ಬಿಹಾರ ಸಿಎಂ ನಿತೀಶ್ ಕುಮಾರ್ 2025ರಲ್ಲಿ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸುತ್ತಾರೆ ಎಂದು ಭಾವಿಸಿದ್ದೆವು: ಸುಶಿಲ್ ಮೋದಿ

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ರಾಜಕೀಯ ಲೆಕ್ಕಾಚಾರ, ಯೋಜನೆಗಳನ್ನು ಗ್ರಹಿಸುವಲ್ಲಿ ಬಿಜೆಪಿ ಸೋತಿದೆ ಎಂದು ಒಪ್ಪಿಕೊಂಡಿರುವ ಬಿಜೆಪಿ, ಜೆಡಿಯು ನಾಯಕ 2025ರ ಹೊತ್ತಿಗೆ ಚುನಾವಣಾ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿತ್ತು.
ಸುಶಿಲ್ ಕುಮಾರ್ ಮೋದಿ
ಸುಶಿಲ್ ಕುಮಾರ್ ಮೋದಿ

ನವದೆಹಲಿ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ರಾಜಕೀಯ ಲೆಕ್ಕಾಚಾರ, ಯೋಜನೆಗಳನ್ನು ಗ್ರಹಿಸುವಲ್ಲಿ ಬಿಜೆಪಿ ಸೋತಿದೆ ಎಂದು ಒಪ್ಪಿಕೊಂಡಿರುವ ಬಿಜೆಪಿ, ಜೆಡಿಯು ನಾಯಕ 2025ರ ಹೊತ್ತಿಗೆ ಚುನಾವಣಾ ರಾಜಕೀಯದಿಂದ ಗೌರವಯುತವಾಗಿ ನಿರ್ಗಮಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ಅವರ ಯೋಜನೆ ಬೇರೆಯದೇ ಆಗಿತ್ತು ಎಂದು ಹೇಳುತ್ತಾರೆ ಮಾಜಿ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ.

2025ರ ಹೊತ್ತಿಗೆ ನಿತೀಶ್ ಕುಮಾರ್ ಅವರಿಗೆ 75 ವರ್ಷ ತುಂಬುತ್ತದೆ, ಆಗ ಅವರು ಚುನಾವಣಾ ರಾಜಕೀಯದಿಂದ ನಿರ್ಗಮಿಸುತ್ತಾರೆ ಎಂದು ನಾವೆಲ್ಲಾ ಭಾವಿಸಿದ್ದೆವು. ವಿರೋಧ ಪಕ್ಷಗಳ ಜೊತೆ ಕೈಜೋಡಿಸುತ್ತಾರೆ ಎಂದು ನಾವು ಭಾವಿಸಿರಲಿಲ್ಲ ಎಂದು ಮೋದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ವಾರ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿಕೊಂಡರು. ಆರ್ ಜೆಡಿ ಮತ್ತು ಇತರ ಪಕ್ಷಗಳ ಜೊತೆ ಸೇರಿಕೊಂಡು ಬಿಹಾರದಲ್ಲಿ ಈಗ ಮಹಾಘಟಬಂಧನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ತಿಂಗಳ ಹಿಂದೆ ನಿತೀಶ್ ಕುಮಾರ್ ಅವರ ನಿಕಟವರ್ತಿ ಕೇಂದ್ರ ಸಚಿವರೊಬ್ಬರನ್ನು ಭೇಟಿ ಮಾಡಿ ಉಪ ರಾಷ್ಟ್ರಪತಿ ಮಾಡಬೇಕೆಂಬ ಪ್ರಸ್ತಾವನೆಯೊಂದಿಗೆ ಬಂದಿದ್ದರು ಎಂದು ಕೂಡ ಸಂದರ್ಶನದಲ್ಲಿ ಸುಶಿಲ್ ಕುಮಾರ್ ಮೋದಿ ಹೇಳುತ್ತಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಆದರೆ ಈ ಸುದ್ದಿಯನ್ನು ಸಿಎಂ ನಿತೀಶ್ ಕುಮಾರ್ ನಿರಾಕರಿಸಿದ್ದರು. ಅದು ಸುಳ್ಳು ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುಶಿಲ್ ಕುಮಾರ್ ಮೋದಿ, ಖಂಡಿತಾ ಅವರು ಈಗ ಆ ಸುದ್ದಿಯನ್ನು ಒಪ್ಪುವುದಿಲ್ಲ, ಆದರೆ ನಾನು ಹೇಳುತ್ತಿರುವುದು ಸತ್ಯ ಎಂದಿದ್ದಾರೆ.

ಮಾಜಿ ಜೆಡಿಯು ನಾಯಕ ಆರ್ ಸಿಪಿ ಸಿಂಗ್ ಮೂಲಕ ಬಿಹಾರದಲ್ಲಿ ಮಹಾರಾಷ್ಟ್ರ ಮಾದರಿ ಸರ್ಕಾರವನ್ನು ತರಲು ಪ್ರಯತ್ನಿಸಿತ್ತು ಎಂಬ ಆರೋಪವನ್ನು ತಳ್ಳಿಹಾಕಿರುವ ಮೋದಿ, ಈ ಎರಡು ರಾಜ್ಯಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಶಿವಸೇನೆ ಬಿಜೆಪಿಯ ಮೈತ್ರಿಕೂಟದ ಪಾಲುದಾರನಲ್ಲ ಮತ್ತು ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಮಹಾರಾಷ್ಟ್ರ ಸರ್ಕಾರದಲ್ಲಿ ಉಸಿರುಗಟ್ಟಿದ ಭಾವನೆಯಿಂದ ಹೊರನಡೆದರು. ಜೆಡಿಯು ನಮ್ಮ ಮೈತ್ರಿ ಪಾಲುದಾರ ನಾವು ಮೈತ್ರಿ ಧರ್ಮಕ್ಕೆ ಬದ್ಧರಾಗಿದ್ದೆವು ಎಂದಿದ್ದಾರೆ.

ನಿತೀಶ್ ಅವರ ಒಪ್ಪಿಗೆಯಿಲ್ಲದೆ ಬಿಜೆಪಿ ಆರ್‌ಸಿಪಿ ಸಿಂಗ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಿದೆ ಎಂಬ ಜೆಡಿಯು ಹೇಳಿಕೆಯನ್ನು ಪ್ರಧಾನಿ ಮೋದಿ ತಳ್ಳಿಹಾಕಿದ್ದರು. “ಕೇಂದ್ರ ಸಚಿವರನ್ನು ಹೆಸರಿಸುವುದು ನಿತೀಶ್ ಅವರ ವಿವೇಚನೆಯಾಗಿದೆ. ಈಗ ಒಂದು ವರ್ಷದ ನಂತರ, ಸಿಂಗ್ ಮೂಲಕ ಬಿಜೆಪಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು. 

ಸುಶಿಲ್ ಕುಮಾರ್ ಮೋದಿ ಜೊತೆ ನಡೆಸಿದ ಸಂದರ್ಶನದ ಭಾಗ ಇಲ್ಲಿದೆ: 
ಬಿಹಾರ ಮಹಾಮೈತ್ರಿ ಉಳಿಯುತ್ತಾ?
RJD ಮತ್ತು JD (U) ನಡುವೆ ಅಂತರ್ಗತ ಅಪನಂಬಿಕೆ ಇರುವುದರಿಂದ ಇದು 2024ರ ನಂತರ ಮಹಾಘಟಬಂಧನ ಮಹಾಮೈತ್ರಿ ಮುಂದುವರಿಯುವುದಿಲ್ಲ. ಲಾಲು ಪ್ರಸಾದ್ ಯಾದವ್ ನಿತೀಶ್ ಅವರನ್ನು ಎಂದಿಗೂ ನಂಬಲಿಲ್ಲ. ಎರಡೂ ಪಕ್ಷಗಳು ಈಗ ಪರಸ್ಪರ ಒಡೆಯಲು ನೋಡುತ್ತಿವೆ.

ಹಾಗಾದರೆ ಇದು ಲಾಲು ವರ್ಸಸ್ ನಿತೀಶ್ ಆಗಲಿದೆಯೇ?
ನಮ್ಮ ಮೈತ್ರಿಯಲ್ಲಿ, ನಾವು ಯಾವುದೇ ವರ್ಗಾವಣೆ ಅಥವಾ ಪೋಸ್ಟಿಂಗ್‌ಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಲಾಲು ಯಾದವ್ ಎಲ್ಲದರಲ್ಲೂ ಮೇಲುಗೈ ಬಯಸಿದ್ದಾರೆ.

ನಿತೀಶ್ ಕುಮಾರ್ ಹೇಳಿಕೊಂಡಂತೆ ನೀವು ಇಲ್ಲದ ಕಾರಣ ಬಿಜೆಪಿ ಜೊತೆಗಿನ ಮೈತ್ರಿ ವಿಫಲವಾಗಿದೆಯೇ?
ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಯೂ ಅನಿವಾರ್ಯವಲ್ಲ. ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಅಮಿತ್ ಶಾ ಅವರನ್ನು ಪಾಟ್ನಾದಲ್ಲಿ ಒಂದೆರಡು ಬಾರಿ ಭೇಟಿ ಮಾಡಿ ಸಮಸ್ಯೆಗಳ ಇತ್ಯರ್ಥಕ್ಕೆ ಬಂದಿದ್ದರು.

ಆಮೇಲೆ ಯಾಕೆ ಹೊರನಡೆದರು?
ನಿತೀಶ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ಪರಿಗಣಿಸದ್ದಕ್ಕೆ ಅಸಮಾಧಾನಗೊಂಡಿದ್ದರೂ, ಅವರ ನಿರ್ಗಮನಕ್ಕೆ ಮುಖ್ಯ ಕಾರಣ ಅವರು ರಾಜಕೀಯದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಆಕಾಂಕ್ಷೆ. 

ಹಿಂದುಳಿದ ಸಮುದಾಯಗಳು ಈಗ ಬಿಜೆಪಿಯನ್ನು ಬೆಂಬಲಿಸುತ್ತವೆ ಎಂದು ಅನಿಸುತ್ತಿದೆಯೇ? 
ಸಮುದಾಯಗಳಾದ್ಯಂತ ನಿತೀಶ್‌ಗಿಂತ ಪ್ರಧಾನಿ ಮೋದಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ನಿತೀಶ್ ಅವರ ತವರು ನಳಂದಾದಲ್ಲಿಯೂ ಅವರಿಗೆ ಬೆಂಬಲವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com