ಜಂತರ್ ಮಂತರ್‌ನಲ್ಲಿ ರೈತರ ಮಹಾಪಂಚಾಯತ್‌; ದೆಹಲಿಯ ಗಡಿಯಲ್ಲಿ ಭದ್ರತೆ ಹೆಚ್ಚಿಸಿದ ಪೊಲೀಸರು

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಇತರ ರೈತರ ಗುಂಪುಗಳು ಇಂದು ಜಂತರ್ ಮಂತರ್‌ನಲ್ಲಿ ಮಹಾಪಂಚಾಯತ್ ಅನ್ನು ಮಾಡುತ್ತಿದ್ದು, ದೆಹಲಿಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೆಹಲಿಯ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿರುವ ದೆಹಲಿ ಪೊಲೀಸರು
ದೆಹಲಿಯ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿರುವ ದೆಹಲಿ ಪೊಲೀಸರು

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಇತರ ರೈತರ ಗುಂಪುಗಳು ಇಂದು ಜಂತರ್ ಮಂತರ್‌ನಲ್ಲಿ ಮಹಾಪಂಚಾಯತ್ ಅನ್ನು ಮಾಡುತ್ತಿದ್ದು, ದೆಹಲಿಯ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದ್ದು, ಗಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

ಭಾರಿ ಭದ್ರತೆಯ ನಡುವೆಯೂ ಪ್ರತಿಭಟನೆ ನಡೆಸಲು ರೈತರು ಜಂತರ್ ಮಂತರ್‌ಗೆ ಆಗಮಿಸುತ್ತಿದ್ದಾರೆ. ದೆಹಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಜಂತರ್ ಮಂತರ್‌ಗೆ ತೆರಳುತ್ತಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಗಾಜಿಪುರ ಗಡಿಯಲ್ಲಿ ತಡೆದ ದೆಹಲಿ ಪೊಲೀಸರು, ಬಂಧಿಸಿದ್ದಾರೆ.

'ಸರ್ಕಾರದ ಆದೇಶದಂತೆ ಕೆಲಸ ಮಾಡುವ ದೆಹಲಿ ಪೊಲೀಸರು ರೈತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈ ಬಂಧನ ಹೊಸ ಕ್ರಾಂತಿಯನ್ನು ಹುಟ್ಟುಹಾಕಲಿದೆ. ಕೊನೆಯ ಉಸಿರು ಇರುವವರೆಗೂ ಈ ಹೋರಾಟ ಮುಂದುವರಿಯಲಿದೆ. ನಿಲ್ಲುವುದಿಲ್ಲ, ಸುಸ್ತಾಗುವುದಿಲ್ಲ ಮತ್ತು ತಲೆಬಾಗುವುದಿಲ್ಲ' ಎಂದು ಟಿಕಾಯತ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಬೆಳವಣಿಗೆಗಳು ಇಲ್ಲಿವೆ

- ಕಿಸಾನ್ ಮಹಾಪಂಚಾಯತ್ ಆಗಸ್ಟ್ 22 ರ ಸೋಮವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. 4000 ದಿಂದ 5000 ಜನ ಸೇರುವ ನಿರೀಕ್ಷೆ ಇದೆ.

-ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. 'ಪ್ರತಿಭಟನೆ ನಡೆಸಲು ಅನುಮತಿ ಕೇಳಲಾಗಿತ್ತು. ಆದರೆ ಜನಸಂದಣಿಯಿಂದಾಗಿ ಅವಕಾಶ ನೀಡಿ' ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ತಿಳಿಸಿದ್ದಾರೆ.

-ಎಸ್‌ಕೆಎಂ ಸುಮಾರು 40 ಕೃಷಿ ಸಂಸ್ಥೆಗಳನ್ನು ಒಳಗೊಂಡಿರುವ ಒಂದು ಗುಂಪಾಗಿದ್ದು, ಪ್ರಾಥಮಿಕವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಸರಿಯಾಗಿ ನೀಡುವಂತೆ ಒತ್ತಾಯಿಸುತ್ತದೆ.

-ಜಂತರ್ ಮಂತರ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಈ ಹಿಂದೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದ ಹರಿಯಾಣದ ಸಿಂಘು ಗಡಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

-ಉತ್ತರ ಪ್ರದೇಶದ ಗಾಜಿಯಾಬಾದ್‌ನ ಗಾಜಿಪುರ ಗಡಿ ಸೇರಿದಂತೆ ಹೊರ ಜಿಲ್ಲೆಯ ವ್ಯಾಪ್ತಿಯ ಮೂಲಕ ರೈತರು ಹಾದುಹೋಗುವ ನಿರೀಕ್ಷೆಯಿದೆ. ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಪೊಲೀಸರು ವಾಹನಗಳ ಮೇಲೆ ನಿಗಾ ವಹಿಸಿದ್ದಾರೆ.

-ಮಹಾಪಂಚಾಯತ್‌ನ ದೃಷ್ಟಿಯಿಂದ ದೆಹಲಿ ಪೊಲೀಸರು, ಜಂತರ್ ಮಂತರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದಾರೆ. ತಾವು ಉಲ್ಲೇಖಿಸಿರುವ ರಸ್ತೆಗಳನ್ನು ತಪ್ಪಿಸಿ ಪ್ರಯಾಣಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.

- ಟಾಲ್‌ಸ್ಟಾಯ್ ಮಾರ್ಗ, ಸಂಸದ್ ಮಾರ್ಗ, ಜನಪಥ್, ಔಟರ್ ಸರ್ಕಲ್ ಕನ್ನಾಟ್ ಪ್ಲೇಸ್, ಅಶೋಕ ರಸ್ತೆ, ಬಾಬಾ ಖರಕ್ ಸಿಂಗ್ ಮಾರ್ಗ ಮತ್ತು ಪಂಡಿತ್ ಪಂತ್ ಮಾರ್ಗದಂತಹ ರಸ್ತೆಗಳಲ್ಲಿ ಇಂದು ಜನದಟ್ಟಣೆ ಕಂಡುಬರುವ ಸಾಧ್ಯತೆಯಿದೆ.

ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವುದು, 'ಮುಗ್ಧ' ರೈತರನ್ನು ಜೈಲಿನಿಂದ ಬಿಡುಗಡೆ ಮಾಡುವುದು, ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನಿನ ಕಾತ್ರಿ ನೀಡುವುದು, ವಿದ್ಯುತ್ ತಿದ್ದುಪಡಿ ಮಸೂದೆ 2022, ಕಬ್ಬಿನ ಬಾಕಿ ಪಾವತಿ ಮತ್ತು ರೈತರಿಗೆ ಭೂಮಿಯ ಹಕ್ಕು ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಲಖೀಂಪುರ ನಗರದ ರಾಜಾಪುರ ಮಂಡಿ ಸಮಿತಿಯಲ್ಲಿ ಎಸ್‌ಕೆಎಂ ಧರಣಿ ಆಯೋಜಿಸಿತ್ತು. ಬಳಿಕ ಪ್ರತಿಭಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com