Online Desk
ನವದೆಹಲಿ: ತಮ್ಮ ಮನೆ ಮೇಲಿನ ಸಿಬಿಐ ದಾಳಿಯಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 2024 ಲೋಕಸಭಾ ಚುನಾವಣೆ ಮೋದಿ, ಕೇಜ್ರಿವಾಲ್ ನಡುವಿನ ಹೋರಾಟ: ಮನೀಶ್ ಸಿಸೋಡಿಯಾ
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಬಕಾರಿ ನೀತಿಯಡಿ ಭ್ರಷ್ಟಾಚಾರ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಆರೋಪಿಯನ್ನಾಗಿ ಮಾಡಿದ್ದರೂ ಸಹ ಈ ಹಗರಣದ ಪ್ರಮುಖ ಸಂಚುಕೋರ ಸಿಎಂ ಅರವಿಂದ್ ಕೇಜ್ರಿವಾಲ್ ಎಂದು ಆಪಾದಿಸಿದರು. ಇದೇ ವೇಳೆ ಮಾತನಾಡಿದ ಸಂಸದ ಮನೋಜ್ ತಿವಾರಿ ಮತ್ತು ಆದೇಶ್ ಗುಪ್ತಾ, ಮನೀಶ್ ಸಿಸೋಡಿಯಾ ಅವರನ್ನು Money SHH ಎಂದು ಕರೆದರು.
ಮದ್ಯ ಹಗರಣದಲ್ಲಿ ಸಿಬಿಐ ದಾಳಿ ಬಳಿಕ ಮನೀಶ್ ಸಿಸೋಡಿಯಾ ಅವರ ಮುಖವಾಡ ಕಳಚಿದೆ ಎಂದು ಹೇಳಿದ ಕೇಂದ್ರ ಸಚಿವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಮನೀಶ್ ಸಿಸೋಡಿಯಾ ಅವರಿಗೆ ಸಾಧ್ಯವಾಗಲಿಲ್ಲ. ನಿಮ್ಮ ಮದ್ಯ ನೀತಿ ಸರಿಯಾಗಿದ್ದರೆ ಅದನ್ನು ವಾಪಸ್ ಪಡೆದುಕೊಂಡಿದ್ದೇಕೆ ಎಂದು ಸಿಎಂ ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸಿದರು. ಸಾರಾಯಿ ನೀತಿ ನಿಯಮಗಳಲ್ಲಿ ಭ್ರಷ್ಟಾಚಾರ ಕಂಡುಬಂದಾಗ ಈ ನೀತಿಯನ್ನು ಕೇಜ್ರಿವಾಲ್ ಸರ್ಕಾರ ಹಿಂಪಡೆದಿದ್ದಾರೆ ಎಂದು ಆರೋಪಿಸಿದರು.