ಅನುಯಾಯಿಗಳಿದ್ದರೆ ಸ್ವಾಗತ, ಆದರೆ ಅಧಿಕೃತಕ್ಕಿಂತ ಹೆಚ್ಚು ಮಾತಾಡಿ ದಾರಿ ತಪ್ಪಿಸಬೇಡಿ: ಬಾಬಾ ರಾಮ್ ದೇವ್ ಗೆ ಹೈಕೋರ್ಟ್
ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧವಾಗಿ ಯಾರೂ ದಾರಿ ತಪ್ಪಿಸಬಾರದು ಎಂದು ದೆಹಲಿ ಹೈಕೋರ್ಟ್ ಪ್ರತಿಪಾದಿಸಿದ್ದು, "ನಿಮಗೆ ಅನುಯಾಯಿಗಳಿರುವುದು ಸ್ವಾಗತ ಆದರೆ ಅಧಿಕೃತವಾಗಿರುವುದಕ್ಕಿಂತ ಹೆಚ್ಚು ಹೇಳಿ ಜನರನ್ನು ದಾರಿತಪ್ಪಿಸುವಂತಿಲ್ಲ" ಎಂದು ಬಾಬಾ ರಾಮ್ ದೇವ್ ಗೆ ಹೇಳಿದೆ.
Published: 18th August 2022 02:19 AM | Last Updated: 18th August 2022 01:51 PM | A+A A-

ಬಾಬಾ ರಾಮ್ ದೇವ್
ನವದೆಹಲಿ: ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧವಾಗಿ ಯಾರೂ ದಾರಿ ತಪ್ಪಿಸಬಾರದು ಎಂದು ದೆಹಲಿ ಹೈಕೋರ್ಟ್ ಪ್ರತಿಪಾದಿಸಿದ್ದು, "ನಿಮಗೆ ಅನುಯಾಯಿಗಳಿರುವುದು ಸ್ವಾಗತ ಆದರೆ ಅಧಿಕೃತವಾಗಿರುವುದಕ್ಕಿಂತ ಹೆಚ್ಚು ಹೇಳಿ ಜನರನ್ನು ದಾರಿತಪ್ಪಿಸುವಂತಿಲ್ಲ" ಎಂದು ಬಾಬಾ ರಾಮ್ ದೇವ್ ಗೆ ಹೇಳಿದೆ.
ಕೋವಿಡ್-19 ಸೋಂಕಿಗೆ ಪಂತಂಜಲಿಯ ಕೊರೋನಿಲ್ ಔಷಧಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹಂಚುತ್ತಿದ್ದಕ್ಕೆ ಹಲವು ವೈದ್ಯ ಸಂಘಟನೆಗಳು ಬಾಬಾ ರಾಮ್ ದೇವ್ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅನೂಪ್ ಜೈರಾಮ್ ಭಂಭನಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ವೈದ್ಯದ ಪುರಾತನ ಪದ್ಧತಿಯಾದ ಆಯುರ್ವೇದಕ್ಕೆ ಇರುವ ಒಳ್ಳೆಯ ಖ್ಯಾತಿಯನ್ನು ಉಳಿಸುವುದೂ ತಮ್ಮ ಕಾಳಜಿಯಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪ್ರಾರಂಭದಿಂದಲೂ ನನ್ನ ಕಾಳಜಿ ಒಂದೇ, ನೀವು ಅನುಯಾಯಿಗಳನ್ನು ಹೊಂದುವುದಕ್ಕೆ ಸ್ವಾಗತವಿದೆ, ನಿಮ್ಮ ಶಿಷ್ಯರನ್ನು ಹೊಂದುವುದಕ್ಕೆ ಸ್ವಾಗತವಿದೆ. ನೀವು ಹೇಳಿದ್ದನ್ನೆಲ್ಲಾ ನಂಬುವಂತಹ ಜನರನ್ನು ಹೊಂದುವುದಕ್ಕೂ ಸ್ವಾಗತವಿದೆ. ಆದರೆ ದಯಮಾಡಿ ಅಧಿಕೃತವಾಗಿರುವುದಕ್ಕಿಂತಲೂ ಹೆಚ್ಚು ಹೇಳಿ ಸಾರ್ವಜನಿಕರನ್ನು ದಾರಿ ತಪ್ಪಿಸಬೇಡಿ ಎಂದು ನ್ಯಾಯಧೀಶರು ಬಾಬಾ ರಾಮ್ ದೇವ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಯೋಗ ಆಧ್ಯಾತ್ಮಿಕವೇ ಹೊರತು ಧಾರ್ಮಿಕವಲ್ಲ: ಬಾಬಾ ರಾಮದೇವ್
"ಕೋವಿಡ್-19 ಸೋಂಕಿಗೆ ಗುರಿಯಾದವರ ಪೈಕಿ ಹೆಚ್ಚಿನವರು ಅಲೋಪತಿ ವೈದ್ಯ ಪದ್ಧತಿಯ ಚಿಕಿತ್ಸೆಯಿಂದಲೇ ಸಾವನ್ನಪ್ಪುತ್ತಿದ್ದಾರೆ, ಆದರೆ ಕೊರೋನಿಲ್ ಸೋಂಕನ್ನು ಗುಣಪಡಿಸಬಲ್ಲದು" ಎಂದು ರಾಮ್ ದೇವ್ ಹೇಳಿದ್ದರೆಂದು ವೈದ್ಯರ ಸಂಘಗಳು ಆರೋಪಿಸಿದ್ದವು.
ಅರ್ಜಿದಾರರ ಪರ ವಾದ ಮಂಡಿಸಿದ ಅಖಿಲ್ ಸಿಬಲ್, ರಾಮ್ ದೇವ್ ಅವರು ಇತ್ತೀಚೆಗೂ ಕೊರೋನಾ ಸೋಂಕಿಗೆ ಕೊರೋನಿಲ್ ಔಷಧ ಎಂದು ಪ್ರಚಾರ ಮಾಡಿದ್ದರು. ಅಷ್ಟೇ ಅಲ್ಲದೇ ಕೊರೋನಾ ವೈರಸ್ ಗೆ ಲಸಿಕೆಗಳ ಅಸಮರ್ಥತೆಯ ಬಗ್ಗೆಯೂ ಮಾತನಾಡಿದ್ದರು ಎಂಬುದನ್ನು ಕೋರ್ಟ್ ಗೆ ಹೇಳಿದ್ದಾರೆ.