ಬೆಲೆ ಏರಿಕೆ ತಡೆಯಲು ಗೋಧಿ ಹಿಟ್ಟು, ಮೈದಾ, ರವೆ ರಫ್ತಿಗೆ ನಿರ್ಬಂಧ ಹೇರಿದ ಸರ್ಕಾರ!

ಮೇ ತಿಂಗಳಲ್ಲಿ ಗೋಧಿ ರಫ್ತು ನಿಷೇಧಿಸಿದ ನಂತರ, ಹೆಚ್ಚಾಗುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಶನಿವಾರ ಗೋಧಿ ಹಿಟ್ಟು, ಮೈದಾ, ರವೆ ಮತ್ತು ಹೋಲ್‌ಮೀಲ್ ಅಟ್ಟಾ ರಫ್ತುಗಳನ್ನು ನಿಷೇಧಿಸಿದೆ.
ಗೋಧಿ ಹಿಟ್ಟು
ಗೋಧಿ ಹಿಟ್ಟು

ನವದೆಹಲಿ: ಮೇ ತಿಂಗಳಲ್ಲಿ ಗೋಧಿ ರಫ್ತು ನಿಷೇಧಿಸಿದ ನಂತರ, ಹೆಚ್ಚಾಗುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಶನಿವಾರ ಗೋಧಿ ಹಿಟ್ಟು, ಮೈದಾ, ರವೆ ಮತ್ತು ಹೋಲ್‌ಮೀಲ್ ಅಟ್ಟಾ ರಫ್ತುಗಳನ್ನು ನಿಷೇಧಿಸಿದೆ.

ಕೇಂದ್ರ ಸಚಿವ ಸಂಪುಟ ಮತ್ತು ವಿದೇಶ ವ್ಯವಹಾರಗಳ ಮಹಾನಿರ್ದೇಶನಾಲಯವು (DGFT) ನಿರ್ಧಾರ ಕೈಗೊಂಡಿದ್ದು, ಕೆಲವು ಸಂದರ್ಭಗಳಲ್ಲಿ ಭಾರತ ಸರ್ಕಾರದ ಅನುಮತಿಗೆ ಒಳಪಟ್ಟು ಈ ವಸ್ತುಗಳ ರಫ್ತುಗಳಿಗೆ ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಡಿಜಿಎಫ್‌ಟಿಯ ಅಧಿಸೂಚನೆಯ ಪ್ರಕಾರ, ವಸ್ತುಗಳ (ಗೋಧಿ ಅಥವಾ ಮೆಸ್ಲಿನ್ ಹಿಟ್ಟು, ಮೈದಾ, ರವೆ ಮತ್ತು ಫುಲ್‌ಮೀಲ್ ಅಟ್ಟಾ) ರಫ್ತು ನೀತಿಯನ್ನು ನಿಷೇಧಿಸಲಾಗಿದೆ ಎಂದು ತಿದ್ದುಪಡಿ ಮಾಡಲಾಗಿದೆ. ವಿದೇಶಿ ವ್ಯಾಪಾರ ನೀತಿ 2015-20 ರ ಅಡಿಯಲ್ಲಿನ ನಿಬಂಧನೆಗಳು, ಪರಿವರ್ತನೆಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಈ ಅಧಿಸೂಚನೆಯ ಅಡಿಯಲ್ಲಿ ಬರುವುದಿಲ್ಲ ಎಂದು ಅದು ಸೇರಿಸಿದೆ.

ಸರಕುಗಳ ಮೇಲಿನ ಏರುತ್ತಿರುವ ಬೆಲೆಗಳನ್ನು ತಡೆಯಲು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹೇರಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಆಗಸ್ಟ್ 25 ರಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರ ರಾಷ್ಟ್ರಗಳಾಗಿದ್ದು, ಜಾಗತಿಕ ಗೋಧಿ ವ್ಯಾಪಾರದ ಸುಮಾರು ನಾಲ್ಕನೇ ಒಂದು ಭಾಗವನ್ನು ಇವು ಪೂರೈಸುತ್ತವೆ. ಆದರೆ, ಉಭಯ ದೇಶಗಳ ನಡುವಿನ ಯುದ್ಧವು ಜಾಗತಿಕ ಗೋಧಿ ಪೂರೈಕೆ ಸರಪಳಿ ಅಡೆತಡೆ ಉಂಟುಮಾಡಿದೆ. ಹೀಗಾಗಿ, ಭಾರತೀಯ ಗೋಧಿಗೆ ಬೇಡಿಕೆ ಹೆಚ್ಚುತ್ತಿದೆ.

ಇದರಿಂದ ದೇಶೀಯ ಮಾರುಕಟ್ಟೆಯಲ್ಲಿಯೂ ಗೋಧಿ ಬೆಲೆ ಏರಿಕೆಯಾಗಿದೆ. ದೇಶದ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ, ಸರ್ಕಾರವು ಮೇ ತಿಂಗಳಲ್ಲಿ ಗೋಧಿ ರಫ್ತು ನಿಷೇಧಿಸಿತು. ಆದಾಗ್ಯೂ, ಇದು ಗೋಧಿ ಹಿಟ್ಟಿನ ಸಾಗರೋತ್ತರ ಬೇಡಿಕೆಯಲ್ಲಿ ಏರಿಕೆ ಉಂಟುಮಾಡಿತ್ತು.

2021ಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ದೇಶದ ಗೋಧಿ ಹಿಟ್ಟಿನ ರಫ್ತು ಪ್ರಮಾಣದಲ್ಲಿ ಶೇಕಡ 200ರಷ್ಟು ಹೆಚ್ಚಳ ಆಗಿದೆ. ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾದ ನಂತರದಲ್ಲಿ ಅದರ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ಈ ಹಿಂದೆ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿಷೇಧ ಅಥವಾ ಯಾವುದೇ ನಿರ್ಬಂಧವನ್ನು ಹಾಕಬಾರದು ಎಂಬ ನೀತಿ ಇತ್ತು. ಹೀಗಾಗಿ, ದೇಶದ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ದೇಶದ ಆಹಾರ ಭದ್ರತೆಯನ್ನು ಖಾತರಿಪಡಿಸಲು ಈ ನೀತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡುವ ಅಗತ್ಯ ಎದುರಾಯಿತು ಎಂದು ಹೇಳಿಕೆಯು ತಿಳಿಸಿದೆ.

2021–22ನೆಯ ಸಾಲಿನಲ್ಲಿ ದೇಶವು ಒಟ್ಟು ₹ 1,966 ಕೋಟಿ ಮೌಲ್ಯದ ಗೋಧಿ ಹಿಟ್ಟನ್ನು ರಫ್ತು ಮಾಡಿದೆ. ಈ ಆರ್ಥಿಕ ವರ್ಷದ ಏಪ್ರಿಲ್‌–ಜೂನ್ ಅವಧಿಯಲ್ಲಿ ಒಟ್ಟು ₹ 1,023 ಕೋಟಿ ಮೌಲ್ಯದ ಗೋಧಿ ಹಿಟ್ಟು ರಫ್ತು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com