38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಅವಶೇಷ: ಆಪರೇಷನ್‌ ಮೇಘದೂತದಲ್ಲಿ ನಾಪತ್ತೆಯಾಗಿದ್ದ ಲ್ಯಾನ್ಸ್‌ ನಾಯಕ್‌ ಚಂದ್ರಶೇಖರ್‌!

ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದಾಗಲೇ, 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬರ ಅವಶೇಷ ಸಿಯಾಚಿನ್‍ನ 16,000 ಅಡಿ ಆಳದಲ್ಲಿ ಪತ್ತೆ ಆಗಿದೆ.
38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಅವಶೇಷ
38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಅವಶೇಷ

ಲೇಹ್:  ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದಾಗಲೇ, 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬರ ಅವಶೇಷ ಸಿಯಾಚಿನ್‍ನ 16,000 ಅಡಿ ಆಳದಲ್ಲಿ ಪತ್ತೆ ಆಗಿದೆ.

1984ರ ಮೇ 29ರಂದು ಸಿಯಾಚಿನ್‌ ಗಡಿಯಲ್ಲಿ ಹಿಮಪಾತದಿಂದ ಸಾವನ್ನಪ್ಪಿದ್ದ ಯೋಧ ಲ್ಯಾನ್ಸ್‌ ನಾಯಕ್‌ ಚಂದ್ರಶೇಖರ್‌ ಅವರ ಮೃತ ದೇಹದ ಪಳೆಯುಳಿಕೆ ಆ.13ರಂದು ಪತ್ತೆಯಾಗಿದೆ. ಬಂಕರ್‌ ಒಳಗೆ ಕೆಲ ಮೂಳೆಗಳು ಪತ್ತೆಯಾಗಿದ್ದು ಅದರೊಟ್ಟಿಗೆ ಚಂದ್ರಶೇಖರ್‌ ಅವರ ಸೇನೆಯ ಸಂಖ್ಯೆಯಿರುವ ಡಿಸ್ಕ್ ಕೂಡ ಸಿಕ್ಕಿದೆ. ಹೀಗಾಗಿ ಅದು 38 ವರ್ಷಗಳ ಹಿಂದೆ ಹುತಾತ್ಮರಾದ ಚಂದ್ರಶೇಖರ್‌ ಅವರದ್ದೇ ಮೂಳೆಗಳು ಎನ್ನುವುದು ದೃಢಪಟ್ಟಿದೆ.

ಈಗ ಆ ಪಳೆಯುಳಿಕೆಯನ್ನು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಅವರ ಮನೆಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರಶೇಖರ್‌ ಅವರ 65 ವರ್ಷದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು, ಪಳೆಯುಳಿಕೆಗಾಗಿ ಕಾಯಲಾರಂಭಿಸಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸುವುದಕ್ಕೂ ಸಿದ್ಧತೆಗಳು ನಡೆದಿವೆ. ಚಂದ್ರಶೇಖರ್‌ ಅವರು ಹುತಾತ್ಮರಾಗುವಾಗ ಹಿರಿಯ ಮಗಳು 9 ವರ್ಷದವಳಾಗಿದ್ದು, ಕಿರಿಯವಳು 4 ವರ್ಷದವಳಾಗಿದ್ದಳು ಎಂದು ತಿಳಿಸಲಾಗಿದೆ.

ಪಾಕ್‌ ಪಡೆಯು ದೃಷ್ಟಿ ನೆಟ್ಟಿದ್ದ ಸಿಯಾಚಿನ್‌ ಅನ್ನು ಉಳಿಸಿಕೊಳ್ಳಲೆಂದು 1984ರಲ್ಲಿ ನಡೆದ ಆಪರೇಷನ್‌ ಮೇಘದೂತದ ಭಾಗವಾಗಿ ಸಿಯಾಚಿನ್‌ 5965 ಕೇಂದ್ರವನ್ನು ರಕ್ಷಿಸಲು ಯೋಧರು ತೆರಳಿದ್ದರು. ಅದರಲ್ಲಿ ಚಂದ್ರಶೇಖರ್‌ ಕೂಡ ಒಬ್ಬರು. ಯೋಧರು ರಾತ್ರಿ ಮಲಗಿದ್ದ ಸಮಯದಲ್ಲಿ ಭಾರೀ ಹಿಮಪಾತ ಉಂಟಾಗಿತ್ತು. ಶಿಬಿರದಲ್ಲಿದ್ದ 18 ಯೋಧರು ಹುತಾತ್ಮರಾಗಿ, ಆ ಪೈಕಿ 13 ಮಂದಿಯ ಮೃತದೇಹಗಳು ಮಾತ್ರ ಪತ್ತೆಯಾಗಿತ್ತು. ಉಳಿದ ಐದು ಮಂದಿ ನಾಪತ್ತೆಯಾಗಿದ್ದರು. ನಾಪತ್ತೆ ಆದವರಲ್ಲಿ ಚಂದ್ರಶೇಖರ್ ಕೂಡ ಇದ್ದರು.

ನಾಪತ್ತೆ ಆದವರನ್ನು ಎಷ್ಟೇ ಹುಡುಕಿದರೂ ಅವರು ಸಿಕ್ಕಿರಲಿಲ್ಲ. ಇದೀಗ ಆ. 13ರಂದು ಸೈನಿಕರಿಗೆ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರ ಅಸ್ಥಿಪಂಜರದ ಅವಶೇಷಗಳು ಹಳೆಯ ಬಂಕರ್‌ನಲ್ಲಿ ಪತ್ತೆ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com