಿಯ ರಹಸ್ಯ ವಿಷಯಗಳ ಕುರಿತಾದ ಮಾಹಿತಿ ಇರುವುದರಿಂದ, ಅದು ದೇಶದ ಭದ್ರತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಹ ಒಂದು ಗುರುತರವಾದ ಸವಾಲು. ರಜನ್‌ ಕೊಚ್ಚಾರಿ ಅವರ ಪ್ರಕಾರ ಸಾರ್ವಜನಿಕರ ಸುರಕ್ಷತೆಯೂ ಒಂದು ಪ್ರಮುಖ ವಿಚಾರವಾಗಿದ್ದು, ಯಾವುದೇ ಸರ್ಕಾರವಾಗಲಿ, ಅಧಿಕಾರಿ ವರ್ಗವಾಗಲಿ ಸಾರ್ವಜನಿಕ ಸುರಕ್ಷತೆಯ ವಿಚಾರದಲ್ಲಿ ಯಾವ ಲೋಪವನ್ನೂ ಮಾಡುವಂತಿಲ್ಲ.

ಅದೆಷ್ಟೇ ಸುರಕ್ಷಿತವಾಗಿ ಈ ಯೋಜನೆ ನಡೆಯುತ್ತದೆ ಅಂದುಕೊಂಡರೂ, ಒಂದಲ್ಲ ಒಂದು ಹಂತದಲ್ಲಿ ಈ ಯೋಜನೆಯಿಂದ, ಅರೆಬರೆ ತರಬೇತಿ ಪಡೆದ, ಅರೆಬರೆ ಜ್ಞಾನ ಹೊಂದಿದ ಸೈನಿಕರಿಂದ ಖಂಡಿತವಾಗಿಯೂ ಸಾರ್ವಜನಿಕ ಸುರಕ್ಷತೆಗೆ ಸವಾಲು, ಅಪಾಯ ಎದುರಾಗಬಹುದು. ಇಂತಹ ಸೈನಿಕರು ದೇಶವನ್ನು ಕಾಯುತ್ತಾರೆ ಎನ್ನುವುದೇ ಒಂದು ಅತಿದೊಡ್ಡ ಸವಾಲು ಎನ್ನುತ್ತಾರೆ ಅವರು.

“ಇನ್ನೂ ಚಾಲ್ತಿಗೆ ಬರದ ಉದ್ಯಮಗಳನ್ನು ಸಂಭಾಳಿಸುವುದು, ಅವರಿಗೆ ಮರು ಉದ್ಯೋಗಗಳನ್ನು ಸೃಷ್ಟಿಸುವುದು, ಆ ಯೋಧರ ಭವಿಷ್ಯದ ಕುರಿತ ಯೋಚನೆಗಳು, ಪರಿಪೂರ್ಣವಾಗದ ತರಬೇತಿ, ಮುಂತಾದ ಸಮಸ್ಯೆಗಳು ಅವರು ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಯುನಿಟ್ ಅನ್ನು ಬಾಧಿಸಲಿವೆ. ಅದರೊಡನೆ ಮಾನವ ಸಂಪನ್ಮೂಲಗಳ ಕಡಿತ, ನಿವೃತ್ತಿ ವೇತನ ಹಾಗೂ ಸಂಬಳದಲ್ಲಿನ ಕಡಿತವೂ ಒಂದು ಸವಾಲೇ. ಪ್ರಸ್ತುತ ಸನ್ನಿವೇಶದಲ್ಲಿ ಮಿಲಿಟರಿಗೆ ಮಾಡಿಕೊಳ್ಳುವ ನೇಮಕಾತಿ ದೇಶಾದ್ಯಂತ ಐಟಿಐಗಳ ಮೂಲಕ ನಡೆಯುತ್ತದೋ ಅಥವಾ ಬೇರೆ ರೀತಿಯಲ್ಲೋ ಎನ್ನುವುದೂ ಸ್ಪಷ್ಟವಾಗಿಲ್ಲ” ಎಂದು ಮೇಜರ್ ಜನರಲ್ (ನಿವೃತ್ತ) ಹರ್ಷ ಕಕರ್ ಅವರು ಅಭಿಪ್ರಾಯಪಡುತ್ತಾರೆ.

ಪ್ರಬಲವಾದ ಅಸಮಾಧಾನ ಹಾಗೂ ವಿರೋಧ:

ಅವರೊಡನೆ, ನಿವೃತ್ತ ಗ್ರೂಪ್‌ ಕ್ಯಾಪ್ಟನ್‌ ಜಾನ್ಸನ್‌ ಚಾಕೋ ಅವರು ತನ್ನ ಅಭಿಪ್ರಾಯಗಳನ್ನು ಮಂಡಿಸುತ್ತಾ, ಯಾವುದೇ ಸಂಸ್ಥೆಯನ್ನು ವಿನ್ಯಾಸಗೊಳಿಸುವಾಗಲೂ ಅದರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಮೊದಲನೆಯದಾಗಿ ನಾವು ಅದರ ಆಕಾರವನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಅಂದರೆ ಇಲ್ಲಿ ವಿನ್ಯಾಸವೇನು? ನಾವು ಇನ್ನು ಮುಂದಿನ ದಿನಗಳಲ್ಲಿ ಆರ್ಮಿ> ಕಾರ್ಪ್ಸ್‌ > ಡಿಐವಿ> ಬಿಡಿಇ> ಬಿಎನ್‌ ವಿನ್ಯಾಸದಲ್ಲಿ ಮುಂದುವರಿಯುತ್ತೇವೋ ಅಥವಾ ಮುಂದೆ ಐಬಿಜಿ (ಇಂಟಗ್ರೇಟೆಡ್‌ ಬ್ಯಾಟಲ್‌ ಗ್ರೂಪ್ಸ್) ಮಾದರಿಯಲ್ಲಿ ಮುಂದುವರಿಯುತ್ತೇವೋ ಅನ್ನುವುದು ಸ್ಪಷ್ಟವಾಗಬೇಕಿದೆ. ನಾವು ಮೊದಲಿನ ಮಾದರಿಯಲ್ಲೇ ಮುಂದುವರಿಯುತ್ತೇವೆ ಎಂದುಕೊಳ್ಳುವುದಾದರೆ, ನಾವು ಅಧಿಕಾರಿಗಳು ಜೆಸಿಓಗಳು, ಎನ್‌ಸಿಓಗಳು ಹಾಗೂ ಓಆರ್‌ಗಳ ಅಗತ್ಯವನ್ನ ಅರ್ಥ ಮಾಡಿಕೊಳ್ಳಬಹುದು. ಇದರ ಆಧಾರದಲ್ಲಿ ವೇಸ್ಟೇಜ್‌ (ಎಲ್‌ಎಂಸಿ, ರಿಟೈರ್ಮೆಂಟ್‌ ಅಥವಾ ಇನ್ನು ಬೇರೇನಾದರೂ) ಅನ್ನುವ ವಿಚಾರವನ್ನೂ ಗಮನಿಸಬೇಕಾಗಿದೆ. ಪ್ರೊಮೋಷನ್‌ ಅಥವಾ ಬೇರೆ ವಿಧಾನದ ಮೂಲಕ ಅಧಿಕಾರಿಗಳನ್ನು ಒಂದು ರಾಂಕಿನಿಂದ ಇನ್ನೊಂದಕ್ಕೆ ನಿಯೋಜಿಸುವುದರಿಂದ ಖಾಲಿ ಸ್ಥಾನಕ್ಕೆ ನಿಯೋಜನೆ ಹೇಗೆ ಎನ್ನುವುದಕ್ಕೂ ಉತ್ತರ ಕಂಡುಕೊಳ್ಳಬೇಕಿದೆ. ಒಂದು ಸಲ ಸೇನಾ ವಿನ್ಯಾಸ ಹಾಗೂ ಈ ಪ್ರೊಮೋಷನ್‌ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಂಡ ಬಳಿಕ ನಾವು ಲೆಕ್ಕಾಚಾರ ನಡೆಸಿ, ನಾಲಕ್ಕು ವರ್ಷಗಳ ಬಳಿಕ ಸೇನೆಗೆ ನಿಯೋಜಿಸಬೇಕಾದ ಸೈನಿಕರ ಸಂಖ್ಯೆಯನ್ನು ಅರ್ಥ ಮಾಡಿಕೊಳ್ಳಬಹುದು. ಇದನ್ನು ವಾಸ್ತವಿಕ ಅಂಕೆ ಸಂಖ್ಯೆಗಳೊಡನೆ ಒಂದು ಬಾರಿ ಹೋಲಿಸಿ ನೋಡಿದಾಗ ನಮಗೆ ವಸ್ತು ಸ್ಥಿತಿ ಏನು ಅನ್ನುವುದು ಅರಿವಿಗೆ ಬರುತ್ತದೆ. ಆದ್ದರಿಂದ ಅಗ್ನಿಪಥ್‌ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸುವ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಆದರೆ ಇನ್ನೊಂದೆಡೆ ನಿವೃತ್ತ ಬ್ರಿಗೇಡಿಯರ್‌ ಪ್ರದೀಪ್‌ ಶರ್ಮಾ ಅವರು ಭಾರತೀಯ ಸೇನಾಪಡೆಗೆ ಸೇರಲು ಅತಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ನಮ್ಮ ಯುವ ಜನರು ಯಾವ ಉದ್ಯೋಗಕ್ಕಾದರೂ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅದು ಯಾವ ಉದ್ಯೋಗವೇ ಆಗಿರಲಿ, ಪೊಲೀಸ್‌ ಆಗಲಿ, ರೈಲ್ವೇ ಆಗಿರಲಿ ಅಥವಾ ಇನ್ನೇನೇ ಆಗಿರಲಿ, ಆಕಾಂಕ್ಷಿಗಳು ಸಾಕಷ್ಟಿದ್ದಾರೆ ಎಂದಿದ್ದಾರೆ.

ಎರಡನೆಯದಾಗಿ, ಅತಿಯಾಗಿ ಪದೇ ಪದೇ ಜಾಹೀರಾತು ನೀಡುತ್ತಿರುವ ಸೇನಾ ಪಡೆಗಳ ಪಿಂಚಣಿ ಬೊಕ್ಕಸಕ್ಕೆ ಹೊರೆ ಆಗುತ್ತಿದೆ ಅನ್ನುವುದು ಅತ್ಯಂತ ಸಮೀಪ ದೃಷ್ಟಿಯ ವಿಚಾರವಾಗಿದೆ ಅನ್ನುತ್ತಾರೆ ಪ್ರದೀಪ್‌ ಶರ್ಮಾ.

ವಿವಿಧ ಯೂನಿಯನ್ನುಗಳು ಹಾಗೂ ಅಸೋಸಿಯೇಷನ್ನುಗಳು ಪ್ರತಿಭಟನೆಗೆ ಇಳಿದುಬಿಡುತ್ತವಾದ್ದರಿಂದ ಭಾರತ ಸರ್ಕಾರ ಯಾವ ಕಾರಣಕ್ಕೂ ಸೈನಿಕರನ್ನು ಕಡಿತಗೊಳಿಸುವುದಾಗಲೀ, ಸೇನಾಪಡೆಗಳಿಂದ ಏನನ್ನಾದರೂ ಬೇಡ ಎಂದು ನಿರ್ಧರಿಸುವುದಾಗಲಿ ಸಾಧ್ಯವಿಲ್ಲ. ಆದರೆ ಈ ಸಂಪೂರ್ಣ ಚರ್ಚೆಯೇ ಕೇವಲ ಉದ್ಯೋಗಗಳು ಹಾಗೂ ಯುವ ಜನತೆಯ ಮುಂದಿನ ಭವಿಷ್ಯ ಎಂಬ ವಿಚಾರದ ಸುತ್ತಷ್ಟೇ ಗಿರಕಿ ಹೊಡೆಯುತ್ತಿದೆ ಬಿಟ್ಟರೆ, ಈ ಯೋಜನೆಯಿಂದ ಸೇನೆಯ ಕಾರ್ಯನಿರ್ವಹಣೆ ಮೇಲಾಗುವ ಪರಿಣಾಮದ ಕುರಿತು ಯಾವ ಸೂಕ್ತ ಚರ್ಚೆಗಳೂ ನಡೆದಿಲ್ಲ.
 

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com