3 ದಿನಗಳಲ್ಲಿ ಹಿಮಾಚಲ ಹಾಗೂ ಇತರ ರಾಜ್ಯಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 50 ಮಂದಿ ಸಾವು!
ನವದೆಹಲಿ: ಕಳೆದ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಒಡಿಶಾದಲ್ಲಿ ತೀವ್ರ ಮುಂಗಾರು ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಶನಿವಾರ ಮಳೆ ಸಂಬಂಧಿತ ಘಟನೆಗಳಲ್ಲಿ 22 ಜನರು ಸಾವನ್ನಪ್ಪಿದ್ದು 12 ಜನರು ಗಾಯಗೊಂಡಿದ್ದಾರೆ. ಮಂಡಿ, ಕಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಾನಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಮಂಡಿಯ ಮಂಡಿ-ಕಟೋಲಾ-ಪ್ರಶಾರ್ ರಸ್ತೆಯ ಬಾಘಿ ನುಲ್ಲಾದಲ್ಲಿ ನಾಪತ್ತೆಯಾದ ಐವರು ಇಂದು ಸಹ ಪತ್ತೆಯಾಗಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಪಿಟಿಐಗೆ ತಿಳಿಸಿದ್ದಾರೆ.
ನಿನ್ನೆ ಈ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದ ನಂತರ ಹಲವಾರು ಕುಟುಂಬಗಳು ಬಾಘಿ ಮತ್ತು ಓಲ್ಡ್ ಕಟೋಲಾ ನಡುವೆ ಇರುವ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿವೆ. ಶೋಘಿ ಮತ್ತು ತಾರಾ ದೇವಿ ನಡುವಿನ ಸೋನು ಬಾಂಗ್ಲಾದಲ್ಲಿ ಭೂಕುಸಿತದ ನಂತರ ಶನಿವಾರ ಸಂಜೆ ಶಿಮ್ಲಾ-ಚಂಡೀಗಢ ಹೆದ್ದಾರಿಯನ್ನು ನಿರ್ಬಂಧಿಸಲಾಗಿದ್ದು ಇಂದು ವಾಹನ ಸಂಚಾರಕ್ಕೆ ತೆರವುಗೊಳಿಸಲಾಗಿದೆ ಎಂದು ಮೋಖ್ತಾ ಹೇಳಿದರು.
ಆದಾಗ್ಯೂ, ಹಲವಾರು ರಸ್ತೆಗಳು, ವಿಶೇಷವಾಗಿ ಮಂಡಿಯಲ್ಲಿ ಇನ್ನೂ ಸಂಚಾರಕ್ಕಾಗಿ ಮುಕ್ತವಾಗಿಲ್ಲ. ಇನ್ನು ಅವಶೇಷಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಸಂತ್ರಸ್ತ ಜಿಲ್ಲೆಗಳಿಗೆ 232.31 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಓಂಕಾರ ಶರ್ಮಾ ತಿಳಿಸಿದ್ದಾರೆ.
ಒಡಿಶಾದ ಎರಡು ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಒಡಿಶಾದ ಬಾಲಸೋರ್ ಮತ್ತು ಮಯೂರ್‌ಭಂಜ್ ಜಿಲ್ಲೆಗಳ ಅಧಿಕಾರಿಗಳು ತಗ್ಗು ಪ್ರದೇಶಗಳಲ್ಲಿ ಬೃಹತ್ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ಪ್ರದೇಶದಲ್ಲಿ ಹರಿಯುವ ಎರಡು ಪ್ರಮುಖ ನದಿಗಳಾದ ಸುವರ್ಣರೇಖಾ ಮತ್ತು ಬೈತರಾಣಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಎನ್‌ಡಿಆರ್‌ಎಫ್, ಒಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಒಳಗೊಂಡ 58 ರಕ್ಷಣಾ ತಂಡಗಳನ್ನು ಬಾಲಸೋರ್ ಮತ್ತು ಮಯೂರ್‌ಬಂಜ್ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕೆ ಜೆನಾ ತಿಳಿಸಿದ್ದಾರೆ, ಪಕ್ಕದ ಭದ್ರಕ್ ಮತ್ತು ಜಾಜ್‌ಪುರ ಜಿಲ್ಲೆಗಳಲ್ಲಿಯೂ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಯಿಂದಾಗಿ ಉತ್ತರ ಒಡಿಶಾದಲ್ಲಿರುವ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟವು ಉಲ್ಬಣಗೊಂಡಿದೆ ಮತ್ತು ನಂತರ ಜಾರ್ಖಂಡ್‌ನಿಂದ ಪ್ರವಾಹದ ನೀರು ಬಿಡುಗಡೆಯಾಗಿದೆ.
ಮಳೆ ಮತ್ತು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ ಆರು ಜೀವಗಳನ್ನು ಬಲಿ ಪಡೆದಿವೆ. ಸಂಬಲ್ಪುರ ಜಿಲ್ಲೆಯ ಕುಚಿಂದಾ ಪ್ರದೇಶದಲ್ಲಿ ಶನಿವಾರ ಎರಡು ಮೃತದೇಹಗಳು ಪತ್ತೆಯಾಗಿದ್ದು, ಶುಕ್ರವಾರ ರಾತ್ರಿ ಗೋಡೆ ಕುಸಿದು ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ