ಕೊಡಗಿನಲ್ಲಿ ನೆರೆ ಹಾನಿ ವೀಕ್ಷಣೆಗೆ ಬಿಜೆಪಿ ಪ್ರತಿಭಟನೆ ಬಿಸಿ, ಕಾರಿಗೆ ಮೊಟ್ಟೆ ಎಸೆತ; ಸರ್ಕಾರವೇ ಹಣ ನೀಡಿ ಜನರನ್ನು ಕರೆಸಿದೆ ಎಂದ ಸಿದ್ದರಾಮಯ್ಯ

ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದು ಹೇಡಿಗಳ ಕೆಲಸ. ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಡಿ.ಸಿ ಕಚೇರಿ ತಡೆಗೋಡೆ ಕಳಪೆಯಾಗಿದೆ. ಇದು ನನಗೆ ಗೊತ್ತಾಗಬಾರದು ಎಂದೇ ಪ್ರತಿಭಟನೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊಡಗಿನಲ್ಲಿ ಸಿದ್ದರಾಮಯ್ಯ
ಕೊಡಗಿನಲ್ಲಿ ಸಿದ್ದರಾಮಯ್ಯ
Updated on

ಮಡಿಕೇರಿ: ಕೊಡಗಿನಲ್ಲಿ ನೆರೆ ಹಾನಿ ವೀಕ್ಷಣೆ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಕಾಂಗ್ರೆಸ್ ನಾಯಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು. ಪ್ರವಾಹ ಪೀಡಿತ ಪ್ರದೇಶಗಳಾದ ರಾಮಕೊಲ್ಲಿ, 2ನೇ ಮೊಣ್ಣಂಗೇರಿ ಮತ್ತು ಕೊಯನಾಡು ಪ್ರದೇಶಗಳಿಗೆ ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದು ಹೇಡಿಗಳ ಕೆಲಸ. ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಡಿ.ಸಿ ಕಚೇರಿ ತಡೆಗೋಡೆ ಕಳಪೆಯಾಗಿದೆ. ಇದು ನನಗೆ ಗೊತ್ತಾಗಬಾರದು ಎಂದೇ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ಸತ್ತಿದೆ. ಹಾಗಾಗಿ ಹಣ ಕೊಟ್ಟು ಜನರನ್ನು ಕರೆದುಕೊಂಡು ಬಂದು ಘೋಷಣೆ ಕೂಗಿಸಿದ್ದಾರೆ ಎಂದು ತಿಳಿಸಿದರು‌.

'ರಾಜ್ಯಾದ್ಯಂತ ನಿರಂತರ ಮಳೆಯಿಂದಾಗಿ 5.23 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ಹಾನಿಯಾಗಿದೆ. ಆದರೆ, ರಾಜ್ಯದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆದಿಲ್ಲ. ಕೊಡಗಿನ ಹಲವಾರು ಹಾನಿಗೊಳಗಾದ ಪ್ರದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. 2018 ರ ದುರಂತದ ಸಂತ್ರಸ್ತರಿಗೆ ಇನ್ನೂ ಸಂಪೂರ್ಣ ಪರಿಹಾರ ಸಿಕ್ಕಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು.

ಕೊಯನಾಡು ಸರಕಾರಿ ಶಾಲೆಯಲ್ಲಿ ಭೂಕುಸಿತದಿಂದ ಆಗಿರುವ ಹಾನಿಯನ್ನು ವೀಕ್ಷಿಸಿದ ಅವರು, ''ಇದೇ ಮಾರ್ಗದಲ್ಲಿ ಹಾದು ಹೋಗಿದ್ದರೂ ಮುಖ್ಯಮಂತ್ರಿಗಳು ಈ ಸ್ಥಳಕ್ಕೆ ಭೇಟಿ ನೀಡಿಲ್ಲ. ಮಡಿಕೇರಿಯ ಡಿಸಿ ಕಚೇರಿಯಲ್ಲಿನ ತಡೆಗೋಡೆ ಕಳಪೆ ಗುಣಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿದ್ದು, ಭ್ರಷ್ಟ ಕಾಮಗಾರಿಗೆ ಬಿಜೆಪಿ ಶಾಸಕರೇ ಕಾರಣ. ಇದು 40% ಕಮಿಷನ್ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಸರ್ಕಾರವೇ ಹಣ ನೀಡಿ ಜನರನ್ನು ಕರೆಸಿದೆ, ಪ್ರತಿಭಟನೆ ಹೇಡಿಗಳ ಕೆಲಸ: ಸಿದ್ದು ಕಿಡಿ
ತಮ್ಮ ಭೇಟಿಯ ವೇಳೆ ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರವೇ ಹಣ ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಈ ಎಲ್ಲಾ ಪ್ರತಿಭಟನೆಗಳು ಭ್ರಷ್ಟ ಮತ್ತು ಕಳಪೆ ಗುಣಮಟ್ಟದ ಪರಿಹಾರ ಕಾಮಗಾರಿಗಳನ್ನು ಮುಚ್ಚಿಹಾಕುವ ಯತ್ನವಾಗಿವೆ. ಟಿಪ್ಪು ಜಯಂತಿಯನ್ನು ಹಲವಾರು ವರ್ಷಗಳಿಂದ ಆಚರಿಸಲಾಗುತ್ತಿದ್ದು, ಸಮಸ್ಯೆಯ ನಂತರ ಹಲವು ಬಾರಿ ಕೊಡಗಿಗೆ ಭೇಟಿ ನೀಡಿದ್ದೇನೆ. ಆಗ ಎಲ್ಲಾ ಬಿಜೆಪಿ ಕಾರ್ಯಕರ್ತರು ಸತ್ತಿದ್ದರಾ? ಎಂದು ಪ್ರಶ್ನಿಸಿದರು. 

ಚುನಾಯಿತ ಜನಪ್ರತಿನಿಧಿಗಳು ಗುತ್ತಿಗೆದಾರರೊಂದಿಗೆ ಸೇರಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ. 'ಡಿಸಿ ಕಚೇರಿ ಪಕ್ಕದಲ್ಲಿರುವ ತಡೆಗೋಡೆಯ ಭ್ರಷ್ಟ ಕಾಮಗಾರಿಯನ್ನು ಪರಿಶೀಲಿಸದಂತೆ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಡೆದಿರುವ ಭ್ರಷ್ಟ ಪರಿಹಾರ ಕಾಮಗಾರಿಗಳ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ, ಮುಂಬರುವ ಚುನಾವಣೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. 

ಅಂತೆಯೇ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದರು.

ನೆರೆ ಹಾನಿ ವೀಕ್ಷಣೆ ವೇಳೆ ಬಿಜೆಪಿ ಪ್ರತಿಭಟನೆ
ಕೊಡಗಿನಲ್ಲಿ ನೆರೆ ಹಾನಿ ವೀಕ್ಷಣೆಗೆ ಆಗಮಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಭಟನೆ ಬಿಸಿ ತಾಗಿದ್ದು, ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾರಿಗೆ ಅಡ್ಡಬಂದ ಬಿಜೆಪಿ ಕಾರ್ಯಕರ್ತರು ಕಾರಿನತ್ತ ಮೊಟ್ಟೆ ಎಸೆದು ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ಅವರ ಕಾರಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಖಂಡಿಸಿದ ಕಾಂಗ್ರೆಸ್ ಕಾರ್ಯಕರ್ತರು ವೃತ್ತದ ಮತ್ತೊಂದು ಪಾರ್ಶ್ವದಲ್ಲಿ ಪ್ರತಿಭಟನೆಗೆ ಕುಳಿತರು.‌ ಸುಮಾರು ಅರ್ಧ ಗಂಟೆಗಳ ಕಾಲ ಉಭಯ ಕಾರ್ಯಕರ್ತರು ಒಂದೇ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಉಭಯ ಪಕ್ಷದ ಕಾರ್ಯಕರ್ತರ ಮನವೊಲಿಸಿ ವಾಪಸ್ ಕಳುಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com