
ಭೀಮ್ ಆರ್ಮಿ ಮುಖ್ಯಸ್ಥ
ಜೋಧ್ ಪುರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಜೋಧ್ ಪುರ ವಿಮಾನ ನಿಲ್ದಾಣದಲ್ಲಿ 3 ಗಂಟೆಗಳ ಕಾಲ ಬಂಧಿಸಿಡಲಾಗಿತ್ತು.
ರಾಜಸ್ಥಾನದಲ್ಲಿ ಶಾಲಾ ಶಿಕ್ಷಕರ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದ ದಲಿತ ಬಾಲಕನ ಕುಟುಂಬವನ್ನು ಭೇಟಿ ಮಾಡುವುದಕ್ಕಾಗಿ ಚಂದ್ರಶೇಖರ್ ಆಜಾದ್ ಅವರು ಜಲೋರ್ ಗೆ ತೆರಳುತ್ತಿದ್ದರು.
ವಿಮಾನ ನಿಲ್ದಾಣದಿಂದ 150 ಕಿ.ಮೀ ದೂರವಿರುವ ಜಲೋರ್ ಗೆ ಹೋಗುವುದಿಲ್ಲ ಎಂಬ ಭರವಸೆ ನೀಡಿದ ಬಳಿಕವಷ್ಟೇ ಅವರನ್ನು ಸಂಜೆ 7:30 ರ ವೇಳೆಗೆ ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿ ನೀಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಪತ್ರಕರ್ತರೊಂದಿಗೆ ಮಾತನಾಡಿದ ಚಂದ್ರಶೇಖರ್, ನಾನು ಕುಟುಂಬ ಸದಸ್ಯರನ್ನು ಭೇಟಿ ಮಾಡದೇ ವಾಪಸ್ಸಾಗುವುದಿಲ್ಲ ಎಂದು ಹೇಳಿದರು.
ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಸುರಾನ ಗ್ರಾಮದ ಖಾಸಗಿ ಶಾಲೆಯಲ್ಲಿ ಇಂದ್ರ ಮೇಘ್ ವಾಲ್ ಎಂಬ ವಿದ್ಯಾರ್ಥಿ ನೀರಿನ ಮಡಿಕೆಯನ್ನು ಮುಟ್ಟಿದ ಎಂಬ ಕಾರಣಕ್ಕಾಗಿ ಆತನನ್ನು ಶಿಕ್ಷಕರೇ ಥಳಿಸಿದ್ದರು. ಥಳಿತದ ತೀವ್ರತೆಗೆ ಗಾಯಗೊಂಡ ವಿದ್ಯಾರ್ಥಿ ಅಹ್ಮದಾಬಾದ್ ನ ಆಸ್ಪತ್ರೆಯಲ್ಲಿ ಆ.13 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.