ನಕಲಿ, ದೇಶ ವಿರೋಧಿ ವಿಷಯ ಪ್ರಸಾರ: ಏಳು ಭಾರತೀಯ, ಒಂದು ಪಾಕ್ ಯೂಟ್ಯೂಬ್ ಚಾನೆಲ್ ಗೆ ಕೇಂದ್ರ ನಿರ್ಬಂಧ
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಒಂದು ಸೇರಿದಂತೆ 8 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
Published: 18th August 2022 01:15 PM | Last Updated: 18th August 2022 02:41 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಒಂದು ಸೇರಿದಂತೆ 8 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದವು ಹಾಗೂ 85.73 ಲಕ್ಷ ಚಂದಾದಾರರನ್ನು ಹೊಂದಿವೆ. ಇವುಗಳು ವಿಚಾರಗಳನ್ನು ಹೇಳುವ ಮೂಲಕ ಹಣ ಗಳಿಸುತ್ತಿದ್ದವು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಮಾಹಿತಿ ತಂತ್ರಜ್ಞಾನ ನಿಯಮಗಳು-2021ರ ಅಡಿಯಲ್ಲಿ ಇವುಗಳನ್ನು ನಿರ್ಬಂಧಿಸಲಾಗಿದ್ದು, ಈ ಚಾನೆಲ್‌ಗಳಲ್ಲಿ ಏಳು ಭಾರತೀಯ ಯೂಟ್ಯೂಬ್ ಸುದ್ದಿ ಚಾನಲ್‌ಗಳು ಸೇರಿವೆ.
ನಿರ್ಬಂಧಕ್ಕೊಳಗಾದ ಚಾನೆಲ್‌ಗಳಿವು
Loktantra TV, U&V TV, AM Razvi, Gouravshali Pawan Mithilanchal, SeeTop5TH, Sarkari Update ಮತ್ತು Sab Kuch Dekho ಹಾಗು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ News ki Dunya ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಇವುಗಳು ದೇಶಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದವ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: 18 ಭಾರತೀಯ, ನಾಲ್ಕು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕೇಂದ್ರ ನಿರ್ಬಂಧ
ಸದ್ಯ ನಿರ್ಬಂಧಿಸಲಾಗಿರುವ ಯೂಟ್ಯೂಬ್ ಚಾನೆಲ್‌ಗಳು ಭಾರತ ಸರ್ಕಾರದಿಂದ ಧಾರ್ಮಿಕ ಕಟ್ಟಡಗಳನ್ನು ಕೆಡವುವುದು, ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧ, ಭಾರತದಲ್ಲಿ ಧಾರ್ಮಿಕ ಯುದ್ಧದ ಘೋಷಣೆ ಮುಂತಾದ ಸುಳ್ಳು ಹೇಳಿಕೆಗಳನ್ನು ನೀಡಿವೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
'ಇಂತಹ ವಿಚಾರಗಳನ್ನು ಪ್ರಸಾರ ಮಾಡುವುದರಿಂದ ಇವು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕಂಡುಬಂದಿದೆ' ಎಂದು ಅದು ಹೇಳಿದೆ.
'ಭಾರತೀಯ ಸಶಸ್ತ್ರ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ವಿವಿಧ ವಿಚಾರಗಳ ಬಗ್ಗೆ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲು ಯೂಟ್ಯೂಬ್ ಚಾನೆಲ್‌ಗಳನ್ನು ಬಳಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ಈ ವಿಚಾರಗಳು ಸೂಕ್ಷ್ಮ ಮತ್ತು ಸಂಪೂರ್ಣ ಸುಳ್ಳು ಎಂಬುದನ್ನು ಗಮನಿಸಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪಾಕ್ ಮೂಲದ 35 ಯೂಟ್ಯೂಬ್ ಚಾನೆಲ್, 7 ಸಾಮಾಜಿಕ ಮಾಧ್ಯಮ ಖಾತೆಗೆ ಕೇಂದ್ರ ನಿರ್ಬಂಧ
ನಕಲಿ ಸುದ್ದಿಗಳನ್ನು ಹರಡುತ್ತಿರುವುದಕ್ಕಾಗಿ ಜುಲೈನಲ್ಲಿ ಕೂಡ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು 2021-22ರ ಅವಧಿಯಲ್ಲಿ 94 ಯೂಟ್ಯೂಬ್ ಚಾನೆಲ್‌ಗಳು, 19 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 747 ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್‌ಗಳನ್ನು (URLs) ನಕಲಿ ಸುದ್ದಿಗಳನ್ನು ಹರಡುವುದಕ್ಕಾಗಿ ನಿರ್ಬಂಧಿಸಿತ್ತು.