ಚುನಾವಣೆಗೆ ಮೊದಲೊಂದು ಧರ್ಮ, ನಂತರ ಇನ್ನೊಂದು ಧರ್ಮವೇ? ಅಧಿಕಾರದಲ್ಲಿದ್ದಾಗ ವಿಭಜನೆ, ವಿಪಕ್ಷದಲ್ಲಿದ್ದಾಗ ವೀರಶೈವರ ಭಜನೆ!
ಬೆಂಗಳೂರು: ಧರ್ಮ ಎಂಬ ಜೇನು ಗೂಡಿಗೆ ಕಾಂಗ್ರೆಸ್ ಈ ಹಿಂದೆ ಕೈ ಹಾಕಿ ಸುಟ್ಟುಹೋಗಿತ್ತು. ವೀರಶೈವ, ಲಿಂಗಾಯತ, ಧರ್ಮ, ಜಾತಿ ಎಂಬ ಕಂದಕ ಸೃಷ್ಟಿಸಲು ವಿಫಲ ಯತ್ನ ನಡೆಸಿ ಅಧಿಕಾರ ಕಳೆದುಕೊಂಡಿತು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ವೀರಶೈವ, ಲಿಂಗಾಯತ, ಧರ್ಮ, ಜಾತಿ ಎಂಬ ಕಂದಕ ಸೃಷ್ಟಿಸಲು ವಿಫಲ ಯತ್ನ ನಡೆಸಿ ಅಧಿಕಾರ ಕಳೆದುಕೊಂಡಿತು, ಅದೇ ಕಾಂಗ್ರೆಸ್ ಈಗ ಲಿಂಗಾಯತ ಮತ ಬೇಟೆ ಎಂಬ ಪ್ರಹಸನ ಮಾಡುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಟೀಕಿಸಿದೆ.
ಮಾನ್ಯ ಎಂ ಬಿ ಪಾಟೀಲ್ ಅವರೇ, ನಿಮ್ಮ ಶಿಷ್ಯವೃಂದ ವೀರಶೈವ ಪದ ಬಳಕೆಯೇ ಬೇಡ ಎಂದಿದ್ದು ಮರೆತು ಹೋಯಿತೇ? ನೀವು ಪ್ರತ್ಯೇಕ ಧರ್ಮ ಸ್ಥಾಪಿಸಲು ಕುತಂತ್ರ ಮಾಡಿದ್ದು ಮರೆತು ಹೋಯಿತೇ? ಚುನಾವಣಾ ಸಂದರ್ಭದಲ್ಲಿ ಮತ್ತೆ ವೀರಶೈವ - ಲಿಂಗಾಯಿತ ಸಮುದಾಯದಲ್ಲಿ ಗೊಂದಲ ಮೂಡಿಸುವುದು ನಿಮ್ಮ ಉದ್ದೇಶವೇ?
ಪ್ರತ್ಯೇಕ ಲಿಂಗಾಯಿತ ಧರ್ಮದ ವಿಚಾರದಲ್ಲಿ ಚುನಾವಣೆಯ ನಂತರ ಮಠಾಧೀಶರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದ್ದರು. ಚುನಾವಣೆಗೆ ಮೊದಲೊಂದು ಧರ್ಮ, ಚುನಾವಣೆಯ ನಂತರ ಇನ್ನೊಂದು ಧರ್ಮವೇ ? ಅದೇ ಮಠಗಳಿಗೆ ಯಾವ ಮುಖ ಇಟ್ಟುಕೊಂಡು ಭೇಟಿ ನೀಡುತ್ತಿದ್ದೀರಿ? ಎಂದು ಬಿಜೆಪಿ ಪ್ರಶ್ನಿಸಿದೆ.
ಅಧಿಕಾರದಲ್ಲಿದ್ದಾಗ ವಿಭಜನೆ ಮಂತ್ರ! ವಿಪಕ್ಷದಲ್ಲಿದ್ದಾಗ ವೀರಶೈವರ ಭಜನೆ, ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ನಾಯಕರ ಬಣ್ಣ ಬಯಲಾಗುತ್ತಿದೆ! ಎಂದು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ