'ಬಿಜೆಪಿ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದ ಗತಿ ಭಾರತಕ್ಕೂ ಬರಲಿದೆ': ಗೆಹ್ಲೋಟ್
ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಪ್ರಯತ್ನಿಸಿದರೆ ಭಾರತ ಸಹ ಪಾಕಿಸ್ತಾನದ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಹಿರಿಯ...
Published: 18th August 2022 05:21 PM | Last Updated: 18th August 2022 05:21 PM | A+A A-

ಅಶೋಕ್ ಗೆಹ್ಲೋಟ್
ಅಹಮದಾಬಾದ್: ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶವನ್ನು 'ಹಿಂದೂ ರಾಷ್ಟ್ರ'ವನ್ನಾಗಿ ಮಾಡಲು ಪ್ರಯತ್ನಿಸಿದರೆ ಭಾರತ ಸಹ ಪಾಕಿಸ್ತಾನದ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಗುರುವಾರ ಎಚ್ಚರಿಸಿದ್ದಾರೆ.
ಬಿಜೆಪಿಯು ಕೇವಲ ಧರ್ಮದ ಆಧಾರದ ಮೇಲೆ ಮತ್ತು ಧಾರ್ಮಿಕ ಸಂಘರ್ಷಗಳನ್ನು ಸೃಷ್ಟಿಸಿ ಚುನಾವಣೆ ಗೆಲ್ಲುತ್ತಿದೆ ಎಂದು ಗುಜರಾತ್ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿರುವ ಗೆಹ್ಲೋಟ್ ಅವರು ಆರೋಪಿಸಿದ್ದಾರೆ.
ರಾಜಸ್ಥಾನ ಸಿಎಂ ಗೆಹ್ಲೋಟ್ ಅವರು ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಯನ್ನು ಪರಿಶೀಲಿಸಲು ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.
ತಮ್ಮ ಭೇಟಿಯ ಕೊನೆಯ ದಿನವಾದ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ''ದೇಶಾದ್ಯಂತ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಸೇರಿದಂತೆ ಅನೇಕರನ್ನು ಜೈಲಿಗೆ ಹಾಕಲಾಗಿದೆ. ಬಿಜೆಪಿ ಫ್ಯಾಸಿಸ್ಟ್, ಧರ್ಮದ ವಿಚಾರದಲ್ಲಿ ಚುನಾವಣೆ ಗೆಲ್ಲುತ್ತಿದೆ. ಬಿಜೆಪಿ ಯಾವುದೇ ಸಿದ್ಧಾಂತ, ನೀತಿ ಅಥವಾ ಆಡಳಿತ ಮಾದರಿಯನ್ನು ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
"ಧರ್ಮವನ್ನು ಆಧರಿಸಿದ ರಾಜಕೀಯವು ಎಲ್ಲಕ್ಕಿಂತ ಸುಲಭವಾಗಿದೆ ಮತ್ತು ಅಡಾಲ್ಫ್ ಹಿಟ್ಲರ್ ಕೂಡ ಇದನ್ನೇ ಅಳವಡಿಸಿಕೊಂಡಿದ್ದ" ಎಂದು ರಾಜಸ್ಥಾನ ಸಿಎಂ ಹೇಳಿದ್ದಾರೆ.
"ಗುಜರಾತ್ ಮಾದರಿ" ಹೆಸರಿನಲ್ಲಿ ಬಿಜೆಪಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.