ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಗರಿಷ್ಠ ಯೋಜನೆಗಳು ವಿಳಂಬ: ಸರ್ಕಾರದ ವರದಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಗರಿಷ್ಠ 300 ಯೋಜನೆಗಳು ವಿಳಂಬವಾಗಿದ್ದರೆ, ರೈಲ್ವೆ 119 ಮತ್ತು ಪೆಟ್ರೋಲಿಯಂ ವಲಯದಲ್ಲಿ 90 ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಸರ್ಕಾರದ ವರದಿ ತೋರಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಗರಿಷ್ಠ 300 ಯೋಜನೆಗಳು ವಿಳಂಬವಾಗಿದ್ದರೆ, ರೈಲ್ವೆ 119 ಮತ್ತು ಪೆಟ್ರೋಲಿಯಂ ವಲಯದಲ್ಲಿ 90 ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಸರ್ಕಾರದ ವರದಿ ತೋರಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದ 825 ಯೋಜನೆಗಳ ಪೈಕಿ 300 ಯೋಜನೆಗಳು ವಿಳಂಬವಾಗಿವೆ. ರೈಲ್ವೆಯಲ್ಲಿ 173 ಯೋಜನೆಗಳ ಪೈಕಿ 119 ವಿಳಂಬವಾಗಿವೆ. ಪೆಟ್ರೋಲಿಯಂ ವಿಭಾಗದ 142 ರಲ್ಲಿ 90 ಯೋಜನೆಗಳು ವಿಳಂಬವಾಗಿವೆ ಎಂದು ಜೂನ್ 2022ರ ಮೂಲಸೌಕರ್ಯ ಯೋಜನೆಗಳ ಇತ್ತೀಚಿನ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ.

ಯೋಜನಾ ಅನುಷ್ಠಾನ ಏಜೆನ್ಸಿಗಳು ಆನ್‌ಲೈನ್ ಕಂಪ್ಯೂಟರೈಸ್ಡ್ ಮಾನಿಟರಿಂಗ್ ಸಿಸ್ಟಮ್ (OCMS) ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 150 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ಕೇಂದ್ರದ ಮೂಲಸೌಕರ್ಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಮೂಲಸೌಕರ್ಯ ಮತ್ತು ಪ್ರಾಜೆಕ್ಟ್ ಮಾನಿಟರಿಂಗ್ ವಿಭಾಗ (IPMD) ಕಡ್ಡಾಯವಾಗಿದೆ. ಐಪಿಎಂಡಿಯು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುತ್ತದೆ.

ಭಾರತೀಯ ನಾಭಿಕಿಯಾ ವಿದ್ಯುತ್ ನಿಗಮ್ ಲಿಮಿಟೆಡ್ (ಭಾವಿನಿ) ನಿರ್ಮಿಸುತ್ತಿರುವ 500 ಮೆಗಾವ್ಯಾಟ್ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅತ್ಯಂತ ವಿಳಂಬವಾಗಿರುವ ಯೋಜನೆಯಾಗಿದ್ದು, ಯೋಜನೆ ಪೂರ್ಣಗೊಳಿಸುವಲ್ಲಿ 168 ತಿಂಗಳು ವಿಳಂಬವಾಗಿದೆ ಎಂದು ವರದಿ ತಿಳಿಸಿದೆ.

ಅತ್ಯಂತ ವಿಳಂಬವಾದ ಎರಡನೇ ಯೋಜನೆ ಎಂದರೆ, NHPC ಯ PARBATI-II ಜಲವಿದ್ಯುತ್ ಯೋಜನೆ (4X200 MW). ಈ ಯೋಜನೆಯು 162 ತಿಂಗಳು ವಿಳಂಬವಾಗಿದೆ. 155 ತಿಂಗಳುಗಳ ವಿಳಂಬದೊಂದಿಗೆ NHPC ಯ ಸುಬಾನ್ಸಿರಿ ಲೋವರ್ ಹೈಡ್ರೋಎಲೆಕ್ಟ್ರಿಕ್ ಯೋಜನೆ (8X250 MW) ಅತ್ಯಂತ ವಿಳಂಬವಾದ ಮೂರನೇ ಯೋಜನೆಯಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ವಲಯದ 825 ಯೋಜನೆಗಳ ಅನುಷ್ಠಾನಕ್ಕೆ ಮಂಜೂರಾಗಿರುವ ಒಟ್ಟು ಮೂಲ ವೆಚ್ಛ 4,90,792.42 ಕೋಟಿ ರೂಪಾಯಿ. ಜೂನ್ 2022 ರವರೆಗೆ ಈ ಯೋಜನೆಗಳಿಗೆ 3,21,084.28 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿ ಹೇಳಿದೆ.

ರೈಲ್ವೆ ವಲಯದ 173 ಯೋಜನೆಗಳಿಗೆ ಮಂಜೂರಾದ ಒಟ್ಟು ಮೂಲ ವೆಚ್ಚವು 3,72,761.45 ಕೋಟಿಗಳಷ್ಟಿತ್ತು. ನಂತರ ಅದು 6,12,578.9 ಕೋಟಿ ರೂ.ಗೆ ಏರಿತು. ಇದು ಶೇ 64.3 ರಷ್ಟು ವೆಚ್ಚ ಹೆಚ್ಚಾಗಿದ್ದನ್ನು ಸೂಚಿಸುತ್ತದೆ.

ಪೆಟ್ರೋಲಿಯಂ ವಲಯದಲ್ಲಿ, 142 ಯೋಜನೆಗಳ ಅನುಷ್ಠಾನದ ಒಟ್ಟು ಮೂಲ ವೆಚ್ಚ 3,73,333.65 ಕೋಟಿ ರೂ.ಗಳಾಗಿದ್ದು, ಇದು 3,93,008.38 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಶೇ 5.3 ರಷ್ಟು ವೆಚ್ಚವನ್ನು ಮೀರಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com